ರಾಷ್ಟ್ರೀಯ

ಮಹಿಳೆ ವಿರುದ್ಧ  ಇಸ್ಲಾಂ ಆಚರಣೆಗಳ ವಿರೋಧಿಸಿದ ಫತ್ವಾ

Pinterest LinkedIn Tumblr


ಬರೇಲಿ: ತ್ರಿವಳಿ ತಲಾಕ್​ ಸೇರಿದಂತೆ ಇಸ್ಲಾಂನ ಇತರೆ ಆಚರಣೆಗಳನ್ನು ವಿರೋಧಿಸಿದ ಮಹಿಳೆಯ ವಿರುದ್ಧ ಬರೇಲಿಯ ಜಾಮ ಮಸೀದಿಯ ಇಮಾಮ್‌ ಇಸ್ಲಾಂ ಕಾನೂನಿನ ಪ್ರಕಾರ ಫತ್ವಾವನ್ನು ಹೊರಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಾಹರ್‌ ಇಮಾಮ್‌ ಮುಫ್ತಿ ಖುರ್ಷಿದ್‌ ಅಲಾಮ್‌, ಇಸ್ಲಾಂನ ಆಚರಣೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನಿದಾ ಖಾನ್‌ಗೆ ಫತ್ವಾ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿದಾ ಖಾನ್‌ ಯಾವಾಗಲೂ ಇಸ್ಲಾಂ ಧರ್ಮದ ಆಚರಣೆಗಳ ವಿರುದ್ಧವಾಗಿಯೇ ಮಾತನಾಡುತ್ತಿದ್ದರು. ಹಾಗಾಗಿ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಸಾರ್ವಜನಿಕವಾಗಿ ಆಕೆ ಕ್ಷಮೆ ಕೋರುವವರೆಗೂ ಮತ್ತು ಇಸ್ಲಾ ವಿರೋಧಿ ಧೋರಣೆಯನ್ನು ಹಿಂತೆಗೆದುಕೊಳ್ಳುವವರೆಗೂ ಯಾವುದೇ ಮುಸ್ಲಿಮರು ಆಕೆಯ ಜತೆ ಸಂಪರ್ಕ ಹೊಂದಿರಬಾರದು ಎಂದು ತಿಳಿಸಿದ್ದಾರೆ.

ಆಕೆಯು ಅನಾರೋಗ್ಯಕ್ಕೆ ತುತ್ತಾದರೆ ಔಷಧಗಳನ್ನು ನೀಡಲಾಗುವುದಿಲ್ಲ. ಆಕೆ ಸತ್ತರೆ ಅವಳ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ನಮಾಜ್‌ ನೀಡಲು ಯಾರಿಗೂ ಅನುಮತಿಸುವುದಿಲ್ಲ. ಅವಳ ಮರಣ ನಂತರ ಆಕೆ ಸ್ಮಶಾನದಲ್ಲಿ ಸಮಾಧಿಯಾಗಬಾರದು ಎಂದು ಫತ್ವಾ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಫತ್ವಾ ಹೊರಡಿಸಿದವರು ಪಾಕಿಸ್ತಾನಕ್ಕೆ ಹೋಗಲಿ

ಈ ಬೆಳವಣಿಗೆಗಳ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಿದಾ ಖಾನ್‌, ಯಾರು ಫತ್ವಾವನ್ನು ಹೊರಡಿಸುತ್ತಾರೋ ಅವರು ಪಾಕಿಸ್ತಾನಕ್ಕೆ ಹೋಗಲಿ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಸ್ಲಾಂನಿಂದ ಯಾರು ನನ್ನನ್ನು ಭಹಿಷ್ಕರಿಸಲಾಗುವುದಿಲ್ಲ. ಕೇವಲ ಅಲ್ಲಾ ಮಾತ್ರ ಯಾರು ಅಪರಾಧಿ ಎನ್ನುವುದನ್ನು ತೀರ್ಮಾನಿಸುತ್ತಾನೆ ಎಂದು ತಿಳಿಸಿದ್ದಾರೆ.

ಇನ್ನು ನಿದಾ ಖಾನ್‌ ಇಮಾಮ್‌ ಅವರ ಹೆಂಡತಿಯ ಸಂಬಂಧಿಯಾಗಿದ್ದು, ತ್ರಿವಳಿ ತಲಾಕ್​ ಗೆ ಒಳಪಟ್ಟಿದ್ದಾಳೆ. 2015ರಲ್ಲಿ ಅಲಾ ಹಜರತ್‌ ಕುಟುಂಬದ ಉಸ್ಮಾನ್‌ ರಾಜಾ ಖಾನ್‌ ಅಲಿಯಾಸ್‌ ಮೈಯನ್‌ ಎಂಬಾತನನ್ನು ವಿವಾಹವಾಗಿದ್ದಳು. 2016ರಲ್ಲಿ ಆಕೆಗೆ ತಲಾಕ್​ ನೀಡಲಾಗಿತ್ತು. ಅಂದಿನಿಂದಲೂ ನಿದಾ ಖಾನ್‌ ಮುಸ್ಲಿಂ ಮಹಿಳೆಯರ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.

Comments are closed.