ಮನೋರಂಜನೆ

777ಚಾರ್ಲಿಗೆ ಸಂಗೀತಾ; ಮಹದೇವನ ಸತಿ ಈಗ ರಕ್ಷಿತ್ ಗೆ ನಾಯಕಿ

Pinterest LinkedIn Tumblr


ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “777ಚಾರ್ಲಿ’ ಚಿತ್ರದ ಒಂದು ಹಂತದ ಚಿತ್ರೀಕರಣ ಈಗಾಗಲೇ ಮುಗಿದು ಹೋಗಿದೆ. ಸದ್ಯ ರಕ್ಷಿತ್‌ “ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಈ ಗ್ಯಾಪಲ್ಲಿ ಚಿತ್ರತಂಡ ಚಾರ್ಲಿಗೆ ನಾಯಕಿ ಹುಡುಕಿದೆ. “ಚಾರ್ಲಿ’ಗೆ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಅನೇಕರಲ್ಲಿತ್ತು. ಈಗ ಸಂಗೀತಾಗೆ ನಾಯಕಿ ಪಟ್ಟ ಸಿಕ್ಕಿದೆ. ಈ ಮೂಲಕ ನಾಯಕಿಯ ಕುತೂಹಲಕ್ಕೆ ತೆರೆಬಿದ್ದಿದೆ. ನೀವು “ಹರ ಹರ ಮಹಾದೇವ’ ಧಾರಾವಾಹಿ ನೋಡಿದ್ದರೆ ನಿಮಗೆ ಸಂಗೀತಾ ಮುಖಪರಿಚಯವಿರುತ್ತದೆ. ಆ ಧಾರಾವಾಹಿಯಲ್ಲಿ ಸತಿ ಪಾತ್ರ ಮಾಡಿದ್ದ ಸಂಗೀತಾಗೆ ಈಗ ಪ್ರಮುಖ ಬ್ಯಾನರ್‌ನ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.

ಮಾಡೆಲಿಂಗ್‌ ಮಾಡುತ್ತಿದ್ದ ಸಂಗೀತಾ “ಕರ್ಮ’ ಎಂಬ ಕಿರುಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಆ ನಂತರ ಸಂಗೀತಾಗೆ ಬ್ರೇಕ್‌ ನೀಡಿದ್ದು “ಹರ ಹರ ಮಹಾದೇವ’ ಧಾರಾವಾಹಿ. ಆ ಧಾರಾವಾಹಿ ಸಂಗೀತಾಗೆ ಒಳ್ಳೆಯ ಹೆಸರು ಕೊಟ್ಟಿದ್ದು ಸುಳ್ಳಲ್ಲ. ಹೀಗಿರುವಾಗ ಸಂಗೀತಾ ಹೊಸಬರ ಸಿನಿಮಾವೊಂದರಿಂದ ಅವಕಾಶ ಬಂದು, ಆ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ “777 ಚಾರ್ಲಿ’ಯಿಂದ ಅವಕಾಶ ಸಿಕ್ಕಿದೆ. ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಂಗೀತಾ, “ತುಂಬಾ ಚೆನ್ನಾಗಿದೆ. ಸವಾಲಿನ ಪಾತ್ರ’ ಎಂದಷ್ಟೇ ಹೇಳುತ್ತಾರೆ.

ಈ ಚಿತ್ರವನ್ನು ಕಿರಣ್‌ ರಾಜ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರ ಮಾಡುತ್ತಿದ್ದು, ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಬಂಧದ ಸುತ್ತ ಈ ಸಿನಿಮಾ ಸಾಗಲಿದೆ. ನಾಯಕ ಹಾಗೂ ನಾಯಿ ನಡುವಿನ ಬಾಂಧವ್ಯ ಹೇಗಿರುತ್ತದೆ. ನಾಯಕನ ಜೀವನದಲ್ಲಿ ಆ ನಾಯಕಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಚಿತ್ರವನ್ನು ಜಿ.ಎಸ್‌.ಗುಪ್ತಾ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿದ್ದು, ಪುಷ್ಕರ್‌ ಸಾಥ್‌ ನೀಡುತ್ತಿದ್ದಾರೆ.

Comments are closed.