
ತಿರುವನಂತಪುರಂ: ಮಹಿಳೆಯರ ಪ್ರವೇಶ ನಿರ್ಬಂಧದಿಂದ ವಿವಾದಕ್ಕೊಳಗಾಗಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬಂದ ಭಕ್ತರಿಗೆ ಈಗ ದೇಹಬಾಧೆ ತೀರಿಸಿಕೊಳ್ಳುವ ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಕ್ತರಿಗೆ ಈ ಬಾರಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಇದೆ. ಶೌಚಾಲಯವಿದ್ದರೂ ನೀರಿಲ್ಲದೆ ಗಬ್ಬೆದ್ದು ಹೋಗಿದೆ. ಜನರು ನದಿ ನೀರನ್ನೇ ಬಳಕೆ ಮಾಡುವ ಪರಿಸ್ಥಿತಿ ಬಂದಿದೆ. ಸಾರ್ವಜನಿಕ ಪಾಯಿಖಾನೆಯಿಂದ ಹೊರಬಂದ ಮಲಮೂತ್ರಗಳು ಪಂಪಾ ನದಿ ಸೇರುತ್ತಿವೆ. ಪರಿಣಾಮವಾಗಿ, ಪವಿತ್ರವೆನ್ನಲಾದ ಪಂಪಾ ನದಿ ಮಲಿನಗೊಳ್ಳುತ್ತಿದೆ. ನದಿಯಲ್ಲಿ ಮಿಂದೇಳುವ ಅಯ್ಯಪ್ಪ ಭಕ್ತರ ಆರೋಗ್ಯಕ್ಕೆ ಅಪಾಯವಿದೆ. ಇದಕ್ಕೆಲ್ಲಾ ಕಾರಣ ಕೇರಳ ಸರಕಾರದ ದಿವ್ಯ ನಿರ್ಲಕ್ಷ್ಯವೆನ್ನಲಾಗಿದೆ. ಕೇರಳದ ಆಡಳಿತವು ಅಯ್ಯಪ್ಪ ಭಕ್ತರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ. ಈ ವಿಚಾರವನ್ನು ಕೈಗೆತ್ತಿಕೊಂಡಿರುವ ಕೇರಳ ಮಾನವ ಹಕ್ಕು ಆಯೋಗವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಯ್ಯಪ್ಪ ಭಕ್ತರಿಗೆ ಕೂಡಲೇ ಎಲ್ಲಾ ವ್ಯವಸ್ಥೆ ಮಾಡುವಂತೆ ಟ್ರಾವನ್ಕೋರ್ ದೇವಸ್ವೋಮ್ ಬೋರ್ಡ್, ಡಿಜಿಪಿ ಮತ್ತು ಸ್ಥಳೀಯ ಸ್ವ ಆಡಳಿತ ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಅಯ್ಯಪ್ಪ ಸನ್ನಿದಾನದಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸ್ ಸಿಬ್ಬಂದಿಗೂ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿಲ್ಲ. ದೇಗುಲದ ವ್ಯಾಪ್ತಿಯಲ್ಲಿರುವ ಚೆಂಗನ್ನೂರ್ ಪಂಚಾಯಿತಿ, ನಿಲಕಲ್ ಪಂಚಾಯಿತಿ ಹಾಗೂ ದೇವಸ್ವೋಮ್ ಮಂಡಳಿಯ ಅಧಿಕಾರಿಗಳು ಭಕ್ತರ ಬಗ್ಗೆ ಅಸಡ್ಡೆಯ ಧೋರಣೆ ಹೊಂದಿದ್ದಾರೆ. ಕಣ್ಣೆದುರೇ ಸ್ಪಷ್ಟವಾಗಿ ಮಾನವ ಹಕ್ಕು ಉಲ್ಲಂಘನೆ ಆಗುತ್ತಿದ್ದರೂ ಜಾಣಗುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಮಾನವ ಹಕ್ಕು ಆಯೋಗ ಟೀಕಿಸಿದೆ. ಮಹಿಳೆಯರ ಪ್ರವೇಶದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಲು ಭಕ್ತರು ಬಿಡುತ್ತಿಲ್ಲವೆಂದು ಕೇರಳ ಸರಕಾರ ಈ ರೀತಿ ಪರೋಕ್ಷವಾಗಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಭಕ್ತರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ನವೆಂಬರ್ 16ರಿಂದ ಅಯ್ಯಪ್ಪಸ್ವಾಮಿ ದೇವರ ದರ್ಶನಕ್ಕೆ ಶಬರಿಮಲೆ ದೇಗುಲದ ಬಾಗಿಲು ತೆರೆದಿದೆ. ಇಲ್ಲಿ ಸಾಂಪ್ರದಾಯಿಕವಾಗಿ 10-50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ. ಇತ್ತೀಚೆಗಷ್ಟೇ ಸುಪ್ರೀಮ್ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಆದರೆ, ಸುಪ್ರೀಂ ಆದೇಶವನ್ನು ಜಾರಿಗೆ ತರಲು ಯತ್ನಿಸುತ್ತಿರುವ ಕೇರಳ ಸರಕಾರಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಅಯ್ಯಪ್ಪ ದೇಗುಲದ ಪರಂಪರೆಗೆ ಧಕ್ಕೆ ತರಲಾಗುತ್ತಿದೆ ಎಂದು ಅಯ್ಯಪ್ಪ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ, ಆರೆಸ್ಸೆಸ್ ಸಂಘಟನೆಗಳೂ ಕೂಡ ಭಕ್ತರ ಬೆಂಬಲಕ್ಕೆ ನಿಂತಿವೆ. ಸುಪ್ರೀಂ ಆದೇಶ ಜಾರಿಯಲ್ಲಿ ಕೇರಳ ಸರಕಾರ ಆತುರ ತೋರುತ್ತಿದೆ ಎಂದು ಕಾಂಗ್ರೆಸ್ ಪಕ್ಷವೂ ವಿರೋಧ ಮಾಡುತ್ತಿದೆ. ಸುಪ್ರೀಂ ಆದೇಶದ ಬೆನ್ನಲ್ಲೇ ದೇಗುಲ ಪ್ರವೇಶಿಸಲು ಅನೇಕ ಮಹಿಳೆಯರು ಪ್ರಯತ್ನಿಸಿದರೂ ಅಯ್ಯಪ್ಪ ಭಕ್ತರು ಬಂಡೆಯಂತೆ ನಿಂತ ತಡೆಯೊಡ್ಡುತ್ತಿದ್ದಾರೆ. ಯಾವುದೆ ಕಾರಣಕ್ಕೂ 10-50 ವರ್ಷದ ಮಹಿಳೆಯರನ್ನು ದೇಗುಲದ ಒಳಕ್ಕೆ ಹೋಗಲು ಬಿಡುವುದಿಲ್ಲವೆಂದು ಹಠ ಹಿಡಿದಿದ್ದಾರೆ.
Comments are closed.