ಮನೋರಂಜನೆ

ಲೈಂಗಿಕ ಕಿರುಕುಳ ಪರಿಹಾರಕ್ಕೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ: ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಭಾರೀ ರಿಲೀಫ್

Pinterest LinkedIn Tumblr


ಹೊಸದಿಲ್ಲಿ : ಮಾಜಿ ಭುವನ ಸುಂದರಿ, ಬಾಲಿವುಡ್‌ ನಟಿ, ಸುಶ್ಮಿತಾ ಸೇನ್‌ 2004ರಲ್ಲಿ ಬಹು ರಾಷ್ಟ್ರೀಯ ಲಘು ಪಾನೀಯ ಕಂಪೆನಿಯೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪಾವತಿಸಿದ್ದ 95 ಲಕ್ಷ ರೂ. ಪರಿಹಾರದ ಮೇಲೆ ಆಕೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ತೀರ್ಪು ನೀಡುವ ಮೂಲಕ ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ (ITAT) ಭಾರೀ ದೊಡ್ಡ ರಿಲೀಫ್ ನೀಡಿದೆ.

ಮಾತ್ರವಲ್ಲದೆ ತನಗೆ ಪರಿಹಾರವಾಗಿ ಸಿಕ್ಕಿದ್ದ 95 ಲಕ್ಷ ರೂ.ಗಳನ್ನು ಐಟಿ ರಿಟರ್ನ್ ನಲ್ಲಿ ತೋರಿಸದೆ ಬಚ್ಚಿಟ್ಟ ಕಾರಣಕ್ಕೆ ಸುಶ್ಮಿತಾಗೆ ಆದಾಯ ತೆರಿಗೆ ಆಯುಕ್ತರು ವಿಧಿಸಿದ್ದ 35 ಲಕ್ಷ ರೂ. ದಂಡವನ್ನು ಕೂಡ ನ್ಯಾಯ ಮಂಡಳಿ (ITAT) ಮಾಫಿ ಮಾಡಿದೆ.

ಸುಶ್ಮಿತಾ ಅವರಿಗೆ ಯಾವ ಕಾರಣಕ್ಕೆ (ಲೈಂಗಿಕ ಕಿರುಕುಳ) ಬಹುರಾಷ್ಟ್ರೀಯ ಲಘು ಪಾನೀಯ ಕಂಪೆನಿಯಿಂದ 95 ಲಕ್ಷ ರೂ. ಪರಿಹಾರ ಸಿಕ್ಕಿತೆಂಬುದನ್ನು ವಾಸ್ತವತೆಗೆ ಮಹತ್ವ ನೀಡಿ ಪರಾಮರ್ಶಿಸುವಲ್ಲಿ ಆದಾಯ ತೆರಿಗೆ ಆಯುಕ್ತರು ತಪ್ಪೆಸಗಿದ್ದಾರೆ ಎಂದು ನ್ಯಾಯ ಮಂಡಳಿ ಹೇಳಿತು.

ಬಹು ರಾಷ್ಟ್ರೀಯ ಲಘು ಪಾನೀಯ ಕಂಪೆನಿಯ ಹಿರಿಯ ಎಕ್ಸಿಕ್ಯುಟಿವ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಸುಶ್ಮಿತಾ ಸೇನ್‌ ಗೆ ಆ ಕಂಪೆನಿಯಿಂದ 2003-04ರಲ್ಲಿ 1.45 ಕೋಟಿ ರೂ. ಪರಿಹಾರ ಪಾವತಿಯಾಗಿತ್ತು.

ಇದರಲ್ಲಿ ಗುತ್ತಿಗೆ ಮೊತ್ತ 50 ಲಕ್ಷ ರೂ. ಮತ್ತು ಪರಿಹಾರ ಮೊತ್ತ 95 ಲಕ್ಷ ರೂ. ಸೇರಿತ್ತು. ಆದರೆ ಸೇನ್‌ ಅವರು ಗುತ್ತಿಗೆ ಮೊತ್ತವಾದ 50 ಲಕ್ಷ ರೂ. ಗಳನ್ನು ಮಾತ್ರವೇ ರಿಟರ್ನ್ಸ್ ನಲ್ಲಿ ಆದಾಯವಾಗಿ ತೋರಿಸಿದ್ದರು. ಲೈಂಗಿಕ ಕಿರುಕುಳ ಪರಿಹಾರವಾಗಿ ಪಾವತಿಸಲಾಗಿದ್ದ 95 ಲಕ್ಷ ರೂ.ಗಳನ್ನು ರಿಟರ್ನ್ ನಲ್ಲಿ ತೋರಿಸಿರಲಿಲ್ಲ.

ಆದಾಯ ತೆರಿಗೆ ಆಯುಕ್ತರು 95 ಲಕ್ಷ ರೂ. “ಆದಾಯ’ದ ಮೇಲೆ ಸುಶ್ಮಿತಾ ತೆರಿಗೆ ಪಾವತಿಸದೆ ಅದನ್ನು ಬಚ್ಚಿಟ್ಟಿದ್ದ ಆರೋಪದ ಮೇಲೆ 35 ಲಕ್ಷ ರೂ. ದಂಡ ವಿಧಿಸಿದ್ದರು.

ಆದರೆ ಐಟಿಎಟಿ, ಸುಶ್ಮಿತಾಗೆ ಸಿಕ್ಕಿದ 95 ಲಕ್ಷ ರೂ. ಗುತ್ತಿಗೆ ಆದಾಯ ಅಲ್ಲ; ಲೈಂಗಿಕ ಕಿರುಕುಳ ಸಾಬೀತಾದ ಕಾರಣಕ್ಕೆ ದೊರಕಿದ ಪರಿಹಾರ ಮೊತ್ತ ಅದಾಗಿದೆ; ಆದುದರಿಂದ ಆ ಮೊತ್ತವು ಆಕೆಯ ಸಂಪಾದಿತ ಆದಾಯವಲ್ಲ ಎಂದು ಹೇಳಿ ಆಕೆಗೆ ಬಹುದೊಡ್ಡ ರಿಲೀಫ್ ಕೊಟ್ಟಿತು.

Comments are closed.