ಮನೋರಂಜನೆ

ತಮಿಳು ನಟ ಧನುಷ್ ಅಭಿನಯದ ಮಾರಿ-2 ಜೊತೆ ಕೆಜಿಎಫ್ ಯುದ್ಧ

Pinterest LinkedIn Tumblr


ಬೆಂಗಳೂರು: ಕಾಲಿವುಡ್​ನ ಮಾಸ್ ಹೀರೋ ಧನುಷ್ ಅವರ ಸ್ವಂತ ಬ್ಯಾನರ್ ನಿರ್ಮಾಣದ ಬಹುನಿರೀಕ್ಷೆಯ “ಮಾರಿ-2” ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 21ರಂದು ಮಾರಿ-2 ವಿಶ್ವಾದ್ಯಂತ ಬಿಡುಗಡೆಯಾಗುತ್ತಿರುವುದಾಗಿ ಧನುಷ್ ಅವರೇ ಪ್ರಕಟಿಸಿದ್ದಾರೆ. ಇದರೊಂದಿಗೆ ಕನ್ನಡದ ಬಹುಭಾಷಾ ಸಿನಿಮಾ ಕೆಜಿಎಫ್ ಮತ್ತು ಮಾರಿ-2 ಸಿನಿಮಾಗಳು ಒಂದೇ ವಾರ ರಿಲೀಸ್ ಆಗುವಂತಾಗಿದೆ. ಯಶ್ ಅಭಿನಯದ ಕೆಜಿಎಫ್ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ತಮಿಳು ಭಾಷೆಯಲ್ಲೂ ಡಬ್ ಆಗಿರುವ ಈ ಸಿನಿಮಾ ತಮಿಳುನಾಡಿನಲ್ಲಿ ಸಕ್ಸಸ್ ಕಾಣುವ ಎಲ್ಲಾ ಫಾರ್ಮುಲಾ ಹೊಂದಿದೆ ಎನ್ನಲಾಗಿದೆ. ಆದರೆ, ಡಿ. 21ರಂದೇ ಧನುಷ್ ನಿರ್ಮಾಣದ ಸಿನಿಮಾ ಕೂಡ ತೆರೆಗೆ ಬರುತ್ತಿದ್ದು, ಈ ಸ್ಪರ್ಧೆ ಎದುರಿಸಿ ಕೆಜಿಎಫ್ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬ ಕುತೂಹಲವಿದೆ.

ಮಾರಿ-2 ಒಂದು ಗ್ಯಾಂಗ್ಸ್​ಟರ್ ಸಿನಿಮಾವಾಗಿದ್ದು, ಹುರಿಮೀಸೆಯೊಂದಿಗೆ ಧನುಷ್ ಇರುವ ಚಿತ್ರದ ಪೋಸ್ಟರ್ ಸಾಕಷ್ಟು ವೈರಲ್ ಆಗಿದೆ. ಆದರೆ, 2015ರಲ್ಲಿ ತೆರೆಕಂಡ “ಮಾರಿ” ಮೊದಲ ಆವೃತ್ತಿಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚೇನೂ ಸದ್ದು ಮಾಡಲಿಲ್ಲ. ಬಾಲಾಜಿ ಮೋಹನ್ ಅವರೇ ಸೀಕ್ವೆಲ್ ನಿರ್ದೇಶನ ಮಾಡಿದ್ದು, ಎರಡನೇ ಭಾಗವು ಮೊದಲ ಭಾಗಕ್ಕಿಂತ ವಿಭಿನ್ನವಾಗಿರಬಹುದೆಂಬ ನಿರೀಕ್ಷೆಇದೆ.

ಇತ್ತ, ಯಶ್ ಅವರು ಬಹಳಷ್ಟು ಪರಿಶ್ರಮ ಪಟ್ಟು ಕೆಜಿಎಫ್ ಸಿನಿಮಾ ಮಾಡಿದ್ದಾರೆ. ಈ ಒಂದು ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳುವವರೆಗೂ ಯಶ್ ಅವರು ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಅಷ್ಟರಮಟ್ಟಿಗೆ ಅವರು ಕೆಜಿಎಫ್​ಗಾಗಿ ಯಶ್ ಸಕಲವನ್ನೂ ಮುಡಿಪಾಗಿಟ್ಟಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಹೀಗೆ ಒಟ್ಟು 5 ಭಾಷೆಗಳಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್​ಗಳಂತೂ ಈಗಾಗಲೇ ಜೋರು ಸದ್ದು ಮಾಡುತ್ತಿವೆ. ಕನ್ನಡ ಸಿನಿಮಾ ಮಟ್ಟಿಗೆ ಹೊಸ ಸ್ತರದಲ್ಲಿ ಚಿತ್ರದ ಮಾರ್ಕೆಟಿಂಗ್ ಮಾಡಲಾಗುತ್ತಿದೆ. ತಮಿಳುನಾಡಿನ ಸ್ಟಾರ್ ನಟ ವಿಶಾಲ್ ಕೂಡ ತುಂಬ ಹೃದಯದಿಂದ ಯಶ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ಇಡೀ ರಾಷ್ಟ್ರದ ಕಣ್ಣು ಬೀಳುವಂತೆ ಕೆಜಿಎಫ್ ಸದ್ದು ಮಾಡುತ್ತಾ ನಿರೀಕ್ಷೆ ಹುಟ್ಟಿಸಿದೆ.

Comments are closed.