ಕ್ರೀಡೆ

ಕ್ರಿಕೆಟಿಗ ಗೌತಮ್ ಗಂಭೀರ್ ನಿವೃತ್ತಿ ಘೋಷಣೆ

Pinterest LinkedIn Tumblr


ಬೆಂಗಳೂರು: ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಡಿ. 6ರಂದು ಪ್ರಾರಂಭವಾಗುವ ದೆಹಲಿ ವರ್ಸಸ್ ಆಂಧ್ರದ ನಡುವಿನ ರಣಜಿ ಪಂದ್ಯವೇ ಅವರ ವಿದಾಯದ ಮ್ಯಾಚ್ ಆಗಿರಲಿದೆ. ಈ ವಿಚಾರವನ್ನು ಗಂಭೀರ್ ಅವರು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಎರಡು ವರ್ಷದ ಹಿಂದೆ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಅದಾದ ನಂತರ ಅವರ ಆಟ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್​ಗಷ್ಟೇ ಸೀಮಿತವಾಗಿದೆ.

1999ರಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಗೌತಮ್ ಗಂಭೀರ್ ಈವರೆಗೆ 58 ಟೆಸ್ಟ್ ಪಂದ್ಯಗಳನ್ನಾಡಿ 41.95 ಸರಾಸರಿಯಲ್ಲಿ 4,154 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 22 ಅರ್ಧಶತಕಗಳಿವೆ. ಇನ್ನು, ಏಕದಿನ ಕ್ರಿಕೆಟ್​ನಲ್ಲಿ 147 ಪಂದ್ಯಗಳನ್ನಾಡಿರುವ ಅವರು 5,238 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 39.68 ಸರಾಸರಿ ಹೊಂದಿದ್ದಾರೆ. 11 ಶತಕ ಹಾಗೂ 34 ಅರ್ಧಶತಕಗಳನ್ನ ಭಾರಿಸಿದ್ದಾರೆ.

37 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನ ಆಡಿರುವ ಗಂಭೀರ್ 27.41 ಸರಾಸರಿಯಲ್ಲಿ 932 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳಿವೆ.

ಒಟ್ಟಾರೆ ಟಿ20ಯಲ್ಲಿ 251 ಪಂದ್ಯವಾಡಿದ್ದು 6 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬರೋಬ್ಬರಿ 53 ಅರ್ಧಶತಕ ಭಾರಿಸಿದ್ದಾರೆ.

2008 ಮತ್ತು 2011ರ ವಿಶ್ವಕಪ್​ಗಳಲ್ಲಿ ಭಾರತದ ಪರ ಗೌತಮ್ ಗಂಭೀರ್ ಅದ್ವಿತೀಯ ಪ್ರದರ್ಶನ ನೀಡಿದ್ದರು. ದೆಹಲಿ ರಾಜ್ಯ ತಂಡದ ನಾಯಕರಾಗಿ ಅವರು ಅನೇಕ ಗೆಲುವುಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹಾಗೆಯೇ, ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಐಪಿಎಲ್ ತಂಡಗಳ ನಾಯಕನಾಗಿಯೂ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್​ನಲ್ಲಿ ಎಸ್ಸೆಕ್ಸ್ ಕೌಂಟಿ ತಂಡದ ಪರವಾಗಿಯೂ ಅವರು ಆಡಿದ್ದಾರೆ.

ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಗಂಭೀರ್ ಅವಿರತ ಪ್ರಯತ್ನ ಮಾಡುತ್ತಿದ್ದರು. ಆದರೆ, ಸತತ ವೈಫಲ್ಯ, ಅಸ್ಥಿರ ಬ್ಯಾಟಿಂಗ್ ಪ್ರದರ್ಶನಗಳು ಅವರ ಮುನ್ನಡೆಗೆ ತಡೆಯಾಗಿದ್ದವು. 2014ರ ಐಪಿಎಲ್​ನಲ್ಲಿ ಅವರ ನಿರಾಶಾದಾಯಕ ಪ್ರದರ್ಶನವು ಅವರ ವೃತ್ತಿಬದುಕಿನ ವೈಫಲ್ಯ ಸರಣಿಗೆ ನಾಂದಿ ಹಾಡಿತು. ಕಳೆದ ಸೀಸನ್​ನ ಐಪಿಎಲ್​ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನವೂ ವಿಫಲವಾಯಿತು. ಈ ನೋವನ್ನು ಅವರು ಟ್ವಿಟ್ಟರ್​ನಲ್ಲಿ ತೋಡಿಕೊಂಡಿದ್ದಾರೆ.

Comments are closed.