
ಕನ್ನಡದ ಚಾಕೊಲೇಟ್ ಹೀರೋ, ಖ್ಯಾತ ಗಾಯಕಿ ಬಿ ಕೆ ಸುಮಿತ್ರಾ ಅವರ ಪುತ್ರ, ’ಎಕ್ಸ್‌ಕ್ಯೂಸ್ ಮಿ’ ಖ್ಯಾತಿಯ ನಟ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಶ್ರೇಯಾ ಅಯ್ಯರ್ ಅವರನ್ನು ವರಿಸಿದ್ದಾರೆ ಸುನೀಲ್.
ಇವರಿಬ್ಬರ ಮದುವೆ ಜೆ ಪಿ ನಗರದಲ್ಲಿ ಸೋಮವಾರ ಬೆಳಗ್ಗೆ ನೆರವೇರಿತು. ನಿರ್ದೇಶಕ ರಘು ಶಾಸ್ತ್ರಿ, ಬಿಗ್ ಬಾಸ್ ಖ್ಯಾತಿಯ ನಟಿ ಅನುಪಮಾ ಗೌಡ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಅಂದಹಾಗೆ ಇವರಿಬ್ಬರದ್ದು ಪ್ರೇಮ ವಿವಾಹ.
ವೆಬ್ ಸೀರೀಸ್ ಒಂದಕ್ಕೆ ಒಟ್ಟಿಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲೇ ಈ ಜೋಡಿಯ ನಡುವೆ ಸ್ನೇಹದ ಬೆಸುಗೆ ಏರ್ಪಟ್ಟು ಅದು ಪ್ರೀತಿಯಾಗಿ ಬದಲಾಗಿತ್ತು. ಇದೀಗ ಮದುವೆ ಮೂಲಕ ಹೊಸ ಬಾಳಿನ ಹೊಸಿಲಲಿ ಈ ತಾರಾ ಜೋಡಿ ನಿಂತಿದೆ.
ಬಾಲ ನಟನಾಗಿ ಬಣ್ಣದ ಜಗತ್ತಿಗೆ ಅಡಿಯಿಟ್ಟ ಸುನೀಲ್ ರಾವ್ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ಪ್ರೇಮ್ ನಿರ್ದೇಶನದ ‘ಎಕ್ಸ್‌ಕ್ಯೂಸ್ ಮಿ’. ಇದು ಅವರ ಸಿನಿಮಾ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತು. ನಂತರ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರು. ಗಾಯಕರಾಗಿಯೂ ಗುರುತಿಸಿಕೊಂಡರು.
ಇತ್ತೀಚೆಗಷ್ಟೇ ಇವರ ನಟನೆಯ ತುರ್ತು ನಿರ್ಗಮನ ಚಿತ್ರ ಬಿಡುಗಡೆಯಾಗಿದೆ. ಶ್ರೇಯಾ ಕೂಡ ಕಾಸ್ಟ್ಯೂಮ್ ಡಿಸೈನರ್ ಆಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಸದ್ಯ ಟಕ್ಕರ್ ಚಿತ್ರಕ್ಕೆ ಇವರದ್ದೇ ಕಾಸ್ಟ್ಯೂಮ್ ಡಿಸೈನ್ ಇದೆ.
Comments are closed.