ರಾಷ್ಟ್ರೀಯ

ಸೇನಾಧಿಕಾರಿಯ ಹೆಂಡತಿಯ ಕೊಲೆ ಪ್ರಕರಣ: 3352 ಮೆಸೇಜ್​ಗಳ ಹಿಂದಿನ ರಹಸ್ಯವೇನು?!

Pinterest LinkedIn Tumblr


ನವದೆಹಲಿ: ದೆಹಲಿಯಲ್ಲಾದ ಸೈನ್ಯಾಧಿಕಾರಿಯ ಪತ್ನಿ ಶೈಲಜಾ ಹತ್ಯೆ ಪ್ರಕರಣವು ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಆದರೆ ಈ ಕೊಲೆ ಪ್ರಕರಣದಲ್ಲಿ ಆರ್ಮಿ ಮೇಜರ್​ ಒಬ್ಬರನ್ನು ಬಂಧಿಸಿರುವುದೇ ಶಾಕಿಂಗ್ ವಿಚಾರ. ಈ ಹತ್ಯೆಗೆ ಪ್ರೇಮ ಸಂಬಂಧವೇ ಕಾರಣವೆನ್ನಲಾಗಿದೆ, ಮೇಜರ್ ನಿಖಿಲ್ ಹಾಂಡಾರನ್ನು ಮತ್ತೊಬ್ಬ ಮೇಜರ್ ಅಮಿತ್ ದ್ವಿವೇದಿಯವರ ಪತ್ನಿ ಶೈಲಜಾ ದ್ವಿವೇದಿಯವರ ಕೊಲೆ ಪ್ರಕರಣದ ಆರೋಪಿ ಎಂದು ಪರಿಗಣಿಸಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಅನ್ವಯ ಶನಿವಾರ ಮಧ್ಯಾಹ್ನ ಶೈಲಜಾರನ್ನು ಹತ್ಯೆಗೈದ ಬಳಿಕ ಮೇಜರ್ ಹಾಂಡಾ ತನ್ನ ಹೋಂಡಾ ಸಿಟಿಯಲ್ಲಿ ದೆಹಲಿ ಹಾಗೂ ಎನ್​ಸಿಆರ್​ನಲ್ಲಿ ಸುತ್ತಾಡಿದ್ದಾರೆ. ಈ ಮೂಲಕ ಪದೇ ಪದೇ ತಮ್ಮ ಲೊಕೇಷನ್ ಬದಲಾಯಿಸಿದ್ದಾರೆ. ಆದರೆ ಕೊನೆಗೂ ನಿನ್ನೆ ಮಧ್ಯಾಹ್ನ ಇವರನ್ನು ಮೀರತ್​ನ ಕೆಂಟ್​ ಏರಿಯಾದಲ್ಲಿ ಬಂಧಿಸಲಾಗಿದೆ. ಈ ಕೊಲೆಯನ್ನು ಪ್ಲಾನ್​ ಮಾಡಿ ನಡೆಸಲಾಗಿದೆ ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಪಿ ವಿಜಯ್ ಕುಮಾರ್ ಹಾಂಡಾರವರ ಗಾಡಿಯಲ್ಲಿ ಹಲವಾರು ಚಾಕುಗಳು ಪತ್ತೆಯಾಗಿವೆ. ಹೀಗಾಗಿ ಈ ಕೊಲೆ ಪ್ಲ್ಯಾನಿಂಗ್ ನಡೆಸಿ ಮಾಡಿರುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಮೇಜರ್​ ಹಾಂಡಾ ದೆಹಲಿಯ ಸಾಕೆತ್​ ನಿವಾಸಿಯಾಗಿದ್ದು, ಅವರ ತಂದೆ ನೌಕಾ ದಳದ ಅಧಿಕಾರಿಯಾಗಿದ್ದಾರೆ. ಹತ್ಯೆಗೂ ಮೊದಲು ನಿಖಿಲ್​ ನಾಗಾಲ್ಯಾಂಡ್​ನ ದೀಮಾಪುರದಲ್ಲಿ ಪೋಸ್ಟಿಂಗ್​ನಲ್ಲಿದ್ದರು. ಎರಡು ತಿಂಗಳ ಮೊದಲು ಮೇಜರ್ ಅಮಿತ್ ಹಾಗೂ ದ್ವಿವೇದಿ ಹಾಗೂ ಅವರ ಪತ್ನಿ ಶೈಲಜಾ ದ್ವಿವೇದಿ ಕೂಡಾ ದೀಮಾಪುರ್​ನಲ್ಲೇ ಇದ್ದರು. ಮೇಜರ್ ಅಮಿತ್ ಹಾಗೂ ಮೇಜರ್ ನಿಖಿಲ್ ಇಬ್ಬರೂ ಒಳ್ದಳೆಯ ಸ್ನೇಹಿತರಾಗಿದ್ದರು. ಪೊಲೀಸ್​ ಮಾಹಿತಿ ಅನ್ವಯ ಇದೇ ಸಂದರ್ಭದಲ್ಲಿ ನಿಖಿಲ್ ಹಾಗೂ ಶೈಲಜಾ ನಡುವೆಯೂ ಸ್ನೇಹವಾಗಿದೆ ಎಂದು ತಿಳಿದು ಬಂದಿದೆ. ಶೈಲಜಾರವರು 2017ರ ಮಿಸಸ್ ಇಂಡಿಯಾ ಅರ್ಥ್​ನಲ್ಲಿ ಫೈನಲಿಸ್ಟ್​ ಕೂಡಾ ಆಗಿದ್ದರು ಹಾಗೂ ಮಾಡೆಲಿಂಗ್​ ಹವ್ಯಾಸ ಅವರಿಗಿತ್ತು ಎಂಬ ವಿಚಾರವೂ ಬೆಳಕಿಗೆ ಬಂದಿದೆ. M.Tech ಪದವಿ ಪಡೆದಿದ್ದ ಶೈಲಜಾ ಯುನಿವರ್ಸಿಟಿಯೊಂದರಲ್ಲಿ ಪ್ರೊಫೆಸರ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ ಹಾಗೂ NGO ಒಂದರಲ್ಲೂ ಸೇವೆ ಸಲ್ಲಿಸುತ್ತಿದ್ದರು.

ಇನ್ನು ಲಭ್ಯವಾದ ಮಾಹಿತಿ ಅನ್ವಯ ಶನಿವಾರ ಬೆಳಗ್ಗೆ 10 ಗಂಟೆಗೆ ಶೈಲಜಾ ಫಿಸಿಯೋ ಥೆರಪಿ ಮಾಡಿಸಿಕೊಳ್ಳಲು ಆರ್ಮಿ ಹಾಸ್ಪಿಟಲ್​ಗೆ ಬಂದಿದ್ದರು. ಈ ವೇಳೆ ನಿಖಿಲ್ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಮಗನನ್ನು ನೋಡಲು ಬಂದಿದ್ದರು. ಈ ಸಂದರ್ಭದಲ್ಲಿ ಮೇಜರ್ ಹಾಂಡಾ, ಶೈಲಜಾರನ್ನು ಕಾರಿನಲ್ಲಿ ಕೂರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಳಿಕ ನಿಖಿಲ್ ದೆಹಲಿಯ ಕೆಂಟ್​ ಏರಿಯಾದ ಹೊರಗೆ ತಮ್ಮ ಕಾರಿನಲ್ಲಿ ಚಾಕುವಿನಿಂದ ಶೈಲಜಾರ ಕತ್ತನ್ನು ಸೀಳಿದ್ದಾರೆ ಹಾಗೂ ಅವರನ್ನು ಹೊರಗೆ ಎಸೆದು ಅವರ ಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಮತ್ತೆ ತನ್ನ ಮಗನನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಾರೆ. ಇದಾದ ಬಳಿಕ ಸಾಕೆತ್​ನಲ್ಲಿರುವ ತಮ್ಮ ಮನೆಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡಿದ್ದಾರೆ. ತದ ನಂತರ ರಾತ್ರಿ ಇಡೀ ಕಾರಿನಲ್ಲಿ ದೆಹಲಿಯಲ್ಲಿ ಸುತ್ತಾಡಿ, ಬೆಳ್ಗ್ಇನ ಜಾವ ಮೀರತ್ ಕೆಂಟ್​ ಏರಿಯಾ ತಲುಪಿದ್ದಾರೆ. ಆದರೆ ಈ ವೇಳೆ ಅವರು ಮೊಬೈಲ್ ಬಳಸಿದ್ದರಿಂದ ಅವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಲಿಲ್ಲ ಎಂದು ತಿಳಿದು ಬಂದಿದೆ. ಆರೋಪಿಗೆ ಸಂಬಂಧಿಸಿದಂತೆ ಶೈಲಜಾರ ಪತಿ ಅಮಿತ್ ಹಲವಾರು ಮಹತ್ತರ ಸುಳಿವುಗಳನ್ನು ನೀಡಿದ್ದು, ತನ್ನ ಪತ್ನಿ ಹಾಗೂ ಸ್ನೇಹಿತನ ನಡುವಿನ ಸಂಬಂಧ ಅವರಿಗೆ ತಿಳಿದಿತ್ತೆನ್ನಲಾಗಿದೆ.

ಇನ್ನು ಆರ್ಮಿ ಹಾಸ್ಪಿಟಲ್​ನಲ್ಲೂ ಶೈಲಜಾರೊಂದಿಗೆ ಕೊನೆಯ ಬಾರಿ ನಿಖಿಲ್ ಕಂಡು ಬಂದಿದ್ದರೆನ್ನಲಾಗಿದೆ. ಅಲ್ಲದೇ ವಿವಾಹಿತ ನಿಖಿಲ್ ಶೈಲಜಾರನ್ನು ಅದೆಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರೆಂದರೆ ಅಗತ್ಯಕ್ಕಿಂತ ಹೆಚ್ಚು ಕರೆಗಳನ್ನು ಮಾಡುತ್ತಿದ್ದರೆಂದು ಪೊಲಿಸ್​ ತನಿಖೆಯಲ್ಲಿ ಬಹಿರಂಗವಾಗಿದೆ. ಜೂನ್​ 2 ರಂದು ಅವರು ರಜೆ ಪಡೆದು ದೀಮಾಪುರ್​ನಿಂದ ದೆಹಲಿಗೆ ಬಂದಿದ್ದರು. ಇತ್ತ ಶೈಲಜಾ ಕಾಲಿನ ಫಿಸಿಯೋ ಥೆರಪಿಗಾಗಿ ಆರ್ಮಿ ಹಾಸ್ಪಿಟಲ್​ಗೆ ಹೋಗುತ್ತಿದ್ದುದರಿಂದ ನಿಖಿಲ್ ಕೂಡಾ ಮೈಗ್ರೇನ್​ ಚಿಕಿತ್ಸೆಯ ನೆಪ ನೀಡಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರೆಂಬ ವಿಚಾರ ಬಹಿರಂಗಗೊಂಡಿದೆ. ನಿಖಿಲ್ ತನ್ನ ಮಗನನ್ನೂ ಚಿಕಿತ್ಸೆಗಾಗಿ ಆರ್ಮಿ ಹಾಸ್ಪಿಟಲ್​ಗೆ ಭರ್ತಿ ಮಾಡಿದ್ದರು. ಮೇಜರ್ ನಿಖಿಲ್ ಹಾಂಡಾ ತನ್ನನ್ನು ಮದುವೆಯಾಗುವಂತೆ ಶೈಲಜಾರನ್ನು ಪೀಡಿಸುತ್ತಿದ್ದು, ಇದಕ್ಕೆ ನಿರಾಕರಿಸಿದಾಗ ಅವರನ್ನು ಹತ್ಯೆಗೈದಿದ್ದಾರೆನ್ನಲಾಗಿದೆ.

ಈ ಕುರಿತಾಗಿ ಮಾತನಾಡಿರುವ ಪಶ್ಚಿಮ ದೆಹಲಿಯ ಡಿಸಿಪಿ ವಿಜಯ್ ಕುಮಾರ್ ನಿಖಿಲ್, ಶೈಲಜಾರಿಗೆ ನಿರಂತರವಾಗಿ ಫೋನ್​ ಕರೆಗಳನ್ನು ಮಾಡುತ್ತಿದ್ದರು. ಅವರು ಶೈಲಜಾರನ್ನು ಮದುವೆಯಾಗಲು ಬಯಸಿದ್ದರು, ಆದರೆ ಶೈಲಜಾ ಇದಕ್ಕೆ ತಯಾರಿರಲಿಲ್ಲ. ಹೀಗಾಗಿ ಅವರನ್ನು ನಿಖಿಲ್ ಹತ್ಯೆಗೈದಿದ್ಧಾರೆ. ದಾಖಲೆಗಳನ್ವಯ ಜನವರಿಯಿಂದ ಈವರೆಗೂ ಸುಮಾರು 3352 ಬಾರಿ ಆರೋಪಿ ಮೇಜರ್ ನಿಖಿಲ್ ಹಾಂಡಾ ಹಾಗೂ ಶೈಲಜಾ ನಡುವೆ ಮೊಬೈಲ್ ಫೋನ್ ಹಾಗೂ ಮೆಸೇಜ್​ಗಳ ಮೂಲಕ ಮಾತುಕತೆ ನಡೆದಿದೆ. ಒಂದು ದಿನಕ್ಕೆ ಸುಮಾರು 10 ರಿಂದ 15 ಬಾರಿ ಮೇಜರ್​ ಶೈಲಜಾರಿಗೆ ಕರೆ ಅಥವಾ ಮೆಸೇಜ್​ ಮಾಡುತ್ತಿದ್ದರು. ಇಷ್ಟೇ ಅಲ್ಲದೇ ಹಾಂಡಾರಿಗೆ ಇನ್ನೂ ಮೂವರು ಮಹಿಳೆಯರೊಂದಿಗೆ ಸಂಪರ್ಕವಿತ್ತು, ಹೀಗಘಾಇ ಅವರನ್ನು ವಿಚಾರಣೆಗೆ ಕರೆಸಲಾಗುತ್ತದೆ ಎಂದಿದ್ದಾರೆ.

Comments are closed.