ಮನೋರಂಜನೆ

ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದಲ್ಲಿ ವೆಬ್‌ ಸೀರಿಸ್‌

Pinterest LinkedIn Tumblr

ಶಿವರಾಜಕುಮಾರ್‌ ಅವರ ಶ್ರೀಮುತ್ತು ಸಿನಿ ಸರ್ವಿಸ್‌ ಬ್ಯಾನರ್‌ನಡಿ ಅವರ ಮಗಳು ನಿವೇದಿತಾ ವೆಬ್‌ ಸೀರಿಸ್‌ವೊಂದನ್ನು ನಿರ್ಮಿಸಲಿದ್ದಾರೆಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇತ್ತು. ಈಗ ಬಹುತೇಕ ಎಲ್ಲವೂ ಅಂತಿಮವಾಗಿದ್ದು, ವೆಬ್‌ ಸೀರಿಸ್‌ಗೆ “ಹೇಟ್‌ ಯು ರೋಮಿಯೋ’ ಎಂದು ಹೆಸರಿಡಲಾಗಿದೆ.

ಈ ಹಿಂದೆ “ಲೂಸ್‌ ಕನೆಕ್ಷನ್‌’ ವೆಬ್‌ ಸೀರಿಸ್‌ ಅನ್ನು ನಿರ್ದೇಶಿಸಿರುವ ಹಸೀನ್‌ ಖಾನ್‌ ಹಾಗೂ ಇಶಾಮ್‌ ಖಾನ್‌ “ಹೇಟ್‌ ಯು ರೋಮಿಯೋ’ ವೆಬ್‌ ಸೀರಿಸ್‌ ಅನ್ನು ನಿರ್ದೇಶಿಸಲಿದ್ದಾರೆ. ಈ ವೆಬ್‌ ಸೀರಿಸ್‌ನಲ್ಲಿ ಅರವಿಂದ್‌ ಅಯ್ಯರ್‌ ನಾಯಕರಾಗಿ ನಟಿಸುತ್ತಿದ್ದಾರೆ. “ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಬೆಳಕಿಗೆ ಬಂದ ಅರವಿಂದ್‌ ಸದ್ಯ, “ಭೀಮಸೇನ ನಳಮಹಾರಾಜ’ ಚಿತ್ರದಲ್ಲಿ ನಟಿಸಿದ್ದಾರೆ.

ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆನ್‌ಲೈನ್‌ನಲ್ಲಿ ಖ್ಯಾತಿ ಹೊಂದಿರುವ ಕನ್ನಡದ ಹುಡುಗಿಯೊಬ್ಬರು ಈ ವೆಬ್‌ ಸೀರಿಸ್‌ಗೆ ನಾಯಕಿಯಾಗಿದ್ದಾಗಿ ಹೇಳುವ ವೆಬ್‌ ಸೀರಿಸ್‌ ತಂಡ, ಸದ್ಯ ಅವರ ಹೆಸರನ್ನು ರಹಸ್ಯವಾಗಿಟ್ಟಿದೆ. ತಂಡ ಹೇಳುವಂತೆ ಭಾರತದಲ್ಲೇ ಅತಿ ದೊಡ್ಡ ವೆಬ್ ಸೀರಿಸ್‌ ಇದಾಗಿದ್ದು, ವಿದೇಶದಲ್ಲಿ ಚಿತ್ರೀಕರಣವಾಗಲಿದೆ. 30 ನಿಮಿಷಗಳ 7 ಸಂಚಿಕೆಗಳಲ್ಲಿ “ಹೇಟ್‌ ಯು ರೋಮಿಯೋ’ ಪ್ರಸಾರವಾಗಲಿದೆ.

ಈ ವೆಬ್‌ ಸೀರಿಸ್‌ಗಾಗಿ ನಾಯಕ ಅರವಿಂದ್‌ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಫೋಟೋಶೂಟ್‌ ನಡೆದಿದೆ. ಭರತ್‌ ಪರಶುರಾಮ್‌ ಛಾಯಾಗ್ರಹಣ, ಶುದ್ಧೋ ರಾಯ್‌ ಸಂಗೀತವಿದೆ. ಈಗಾಗಲೇ ಶಿವರಾಜಕುಮಾರ್‌ ಅವರ ಶ್ರೀಮುತ್ತು ಸಿನಿ ಸರ್ವಿಸ್‌ ಬ್ಯಾನರ್‌ನಡಿ “ಮಾನಸ ಸರೋವರ’ ಎಂಬ ಧಾರಾವಾಹಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಿಸುವ ಉದ್ದೇಶವೂ ಇದೆ.

Comments are closed.