ಮನೋರಂಜನೆ

ಭಿನ್ನ ಥ್ರಿಲ್ಲರ್‌: ಮತ್ತೆ ನಾಯಕಿ ಪ್ರಧಾನ ಚಿತ್ರದತ್ತ ಆದರ್ಶ್‌

Pinterest LinkedIn Tumblr


“ಶುದ್ಧಿ’ ಎಂಬ ಚಿತ್ರ ಒಂದು ವಿಭಿನ್ನ ಆಲೋಚನೆಯ ಚಿತ್ರವಾಗಿ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಆ ಚಿತ್ರ ಕಮರ್ಷಿಯಲ್‌ ಆಗಿ ಅಷ್ಟೊಂದು ಯಶಸ್ಸಿ ಕಾಣಲಿಲ್ಲ. ಆ ಚಿತ್ರವನ್ನು ನಿರ್ದೇಶಿಸಿದ್ದು, ಆದರ್ಶ್‌ ಈಶ್ವರಪ್ಪ. ಈಗ ಆದರ್ಶ್‌ ಮತ್ತೂಂದು ಸಿನಿಮಾ ಮಾಡುತ್ತಿದ್ದಾರೆ. ಅದು “ಭಿನ್ನ’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ರಾಕ್‌ಲೈನ್‌ ಸ್ಟುಡಿಯೋದಲ್ಲಿ ನಡೆಯಿತು. ಈ ಬಾರಿ ಆದರ್ಶ್‌ ಸಸ್ಪೆನ್‌-ಥ್ರಿಲ್ಲರ್‌ ಜಾನರ್‌ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಹಿಂದಿನ ಸಿನಿಮಾದಲ್ಲಿ ತುಂಬಾ ಲೊಕೇಶನ್‌ಗಳಿದ್ದರೆ ಈ ಸಿನಿಮಾದಲ್ಲಿ ಕಡಿಮೆ ಲೊಕೇಶನ್‌ಗಳಿರುತ್ತವೆಯಂತೆ. ಕಳೆದ ಬಾರಿಯ “ಶುದ್ಧಿ’ ಕೂಡಾ ನಾಯಕಿ ಪ್ರಧಾನ ಚಿತ್ರವಾಗಿತ್ತು. ಈಗ “ಭಿನ್ನ’ ಕೂಡಾ ಅದೇ ಹಾದಿಯಲ್ಲಿದೆ. ಬಹುತೇಕ ಸಿನಿಮಾದ ಕಥೆ ನಾಯಕಿ ಸುತ್ತವೇ ಸುತ್ತಲಿದೆ.

ಅಷ್ಟಕ್ಕೂ ಚಿತ್ರದ ಕಥೆಯೇನು ಎಂದು ನೀವು ಕೇಳಬಹುದು. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಹೊಂದಿರುವ ನಟಿಯೊಬ್ಬಳು ತನ್ನ ಹೊಸ ಸಿನಿಮಾದ ಸ್ಕ್ರಿಪ್ಟ್ ಪಡೆದು ಅದನ್ನು ಓದಲು ಊರಾಚೆಯ ಮನೆಯೊಂದನ್ನು ಸೇರುತ್ತಾಳೆ. ಅವಳು ಕಥೆಯಲ್ಲಿರುವ ಘಟನೆಗಳು ಆಕೆಯ ಸುತ್ತ ನಡೆಯಲಾರಂಭವಾಗುತ್ತದೆ. ಜೊತೆಗೆ ಆಕೆಯ ನಿಜ ಜೀವನಕ್ಕೂ ಸಿನಿಮಾದ ಕಥೆಗೂ ಸಾಮ್ಯತೆ ಇರುವುದು ಕಂಡು ಆಕೆಗೆ ಆಶ್ಚರ್ಯವಾಗುತ್ತದೆಯಂತೆ. ಜೊತೆಗೆ ಓದುತ್ತಿರುವ ಘಟನೆಗಳು ಸುತ್ತ ನಡೆಯುತ್ತಿರುವುದು ಕೂಡಾ ಆಕೆಯ ಕುತೂಹಲಕ್ಕೆ ಕಾರಣವಾಗುತ್ತದೆ. ಈ ಅಂಶದೊಂದಿಗೆ “ಭಿನ್ನ’ ಸಾಗುತ್ತದೆ. ನಿರ್ದೇಶಕ ಆದರ್ಶ್‌ ಹೇಳುವಂತೆ ಈ ಚಿತ್ರ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರಿಗೆ ಒಂದು ಕಾಣಿಕೆಯಾಗಲಿದೆ ಎನ್ನುತ್ತಾರೆ. ಹಾಗಂತ ನೇರವಾಗಿಯಲ್ಲ, ಪುಟ್ಟಣ್ಣ ಬಗ್ಗೆ ಗೊತ್ತಿರುವವರಿಗೆ ಈ ಸಿನಿಮಾ ನೋಡುವಾಗ ಆ ಅಂಶಗಳು ಗೊತ್ತಾಗಲಿದೆಯಂತೆ. ಅದೇನು ಎಂಬುದನ್ನು ತೆರೆಮೇಲೆಯೇ ನೋಡಬೇಕೆಂಬುದು ಆದರ್ಶ್‌ ಮನವಿ.

ಚಿತ್ರದಲ್ಲಿ ಪಾಯಲ್‌ ರಾಧಾಕೃಷ್ಣ, ಕಾವೇರಿ ಎಂಬ ಪಾತ್ರ ಮಾಡುತ್ತಿದ್ದಾರೆ. ನಟಿಯಾಗಬೇಕೆಂಬ ಕನಸು ಕಂಡಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಪಾತ್ರಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಈಗಾಗಲೇ ಹತ್ತು ದಿನಗಳ ಕಾಲ ರಿಹರ್ಸಲ್‌ ಕೂಡಾ ಮಾಡಲಾಗಿದೆ ಎಂದು ಹೇಳಿಕೊಂಡರು ಪಾಯಲ್‌. ಇನ್ನು ಸೌಮ್ಯ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ವಿದೇಶದಿಂದ ಬಂದಿರುವ, ತುಂಬಾ ವಿಷಯ ತಿಳಿದುಕೊಂಡಿರುವ ಪಾತ್ರವಂತೆ.

ಚಿತ್ರವನ್ನು ಪರ್ಪಲ್‌ ರಾಕ್‌ ಎಂಟರ್‌ಟೈನರ್ಸ್‌ ನಿರ್ಮಿಸುತ್ತಿದ್ದು, ನಿರ್ಮಾಪಕರಲ್ಲೊಬ್ಬರದಾ ಶ್ರೀನಿವಾಸ್‌ ಅವರು, “ಶುದ್ಧಿ’ ನೋಡಿ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದರಂತೆ. “ಭಿನ್ನ’ವನ್ನು ವರ್ಲ್ಡ್ ಸಿನಿಮಾವನ್ನಾಗಿಸುವ ಉದ್ದೇಶ ವಿದೆ ಎಂದರು. ಚಿತ್ರದಲ್ಲಿ ನಟಿಸುತ್ತಿರುವ ಸಿದ್ಧಾರ್ಥ್ ಕೂಡಾ ಮಾತನಾಡಿದ್ದರು. ಚಿತ್ರಕ್ಕೆ ಆಂಡ್ರುé ಆಯಿಲೋ ಛಾಯಾಗ್ರಹಣ, ಜೆಸ್ಸಿ ಕ್ಲಿಂಟನ್‌ ಸಂಗೀತ ವಿದೆ. ಗಣೇಶ್‌ ಪಾಪಣ್ಣ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರು. ಹೊಸಬರ ತಂಡಕ್ಕೆ ಶುಭಕೋರಲು ಲಹರಿ ವೇಲು ಕೂಡಾ ಆಗಮಿಸಿದ್ದರು.

Comments are closed.