ಕರ್ನಾಟಕ

ಪರಿಶಿಷ್ಟರ ಅಳಲು ಆಲಿಕೆಗೆ ‘ಕಲ್ಯಾಣ ಕೇಂದ್ರ’ ಆರಂಭ: ದೂರು ಕರೆಗೆ ಸ್ಥಿರ ದೂರವಾಣಿ: 080-22634300

Pinterest LinkedIn Tumblr


ಬೆಂಗಳೂರು: ಪರಿಶಿಷ್ಟರ ದುಃಖ -ದುಮ್ಮಾನಗಳಿಗೆ ದನಿಯಾಗಬಲ್ಲ 24/7 ಮಾದರಿಯಲ್ಲಿ ಕಾರ್ಯಾಚರಿಸುವ ಸಹಾಯವಾಣಿಗೆ ಸಮಾಜ ಕಲ್ಯಾಣ ಇಲಾಖೆ ಚಾಲನೆ ನೀಡಿದೆ. ನಗರದ ಯವನಿಕ ಆವರಣದಲ್ಲಿ ಸ್ಥಾಪಿಸಿರುವ ‘ಕಲ್ಯಾಣ ಕೇಂದ್ರ’ ಸಹಾಯವಾಣಿಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳವಾರ ಉದ್ಘಾಟಿಸಿದರು.

ಪರಿಶಿಷ್ಟ ವ್ಯಕ್ತಿಗಳು ದೂರವಾಣಿ ಕರೆ ಅಥವಾ ವ್ಯಾಟ್ಸ್‌ ಆ್ಯಪ್‌ ಮೂಲಕ ದೂರು ದಾಖಲಿಸಬಹುದು. ತಮಗಾದ ಅನ್ಯಾಯ ಅಥವಾ ಸರಕಾರಿ ಸವಲತ್ತು ತಪ್ಪಿದ್ದಕ್ಕೆ ದೂರು ನೀಡಬಹುದು. ದೂರು ದಾಖಲಿಸಿ ಅವುಗಳನ್ನು ಸಂಬಂಧಿಸಿದ ಅಧಿಕಾರಿಗೆ ವರ್ಗಾಯಿಸಲಾಗುತ್ತದೆ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಇತ್ಯರ್ಥ ಕಾಣುವ ರೀತಿ ಆಯಾ ಅಧಿಕಾರಿಗಳೇ ಖುದ್ದು ದೂರಿಗೆ ಪರಿಹಾರವನ್ನು ಅಹವಾಲುದಾರನಿಗೆ ತಿಳಿಸಲಾಗುತ್ತದೆ.

ಕ್ಲಿಷ್ಟ ಹಾಗೂ ನೀತಿ ನಿರೂಪಣಾ ದೂರುಗಳನ್ನು ಸಚಿವರ ಹಂತದಲ್ಲಿ ಇತ್ಯರ್ಥಕ್ಕೂ ಸಹಾಯವಾಣಿ ನೆರವಿಗೆ ಬರಲಿದೆ. ಕೋರ್ಟ್‌ ಕಟ್ಲೆ ಉಳ್ಳ ಪ್ರಕರಣಗಳನ್ನು ಕೇಂದ್ರದ ಹೊರಗೆ ನಿವಾರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ.

3 ಪಾಳಿಯಲ್ಲಿ ಸಿಬ್ಬಂದಿ ಕೆಲಸ

ಸಹಾಯವಾಣಿಗೆ ಬರುವ ದೂರುಗಳನ್ನು ನೇರವಾಗಿ ಕಂಪ್ಯೂಟರ್‌ಗೆ ದಾಖಲಿಸಿ ಅಧಿಕಾರಿಗಳಿಗೆ ರವಾನಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಥ ಕರೆಗಳನ್ನು ಸ್ವೀಕರಿಸಿ ದೂರುದಾರನಿಗೆ ಮಾರ್ಗದರ್ಶನ ಮಾಡಲು ಮೂರು ಪಾಳಿಯಲ್ಲಿ ಒಟ್ಟು 22 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇವರ ಉಸ್ತುವಾರಿಗೆ ವ್ಯವಸ್ಥಾಪಕರೊಬ್ಬರನ್ನು ನಿಯೋಜಿಸಲಾಗಿದೆ. ಈತ ಇಲಾಖೆಯ ಅಧಿಕಾರಿಯೊಬ್ಬರೊಂದಿಗೆ ಸತತ ಸಂಪರ್ಕದಲ್ಲಿದ್ದು, ತುರ್ತು ದೂರುಗಳಿಗೆ ಆಯಾ ದಿನವೇ ಪರಿಹಾರ ಒದಗಿಸಲು ನೆರವಾಗಲಿದ್ದಾರೆ.

ಸಹಾಯವಾಣಿ ಕೇಂದ್ರವನ್ನು ನಿರ್ವಹಿಸುವ ಹೊಣೆಯನ್ನು ಬೆಂಗಳೂರು ಮೂಲದ ಜಿಎಸ್‌ ಮ್ಯಾನೇಜ್‌ಮೆಂಟ್‌ ಕಂಪನಿಗೆ ವಹಿಸಲಾಗಿದೆ. ಈ ಕಂಪನಿ ತನ್ನ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಿದೆ. ‘‘ದೂರುಗಳ ದಾಖಲು, ನಿರ್ವಹಣೆ, ಪರಿಹಾರ ಸೂಚಿಸುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ದೂರುಗಳ ಸಂಖ್ಯೆ ಆಧರಿಸಿ ಸಿಬ್ಬಂದಿ ಸಂಖ್ಯೆ ಏರಿಸಲು ಅಡ್ಡಿ ಇಲ್ಲ,’’ ಎಂದು ‘ಕಲ್ಯಾಣ ಕೇಂದ್ರ’ದ ವ್ಯವಸ್ಥಾಪಕ ಪ್ರೇಮ್‌ ‘ವಿಕ’ಗೆ ತಿಳಿಸಿದರು.

ಸೌಲಭ್ಯ ಸದುಪಯೋಗಕ್ಕೆ ಡಿಸಿಎಂ ಮನವಿ

ಬೆಂಗಳೂರು: ಪರಿಶಿಷ್ಟರ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ. ಈ ವರ್ಗದವರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹಾಯವಾಣಿ ನೆರವಿಗೆ ಬರಲಿದೆ. ಜನರ ಸನಿಹಕ್ಕೆ ಸಮಾಜ ಕಲ್ಯಾಣ ಇಲಾಖೆಯನ್ನು ಕೊಂಡೊಯ್ಯುವ ಯತ್ನವನ್ನು ಸರಕಾರ ಮಾಡಿದೆ. ಈ ಸೌಲಭ್ಯವನ್ನು ಎಸ್‌ಸಿ/ಎಸ್‌ಟಿ ಜನರು ಸದುಪಯೋಗ ಪಡಿಸಿಕೊಳ್ಳಲಿ. ಕೇಂದ್ರದ ನಿರ್ವಹಣೆಗೆ ಹಿರಿಯ ಅಧಿಕಾರಿಗಳನ್ನು ನೇಮಿಸಿದ್ದು, ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ವಿಶ್ವಾಸ ಇದೆ ಎಂದು ಡಿಸಿಎಂ ಮನವಿ ಮಾಡಿದರು.

‘‘ಎಸ್‌ಸಿ/ಎಸ್‌ಟಿ ಜನರ ಸಮಸ್ಯೆಗಳಿಗೆ ಕಲ್ಯಾಣ ಕೇಂದ್ರ ನೆರವಿಗೆ ಬರಲಿದೆ. ಹಾಸ್ಟಲ್‌ ಸೌಲಭ್ಯದಲ್ಲಿ ವ್ಯತ್ಯಾಸ, ಇಲಾಖೆಯ ಸವಲತ್ತು ಪಡೆಯಲು ತೊಂದರೆಯಾದವರು ನೇರವಾಗಿ ಸಹಾಯವಾಣಿ ಸಂಪರ್ಕಿಸಬಹುದು’’- ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವ

ದೂರು ಕರೆಗೆ:

ಸ್ಥಿರ ದೂರವಾಣಿ: 080-22634300

ಮೊಬೈಲ್‌(ವ್ಯಾಟ್ಸ್‌ಅಪ್‌): 9901100000

Comments are closed.