ಮನೋರಂಜನೆ

ಶಶಿಕುಮಾರ್ ಪುತ್ರ ಆದಿತ್ಯನ ಚಿತ್ರಕ್ಕೆ ಅಪೂರ್ವ ನಾಯಕಿ!

Pinterest LinkedIn Tumblr


ಬೆಂಗಳೂರು: 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದವರು ಶಶಿ ಕುಮಾರ್. ಆ ನಂತರದಲ್ಲಿ ಅಪಘಾತದ ಆಘಾತದಿಂದ ಚಿತ್ರರಂಗದಿಂದ ದೂರಾಗಿದ್ದ ಶಶಿಕುಮಾರ್ ಅವರನ್ನು ಪ್ರೇಕ್ಷಕರೆಲ್ಲರೂ ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. ಹೀಗಿರುವಾಗಲೇ ಅವರ ಪುತ್ರ ಆದಿತ್ಯ ಇದೀಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೊಸವಿಚಾರವೆಂದರೆ, ಆದಿತ್ಯನಿಗೆ ನಾಯಕಿಯೂ ಫಿಕ್ಸಾಗಿದ್ದಾಳೆ!

ಶಶಿಕುಮಾರ್ ಅವರ ಪುತ್ರ ಆದಿತ್ಯ ನಾಯಕನಾಗಿ ಎಂಟ್ರಿ ಕೊಡೋದರ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ನಾಯಕಿಗಾಗಿ ವ್ಯಾಪಕವಾಗಿಯೇ ಶೋಧ ಕಾರ್ಯ ಚಾಲ್ತಿಯಲ್ಲಿತ್ತು. ಕಡೆಗೂ ಅಪೂರ್ವ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ವರ್ಷಾಂತರಗಳ ಹಿಂದೆ ತರೆ ಕಂಡಿದ್ದ ರವಿಚಂದ್ರನ್ ಅಭಿನಯ ಮತ್ತು ನಿರ್ದೇಶಕನದ ಅಪೂರ್ವ ಚಿತ್ರದ ಮೂಲಕವೇ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಟ್ಟಿದ್ದ ಅಪೂರ್ವ ಇದೀಗ ವಿಕ್ಟರಿ 2 ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾಳೆ. ಅದೇ ಹೊತ್ತಿನಲ್ಲಿ ಆದಿತ್ಯನಿಗೆ ಜೋಡಿಯಾಗಿರೋ ಸುದ್ದಿಯನ್ನೂ ಜಾಹೀರು ಮಾಡಿದ್ದಾಳೆ.

ಶಶಿಕುಮಾರ್ ಪುತ್ರನ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರೋದರ ಬಗ್ಗೆ ಖುಷಿಗೊಂಡಿರೋ ಅಪೂರ್ವ, ಶಶಿಕುಮಾರ್ ಚಿತ್ರಗಳನ್ನು ನೋಡುತ್ತಾ ಬೆಳೆದ ತಾನು ಇದೀಗ ಅವರ ಪುತ್ರನಿಗೆ ನಾಯಕಿಯಾಗಿ ಆಯ್ಕೆಯಾದದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ. ಈಗೊಂದೆರಡು ದಿನಗಳ ಹಿಂದಷ್ಟೇ ಅಪೂರ್ವ ಮತ್ತು ಆದಿತ್ಯಾ ಫೋಟೋ ಶೂಟ್ ಕೂಡಾ ನಡೆದಿದೆಯಂತೆ. ಅಪೂರ್ವ ಚಿತ್ರದಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅಪೂರ್ವ ಈ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧವಾದ ಹಳ್ಳಿ ಹುಡುಗಿಯಾಗಿ ನಟಿಸಲಿದ್ದಾಳಂತೆ.

ಇದೇ ಹೊತ್ತಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶನ ಮಾಡುತ್ತಿರುವ ರಾಜೇಂದ್ರ ಪೊನ್ನಪ್ಪ ಚಿತ್ರದಲ್ಲಿಯೂ ಅಪೂರ್ವಳೇ ನಾಯಕಿ. ವರ್ಷಗಳ ಹಿಂದೆ ತೆರೆ ಕಂಡಿದ್ದ ಅಪೂರ್ವ ಚಿತ್ರದ ನಂತರ ಸದ್ದಿಲ್ಲದಂತಿದ್ದ ಅಪೂರ್ವ ಈಗ ಒಂದರ ಹಿಂದೊಂದರಂತೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾಳೆ.

Comments are closed.