ಮನೋರಂಜನೆ

“ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಕಿರುತೆರೆ ಹುಡುಗಿ ಕವಿತಾ

Pinterest LinkedIn Tumblr


ನಟ-ನಿರ್ದೇಶಕ ರಾಜ್‌ ಬಿ. ಶೆಟ್ಟಿ ಅವರು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತವಾಗಿದೆ. ನಟ ಸತೀಶ್‌ ನೀನಾಸಂ ಬಂದು, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಮುಂಚೆ ಈ ಚಿತ್ರದಲ್ಲಿ ಯಾರ್ಯಾರು ನಟಿಸುತ್ತಿದ್ದಾರೆ ಎಂದು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಈಗ “ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಕವಿತಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕವಿತಾಗೆ ಇದು ಮೂರನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ಅವರು ಆರ್ಜೆ ಶ್ರೀನಿ ನಿರ್ದೇಶನದ “ಶ್ರೀನಿವಾಸ ಕಲ್ಯಾಣ’ ಮತ್ತು ರಾಜೇಶ್‌ ಅಭಿನಯದ “ಫ‌ಸ್ಟ್‌ ಲವ್‌’ ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಈಗ ಅವರು ರಾಜ್‌ ಬಿ. ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮುಹೂರ್ತದ ಶಾಟ್‌ನಲ್ಲಿ ಅವರೂ ನಟಿಸಿದ್ದರು. “ಗುಬ್ಬಿ ಮತ್ತು ಬ್ರಹ್ಮಾಸ್ತ್ರ’ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸುಜಯ್‌ ಶಾಸ್ತ್ರಿ. ಈ ಹಿಂದೆ “ಶ್ರೀನಿವಾಸ ಕಲ್ಯಾಣ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ದ ಸುಜಯ್‌ ಶಾಸ್ತ್ರಿ, ಈಗ ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ.

ಇನ್ನು ಚಿತ್ರಕ್ಕೆ ಪ್ರದೀಪ್‌ ಬಿ.ವಿ ಅವರು ಕಥೆ ಬರೆದರೆ, ಪ್ರಸನ್ನ ವಿ.ಎಂ. ಮತ್ತು ಸುಜಯ್‌ ಸೇರಿಕೊಂಡು ಚಿತ್ರಕಥೆಯನ್ನು ರಚಿಸಿದ್ದಾರೆ. ಸುನಿತ್‌ ಹಲಗೇರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. “ಚಮಕ್‌’ ಮತ್ತು “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನ ಟಿ.ಆರ್‌. ಚಂದ್ರಶೇಖರ್‌ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.

Comments are closed.