ರಾಷ್ಟ್ರೀಯ

6ನೆ ಹೆಣ್ಣು ಹೆತ್ತ ಮಡದಿ: 4 ದಿನದ ಹಸುಳೆಯ ಕೊಂದ ಪತಿ!

Pinterest LinkedIn Tumblr


ಗಾಂಧಿನಗರ, ಗುಜರಾತ್‌ : ತನಗೆ ನಿರಂತರ ಆರನೇ ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಕೋಪೋದ್ರಿಕ್ತನಾದ ಮಗುವಿನ ತಂದೆ ಕೇವಲ ನಾಲ್ಕು ದಿನಗಳ ಹಸುಳೆಯನ್ನು ಇರಿದು ಕೊಂದ ಅತ್ಯಮಾನುಷ ಘಟನೆ ಗುಜರಾತ್‌ ನಿಂದ ವರದಿಯಾಗಿದೆ.

ಗಾಂಧಿನಗರ ಸಮೀಪದ ದೇಘಾಮ್‌ ಎಂಬಲ್ಲಿನ ರಖೀಯಾಲ್‌ ಎಂಬಲ್ಲಿಗೆ ಸಮೀಪದ ಮೋತಿ ಮಸಾಂಗ್‌ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಲ್ಕು ದಿನಗಳ ಮಗುವನ್ನು ಕೊಂದ ದುಷ್ಟ ಅಪ್ಪನನ್ನು ವಿಷ್ಣು ರಾಠೊಡ್‌ ಎಂದು ಗುರುತಿಸಲಾಗಿದೆ.

ತನಗೆ ಆರನೇ ಹೆಣ್ಣು ಮಗು ಹುಟ್ಟಿದ ವಾರ್ತೆ ಕೇಳಿ ಕೋಪಾವಿಷ್ಟನಾಗಿ ಹೆಂಡತಿಯ ಮನೆಗೆ ಧಾವಿಸಿ ಬಂದ ರಾಠೊಡ್‌, ಮಗುವಿನ ಪಕ್ಕೆಲುಬುಗಳನ್ನು ತೀವ್ರವಾಗಿ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿ ಸ್ಥಳದಿಂದ ಪಲಾಯನ ಮಾಡಲೆತ್ನಿಸಿದಾಗ ಆತನ ಪತ್ನಿ, ಹೆಣ್ಣು ಮಕ್ಕಳು ಜೋರಾಗಿ ಬೊಬ್ಬಿಟ್ಟರು. ಇವರ ಆಕ್ರಂದನ ಕೇಳಿ ಧಾವಿಸಿ ಬಂದ ನೆರೆಕರೆಯವರು ಓಡಿ ಹೋಗಲೆತ್ನಿಸುತ್ತಿದ್ದ ರಾಠೊಡ್‌ನ‌ನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.

ಮಾರಣಾಂತಿಕ ಇರಿತಕ್ಕೆ ಗುರಿಯಾದ ಮಗುವನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿನ ವೈದ್ಯರು ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸಿದರೂ ಪ್ರಯೋಜನವಾಗದೆ ಅದು ಮೃತಪಟ್ಟಿತು ಎಂದು ಮಗುವಿನ ಅಜ್ಜ ಜಸ್ವಂತ್‌ ಹೇಳಿದರು.

Comments are closed.