ಮನೋರಂಜನೆ

ತಮಿಳು ನಿರ್ಮಾಪಕರ ಸಂಘದಲ್ಲಿ ಮುಸುಕಿನ ಗುದ್ದಾಟ; ಸಂಘದ ಕಚೇರಿಗೆ ನುಗ್ಗಲು ಯತ್ನಿಸಿದ ನಟ ವಿಶಾಲ್ ಬಂಧನ

Pinterest LinkedIn Tumblr

ಚೆನ್ನೈ: ತಮಿಳು ನಿರ್ಮಾಪಕರ ಸಂಘದಲ್ಲಿ ವಿಶಾಲ್ ಬಣ ಹಾಗೂ ವಿರೋಧಿ ಬಣಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ನಿರ್ಮಾಪಕರ ಸಂಘದ ಕಚೇರಿಗೆ ನುಗ್ಗಲು ಯತ್ನಿಸಿದ ಕಾರಣಕ್ಕೆ ನಟ ವಿಶಾಲ್ ಅವರನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಇಂದು ಬೆಳಿಗ್ಗೆ ತಮಿಳು ಚಿತ್ರರಂಗ ನಿರ್ಮಾಪಕರ ಸಂಘದ ಕಚೇರಿ ಬಳಿ ತಮ್ಮ ಬೆಂಬಲಿಗರೊಂದಿಗೆ ಬಂದಿರುವ ವಿಶಾಲ್ ಅವರು ಕಚೇರಿಯ ಬೀಗ ಒಡೆದು ಒಳ ಪ್ರವೇಶಿಸಲು ಯತ್ನಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೆಲ ಸರ್ಕಾರಿ ಅಧಿಕಾರಿಗಳು ಆಗಮಿಸುತ್ತಿದ್ದು, ಈ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಹೀಗಾಗಿ ಕಾಯುವಂತೆ ತಿಳಿಸಿದ್ದಾರೆ. ಕಾಯಲು ಸಾಧ್ಯವಾಗದಿದ್ದರೆ, ಕಚೇರಿ ಬೀಗದ ಕೀ ತೆಗೆದುಕೊಂಡು ಬಂದು ತೆಗೆಯುವಂತೆ ತಿಳಿಸಿದ್ದಾರೆ. ಇದನ್ನು ಕೇಳದ ವಿಶಾಲ್ ಅವರು ಬೀಗ ಒಡೆಯಲು ಯತ್ನಿಸಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ವಿಶಾಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅನುಚಿತ ವರ್ತನೆ ಹಿನ್ನಲೆಯಲ್ಲಿ ವಿಶಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಶಾಲ್ ಅವರು, ನಾನು ಯಾವುದೇ ರೀತಿಯ ತಪ್ಪುಗಳನ್ನು ಮಾಡಿಲ್ಲ. ನನ್ನ ಕಚೇರಿಯೊಳಗೆ ಪ್ರವೇಶ ಮಾಡಲು ನನಗೆ ಬಿಡುತ್ತಿಲ್ಲ. ಅದನ್ನು ಪ್ರಶ್ನಿಸಿದರೆ, ನಮ್ಮನ್ನು ಬಂಧನಕ್ಕೊಳಪಡಿಸುತ್ತಿದ್ದಾರೆಂದು ಹೇಳಿದ್ದಾರೆ.

ಬಳಿಕ ಮಾತನಾಡಿರುವ ವಿಶಾಲ್ ಅವರ ತಂದೆ ಜೆ.ಕೆ.ರೆಡ್ಡಿಯವರು, ನನ್ನ ಮಗನನ್ನು ನಾನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ತನ್ನ ಬಗ್ಗೆ ತಲೆಕೆಡಿಸಿಕೊಳ್ಳದಂತೆ ತಿಳಿಸಿದ್ದಾರೆ. ನನ್ನ ಮಗ ಒಳ್ಳೆಯದನ್ನು ಮಾಡಲು ಹೊರಟಿದ್ದಾನೆ. ಹೀಗಾಗಿ ಜನರಿಗೆ ಅದು ಇಷ್ಟವಾಗುತ್ತಿಲ್ಲ ಎಂದಿದ್ದಾರೆ.

ಈ ನಡುವೆ ಪ್ರತಿಭಟನಾನಿರತ ನಿರ್ದೇಶಕ ಭಾರತಿರಾಜ, ನಿರ್ಮಾಪಕ ಎ.ಎಲ್. ಅಝಗಪ್ಪನ್ ಹಾಗೂ ಕೆ ರಾಜನ್ ಅವರು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿಯವರನ್ನು ಭೇಟಿ ಮಾಡಿದ್ದು, ಸಮಸ್ಯೆಯನ್ನು ನಿರ್ಮಾಪಕ ಮಂಡಳಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ.

ನಚ ವಿಶಾಲ್ ವಿರುದ್ಧ ಹಣ ದುರುಪಯೋಗದ ಆರೋಪ ಹೊರಿಸಲಾಗಿದ್ದು, ಈ ಹಿನ್ನಲೆಯಲ್ಲಿ ಕೆಲ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments are closed.