ರಾಷ್ಟ್ರೀಯ

ರಾಜಸ್ಥಾನದಲ್ಲಿ ಗೋಮೂತ್ರ ಹಾಲಿಗಿಂತ ದುಬಾರಿ!

Pinterest LinkedIn Tumblr


ಜೈಪುರ : ರಾಜಸ್ಥಾನದ ಹೈನು ಕೃಷಿಕರಿಗೆ ಈಗ ದನದ ಹಾಲಿಗಿಂತಲೂ ಹೆಚ್ಚು ಆದಾಯ ಗೋಮೂತ್ರದಿಂದ ಬರುತ್ತಿದೆ.

ದನದ ಹಾಲನ್ನು ಮಾರುವ ಹೈನು ಕೃಷಿಕರಿಗೆ ಲೀಟರಿಗೆ 22 ರಿಂದ 25 ರೂ. ಸಿಗುತ್ತದೆ; ಆದರೆ ಗೋಮೂತ್ರವನ್ನು ಹೋಲ್‌ಸೇಲ್‌ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದರೆ ಲೀಟರಿಗೆ 30 ರೂ. ಸಿಗುತ್ತದೆ.

ಸಾವಯವ ಕೃಷಿಗೆ ಈಗ ಅತ್ಯಧಿಕ ಒತ್ತು ದೊರಕುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ರೈತರು ತಮ್ಮ ಕೃಷಿಗೆ ಈಗ ರಾಸಾಯನಿಕ ಗೊಬ್ಬರಕ್ಕಿಂತ ಗೋಮೂತ್ರ ಮತ್ತು ಹಟ್ಟಿ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಗೋ ಮೂತ್ರ ಮಾರುವ ಹೈನು ಕೃಷಿಕರ ಆದಾಯ ರಾಜಸ್ಥಾನದಲ್ಲೀಗ ಶೇ. 30ರಷ್ಟು ಹೆಚ್ಚಾಗಿದೆ ಎಂದು ಇಕಾನಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಹೈನು ಕೃಷಿಕರಿಗೆ ಉಚ್ಚ ತಳಿಯ ಗೋವುಗಳಿಂದ ಅಧಿಕ ಲಾಭ ಬರುತ್ತಿದೆ. ಇವುಗಳಲ್ಲಿ ಗಿರ್‌ ಮತ್ತು ಥರ್‌ಪಾರ್‌ಕರ್‌ ತಳಿಗಳು ಮುಖ್ಯವಾಗಿವೆ. ಈ ತಳಿಗಳ ಗೋಮೂತ್ರಕ್ಕೆ ಲೀಟರಿಗೆ 15ರಿಂದ 30 ರೂ. ಬೆಲೆ ಇದೆ.

ಗೋ ಮೂತ್ರಕ್ಕೆ ಬೇಡಿಕೆ ಹೆಚ್ಚಿರುವುದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಗೋ ಮೂತ್ರವನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಹೆಚ್ಚೆಚ್ಚು ಬಳಸಲಾಗುತ್ತಿದೆ. ಹಾಗೆಯೇ ಧಾರ್ಮಿಕ ಉದ್ದೇಶಗಳಿಗೂ, ಮುಖ್ಯವಾಗಿ ಯಾಗ, ಯಜ್ಞ, ಹೋಮ, ಹವನ, ಪಂಚಗವ್ಯಕ್ಕೆ ಗೋಮೂತ್ರ ಬಳಕೆಯಾಗುತ್ತದೆ. ಉಪವೀತ ಧಾರಣೆಯ ವಿಧಿಯಲ್ಲಿ ಗೋಮೂತ್ರಕ್ಕೆ ವಿಶೇಷ ಆದ್ಯತೆ ಇದೆ.

ಆದರೆ ಗೋ ಮೂತ್ರ ಶೇಖರಣೆಯ ಕೆಲಸ ಹೈನು ಕೃಷಿಕರಿಗೆ ಸುಲಭದ ಕಾಯಕವಲ್ಲ. ಏಕೆಂದರೆ ಗೋಮೂತ್ರ ಸಂಗ್ರಹಣೆಗೆ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ಒಂದಿನಿತೂ ಗೋಮೂತ್ರ ನಷ್ಟವಾಗದಂತೆ ಎಚ್ಚರವಹಿಸಬೇಕಾಗುತ್ತದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಗೋ ಮೂತ್ರಕ್ಕೆ ಒಳ್ಳೆಯ ಬೇಡಿಕೆ ಮತ್ತು ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಮೂತ್ರಕ್ಕೆ ಲೀಟರಿಗೆ 30ರಿಂದ 50 ರೂ. ಬೆಲೆ ಇದೆ. ಕೃಷಿಕರು ಈಗ ರಾಸಾಯನಿಕ ಗೊಬ್ಬರಕ್ಕಿಂತ ಗೋ ಮೂತ್ರ, ಸೆಗಣಿಯನ್ನು ಒಳಗೊಂಡ ಹಟ್ಟಿಗೊಬ್ಬರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ; ಹಾಗಾಗಿ ಗೋಮೂತ್ರದಿಂದ ಹೈನು ಕೃಷಿಕರಿಗೆ ಉತ್ತಮ ಹೆಚ್ಚುವರಿ ಆದಾಯಕ ದೊರಕುವಂತಾಗಿದೆ ಎಂದು ಜೈಪುರದ ಹಾಲು ವ್ಯಾಪಾರಿ ಓಂ ಪ್ರಕಾಶ್‌ ಮೀಣ ಹೇಳುತ್ತಾರೆ.

ಉದಯಪುರದ ಮಹಾರಾಣಾ ಪ್ರತಾಪ್‌ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಅತ್ಯಧಿಕ ಪ್ರಮಾಣದ ಗೋ ಮೂತ್ರ ಖರೀದಿದಾರ ಸಂಸ್ಥೆಯಾಗಿದೆ. ಈ ವಿಶ್ವವಿದ್ಯಾಲಯ ಸಾವಯವ ಕೃಷಿಗಾಗಿ ಪ್ರತೀ ತಿಂಗಳೂ 300ರಿಂದ 500 ಲೀಟರ್‌ ಗೋ ಮೂತ್ರವನ್ನು ಹೈನು ಕೃಷಿಕರಿಂದ ಖರೀದಿಸುತ್ತದೆ. ಇದರಿಂದ ವಿವಿಗೆ 15 ರಿಂದ 20 ಸಾವಿರ ರೂ. ಖರ್ಚು ಬರುತ್ತದೆ.

Comments are closed.