ಕರ್ನಾಟಕ

ಸಾಲಮನ್ನಾ ವ್ಯಾಪ್ತಿಗೆ ಬರುವ ರೈತರು ಯಾರು?

Pinterest LinkedIn Tumblr


ಬೆಂಗಳೂರು: ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಎಂಟು ತಿಂಗಳುಗಳು ಕಳೆದಿವೆ. ಅಧಿಕಾರರಕ್ಕೆ ಬಂದ ಕೂಡಲೇ 15 ದಿನಗಳಲ್ಲಿ ಸಾಲಾ ಮನ್ನಾ ಮಾಡುವ ಭರವಸೆಯನ್ನು ಸಿಎಂ ನೀಡಿದರು. ಆದರೆ, ಈ ಭರವಸೆ ಭರವಸೆಯಾಗೇ ಇಂದಿಗೂ ಉಳಿದಿದೆ. ರೈತರು ಮಾತ್ರ ಸಾಲ ಮನ್ನಾ ಯಾವಾಗ ಅಂತ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರ ಹಣ ನೀಡದಿದ್ದರೂ, ಸಾಲಮನ್ನಾ ಮಡುತ್ತೇವೆ ಎಂದು ಕುಮಾರಸ್ವಾಮಿಯವರು ಇಂದು ಕೂಡ ತಿಳಿಸಿದ್ದಾರೆ. ಹೀಗಾಗಿ ಸಾಲ ಮನ್ನಾಗೆ ರೈತರು ಇನ್ನೂ ಒಂದಷ್ಟು ಕಾಯಲೇಬೇಕಿದೆ. ಅಂದಹಾಗೆ ಸಾಲಮನ್ನಾ ಪ್ರಕ್ರಿಯೆ ಹೇಗೆ, ಸಾಲಮನ್ನಾ ವ್ಯಾಪ್ತಿಗೆ ಬರುವ ರೈತರು ಯಾರು? ಎಂಬುದು ಇಲ್ಲಿದೆ ನೋಡಿ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ರೈತರ ಸಾಲಮನ್ನಾ ವಿಚಾರ ಮುನ್ನೆಲೆಗೆ ಬಂದಿತ್ತು. ಈ ವೇಳೆ ಹೋರಾಟ ತೀವ್ರಗೊಂಡ ಕೂಡಲೇ ಎಚ್ಚೆತ್ತ ಸಿಎಂ ಕುಮಾರಸ್ವಾಮಿ ಅವರು, ವಿಧಾನಸೌಧದಲ್ಲಿ ರೈತರ ಜೊತೆ ಸಭೆಯನ್ನು ಮಾಡಿದ್ರು. ಅವತ್ತು ನನಗೆ 15 ದಿನ ಸಮಯ ಕೊಡಿ, ರೈತರ ಸಾಲ ಮನ್ನಾ ಘೋಷಣೆ ಮಾಡುತ್ತೇನೆ ಎಂದಿದ್ದರು. ಆದರೆ ಎಂಟು ತಿಂಗಳಾದರೂ ಸಾಲಮನ್ನಾ ಆಗಿಲ್ಲ. ಹಾಗಂತ ಸಾಲಮನ್ನಾ ಪ್ರಕ್ರಿಯೆ ನಿಂತಿಲ್ಲ. ಯಾವ ರೀತಿ ಸಾಲಮನ್ನಾ ಮಾಡಬೇಕು. ಎಷ್ಟು ಮಾಡಬೇಕು. ಯಾವ ರೈತರ ಸಾಲ ಮನ್ನಾ ಮಾಡಬೇಕು. ಹೇಗೆ ಹಣ ಹೊಂದಿಸಬೇಕು ಎನ್ನುವುದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ.

ಎಷ್ಟು ಸಾಲ ಮನ್ನಾ ಆಗತ್ತೆ ಗೊತ್ತಾ?:

ರೈತರ 54 ಸಾವಿರ ಕೋಟಿ ರೂಪಾಯಿ ಸಾಲ ಬಾಕಿ ಇದೆ. ಈ ಎಲ್ಲ ಸಾಲ ಮನ್ನಾ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಹೀಗಾಗಿ 22 ಸಾವಿರ ಕೋಟಿ ರೂಪಾಯಿ ಮಾತ್ರ ಸಾಲ ಮನ್ನಾ ಆಗಲಿದೆ ಎನ್ನಲಾಗಿದೆ.

ಯಾವ ರೈತರ ಸಾಲ ಮನ್ನಾ ಆಗಲಿದೆ?:

ರೈತರ ಬೆಳೆ ಸಾಲ ಮಾತ್ರ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದಕ್ಕಾಗಿ ಅರ್ಹರು ಯಾರು ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಸರ್ಕಾರ ಈಗಾಗಲೇ ಸಮಿತಿಯನ್ನು ಕೂಡ ರಚಿಸಿದೆ. ಇದೀಗ ಅಧಿಕಾರಿಗಳಿಂದಲೇ ಮಾಹಿತಿ ಪಡೆದಿರುವ ಸಿಎಂ ಸಾಲಮನ್ನಾ ವ್ಯಾಪ್ತಿಗೆ ಬರುವ ರೈತರ ಬಗ್ಗೆ ನಿರ್ಧರಿಸಿದ್ಧಾರೆ.

ಅರ್ಹರಲ್ಲದ ಸಾಲಗಾರರು ಯಾರು?:

ದೊಡ್ಡಮೊತ್ತದ ತೆರಿಗೆ ಕಟ್ಟುತ್ತಿರುವ ರೈತರು, ಆರ್ಥಿಕವಾಗಿ ಸಬಲರಾಗಿರುವ ರೈತರು, ಕೇಂದ್ರ, ರಾಜ್ಯ ಸರ್ಕಾರ, ಅರೆ ಸರ್ಕಾರಿ, ಅನುದಾನಿತ ನೌಕರರು, ದೊಡ್ಡಮಟ್ಟದ ಜಮೀನ್​ದಾರರು, ಸಾರ್ವಜನಿಕ ಸ್ವಾಮ್ಯಸಂಸ್ಥೆ ನೌಕರರು, ಮಾಸಿಕ ರೂ 15,000 ರೂ. ಅಥವಾ ಅತೀ ಹೆಚ್ಚು ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು, ಸರ್ಕಾರಿ ಬ್ಯಾಂಕ್​ಗಳಲ್ಲಿ ಈಗಾಗಲೇ ಸಾಲಮನ್ನಾದ ಲಾಭ ಪಡೆದಿರುವ ಫಲಾನುಭವಿಗಳು ಎಂದು ನವೆಂಬರ್​​.30 ರಂದು ಸರ್ಕಾರವೇ ಪ್ರಕಟಿಸಿದೆ. ಉದ್ದಿಮೆದಾರರು ಮತ್ತು ಉದ್ಯೋಗಿಗಳಾಗಿರುವ ರೈತರ ಸಾಲವನ್ನು ಮನ್ನಾ ಮಾಡುವ ಪಟ್ಟಿಯಿಂದ ಹೊರಗಿಡಲು ಈ ಮೂಲಕ ತೀರ್ಮಾನಿಸಲಾಗಿರುವುದು ಸ್ಪಷ್ಟವಾಗಿದೆ.

ಸಣ್ಣ, ಮಧ್ಯಮ ವರ್ಗದ ರೈತರಿಗೆ ಬಂಪರ್​!

ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸಾಲಮನ್ನಾದ ಲಾಭ ಸಿಗಲಿದೆ. 2009 ಏಪ್ರಿಲ್​ನಿಂದ 2017ರ ಡಿಸೆಂಬರ್​ 31ರ ನಡುವಿನಲ್ಲಿ ರೈತರು ಮಾಡಿರುವ ಬೆಳೆಸಾಲ ಮನ್ನಾ ಆಗಲಿದೆ. ಈ ಎಲ್ಲ ರೈತರ ಸಾಲದ ಮೊತ್ತವನ್ನ ಕಲೆ ಹಾಕಿ, ಸುಮಾರು 22 ಸಾವಿರ ಕೋಟಿ ರೂಪಾಯಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಲ್ಲದೇ ದೊಡ್ಡ ಮೊತ್ತದ ಸಾಲ ಇದ್ದಲ್ಲಿ ಅದನ್ನ ಒನ್​ಟೈಮ್ ಸೆಟ್ಲ್​ಮೆಂಟ್​ ಮಾಡಿಸುವುದರ ಬಗ್ಗೆಯೂ ಸಿಎಂ, ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.

22 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದು ಕೂಡ ಸರ್ಕಾರದ ಬೊಕ್ಕಸಕ್ಕೆ ಹೊರೆಯೇ ಆಗಲಿದೆ. ಅದಕ್ಕಾಗಿಯೇ ಬ್ಯಾಂಕ್​ನವರ ಜೊತೆ ಸಿಎಂ ಮಾತುಕತೆ ನಡೆಸಲಿದ್ದಾರೆ. ಸಾಲ ಮನ್ನಾ ಮಾಡಿದರೂ, ಸರ್ಕಾರದಿಂದ ಬ್ಯಾಂಕ್​ಗಳಿಗೆ ಒಂದೇ ಕಂತಿನಲ್ಲಿ ಹಣ ಪಾವತಿ ಆಗಲ್ಲ. ಮೂರು ಹಂತದಲ್ಲಿ ಬ್ಯಾಂಕ್​ಗೆ ಹಣ ಪಾವತಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಹತ್ತು ಸಾವಿರ ಕೋಟಿ, ಎರಡು ಹಾಗೂ ಮೂರನೆ ಹಂತದಲ್ಲಿ ತಲಾ 6 ಸಾವಿರ ಕೋಟಿ ಪಾವತಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ.

Comments are closed.