ಮನೋರಂಜನೆ

ಸ್ಯಾಂಡಲ್ ವುಡ್ ಗೆ ಮತ್ತೆ ಬಂದ ಲಕ್ಷ್ಮೀ  ರೈ

Pinterest LinkedIn Tumblr


ನಟಿ ಲಕ್ಷ್ಮೀ ರೈ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಕನ್ನಡದಲ್ಲಿ ಈ ಹಿಂದೆ “ಮಿಂಚಿನ ಓಟ’, “ಅಟ್ಟಹಾಸ’ ಮತ್ತು “ಕಲ್ಪನ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಲಕ್ಷ್ಮೀ ರೈ, ಮಲಯಾಳಂ, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ಬಿಜಿಯಾಗಿದ್ದರು. ಈಗ ಕನ್ನಡದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಲಕ್ಷ್ಮೀ ರೈ ನಟಿಸುತ್ತಿರುವ ಚಿತ್ರಕ್ಕೆ ಗುರುಪ್ರಸಾದ್‌ ನಿರ್ದೇಶಕರು. ಈ ಹಿಂದೆ ಕೋಮಲ್‌ ಅಭಿನಯದ “ಮರ್ಯಾದೆ ರಾಮಣ್ಣ’ ಚಿತ್ರವನ್ನು ನಿರ್ದೇಶಿಸಿದ್ದ, ಗುರುಪ್ರಸಾದ್‌ ಅವರು, ನಾಯಕಿ ಪ್ರಧಾನ ಕಥೆ ಹೆಣೆದು, ಆ ಚಿತ್ರಕ್ಕೆ ಲಕ್ಷ್ಮೀ ರೈ ಅವರನ್ನು ನಾಯಕಿಯನ್ನಾಗಿಸಿದ್ದಾರೆ. ಗುರುಪ್ರಸಾದ್‌ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿಲ್ಲ. ಆಗಸ್ಟ್‌ 29 ರಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಅದೇ ದಿನ ಚಿತ್ರದ ಶೀರ್ಷಿಕೆ, ತಂತ್ರಜ್ಞರು, ಕಲಾವಿದರು ಇತ್ಯಾದಿ ವಿಷಯಗಳನ್ನು ಹೇಳುವುದಾಗಿ ತಿಳಿಸುತ್ತಾರೆ ನಿರ್ದೇಶಕ ಗುರುಪ್ರಸಾದ್‌.

“ಲಕ್ಷ್ಮೀ ರೈ, ಅವರು ಸದ್ಯಕ್ಕೆ ಬಿಜಿ ಇದ್ದಾರೆ. ಕೈಯಲ್ಲಿ ಆರೇಳು ಚಿತ್ರಗಳಿವೆ. ತೆಲುಗು ನಟ ವೆಂಕಟೇಶ್‌, ಮಲಯಾಳಂ ನಟ ಮಮ್ಮುಟಿ ಅವರೊಂದಿಗೆ ನಟಿಸುತ್ತಿದ್ದಾರೆ. ಇತ್ತೀಚೆಗೆ ಮೇಲ್‌ನಲ್ಲಿ ಅವರಿಗೆ ಚಿತ್ರದ ಒನ್‌ಲೈನ್‌ ಸ್ಟೋರಿ ಕಳುಹಿಸಿದ್ದು, ಅದನ್ನು ಓದಿದ ಅವರು ತಕ್ಷಣವೇ ಕೊಡೈಕೆನಲ್‌ ಕರೆಸಿಕೊಂಡು ಕಥೆ ಕೇಳಿ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ’ ಎಂದು ವಿವರ ಕೊಡುತ್ತಾರೆ ಗುರುಪ್ರಸಾದ್‌.

ಈ ಚಿತ್ರವನ್ನು ಮುಂಬೈ ನಿರ್ಮಾಪಕರೊಬ್ಬರು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಲಕ್ಷ್ಮೀ ರೈ ಪಕ್ಕಾ ಆಗಿದ್ದು, ಇಷ್ಟರಲ್ಲೇ ಚಿತ್ರತಂಡದ ಆಯ್ಕೆ ನಡೆಯಲಿದೆ. ಎಲ್ಲಾ ಸರಿ, ನಾಯಕಿ ಪ್ರಧಾನದ ಕಥೆ ಏನು? ‘ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಇಲ್ಲಿದೆ. ಇದೇ ಮೊದಲ ಸಲ ಲಕ್ಷ್ಮೀ ರೈ ಅವರು ಆ್ಯಕ್ಷನ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಾಯಕಿ ಪ್ರಧಾನವಾಗಿರುವ ಕಥೆ. ಅವರ ಕೈಯಲ್ಲಿ ನಾಲ್ಕು ಚಿತ್ರಗಳಿದ್ದು, ಈ ಕಥೆ ಕೇಳಿದೊಡನೆ, ಆ ಮೂರು ಚಿತ್ರಗಳನ್ನು ಪಕ್ಕಕ್ಕಿಟ್ಟು, ಈ ಚಿತ್ರ ಒಪ್ಪಿದ್ದಾರೆ. ಆ್ಯಕ್ಷನ್‌ ಇರುವುದರಿಂದ ಅದಕ್ಕೆ ಬೇಕಾದ ತರಬೇತಿ ಪಡೆಯಲು ಅಣಿಯಾಗುತ್ತಿದ್ದಾರೆ. ಇದುವರೆಗೆ ಹನ್ನೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ನನಗೆ, ಇದು ಬೇರೆ ರೀತಿಯ ಚಿತ್ರವಾಗುತ್ತೆ’ ಎಂಬುದು ಗುರುಪ್ರಸಾದ್‌ ಮಾತು.

ಮುಂಬೈ ಪ್ರೊಡಕ್ಷನ್ಸ್‌ ಆಗಿರುವುದರಿಂದ ದೊಡ್ಡ ತಾರಾಬಳಗ ಇರಲಿದೆ. ದೊಡ್ಡ ಬಜೆಟ್‌ನಲ್ಲೇ ಚಿತ್ರ ತಯಾರಾಗಲಿದೆ. ಇನ್ನು, ಲಕ್ಷ್ಮೀ ರೈ ಜೊತೆಗೆ ಹೊಡೆದಾಡಲು ಮುಂಬೈ ಖಳನಟರು, ಇಲ್ಲಿನವರೂ ಇರುತ್ತಾರೆ. ಇಲ್ಲೂ ಹೀರೋ ಇದ್ದಾನೆ. ಆದರೆ, ಆ ಹೀರೋ ಭಾಗದ ದೃಶ್ಯಗಳು ಕಡಿಮೆ ಇರಲಿವೆ. ಒಟ್ಟಾರೆ, ಈಗಿನ ಸಮಾಜದಲ್ಲಿ ಡ್ರಗ್ಸ್‌, ಮರಣ ದಂಡನೆ, ಲ್ಯಾಂಡ್‌ ಮಾಫಿಯ ಹೆಚ್ಚಾಗಿ ನಡೆಯುತ್ತಿದ್ದು, ಆ ವಿಷಯ ಇಲ್ಲಿ ಪ್ರತಿಧ್ವನಿಸಲಿದೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ ಇದಾಗಲಿದೆ ಎಂದಷ್ಟೇ ಹೇಳುತ್ತಾರೆ ಗುರುಪ್ರಸಾದ್‌.

Comments are closed.