ರಾಷ್ಟ್ರೀಯ

ATMನಲ್ಲಿ 12 ಲಕ್ಷ ನೋಟುಗಳ ಚಿಂದಿ ಮಾಡಿದ ಇಲಿಗಳು!

Pinterest LinkedIn Tumblr


ಹೊಸದಿಲ್ಲಿ: ಅಸ್ಸಾಂನ ಎಟಿಎಂವೊಂದರಲ್ಲಿ ಬರೋಬ್ಬರಿ 12 ಲಕ್ಷ ರೂ.ಗಳು ಇಲಿಗೆ ಆಹುತಿಯಾದ ಘಟನೆಯು ಟ್ವಿಟರ್‌, ಫೇಸ್‌ ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ನೋಟುಗಳಿಗೆ ಎಟಿಎಂನಲ್ಲಿ ಇಂಥ ಸ್ಥಿತಿ ಬಂದಿದ್ದು ನೋಡಿ ಆಘಾತ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಲವು ಮೀಮ್‌ ಗಳು, ಜೋಕ್‌ಗಳನ್ನು ಮಾಡಿ ನಗು ಉಕ್ಕಿಸಿದ್ದಾರೆ.

ಈ ವಿಲಕ್ಷಣ ಘಟನೆ ನಡೆದದ್ದು ಅಸ್ಸಾಂನ ತಿನ್ಸುಕಿಯ ಲೈಪುಲಿ ಪ್ರದೇಶದ ಎಸ್‌ಬಿಐ ಎಟಿಎಂನಲ್ಲಿ. ಈ ಎಟಿಎಂ ಮೇ 20ರಂದು ದುರಸ್ತಿಗೀಡಾಗಿತ್ತು. ಮರುದಿನವೇ ಖಾಸಗಿ ಭದ್ರತಾ ಸಂಸ್ಥೆ 500 ರೂ. ಮತ್ತು 2000 ರೂ. ನೋಟುಗಳ 29.48 ಲಕ್ಷ ರೂ.ಗಳನ್ನು ಎಟಿಎಂನಲ್ಲಿ ಜಮೆ ಮಾಡಿತ್ತು. ಜೂ.11ರಂದು ತಂತ್ರಜ್ಞರು ಎಟಿಎಂ ಸರಿಪಡಿಸಲು ಬಂದಾಗ ಅಚ್ಚರಿ ಕಾದಿತ್ತು. ಎಟಿಎಂ ಯಂತ್ರದೊಳಗೆ ನೋಟುಗಳು ಹರಿದು ಚಿಂದಿ ಚಿಂದಿಯಾಗಿದ್ದವು. ಸುಮಾರು 12.38 ಲಕ್ಷ ರೂ.ಗಳು ನಾಶವಾಗಿದ್ದರೆ, 17.10 ಲಕ್ಷ ರೂ.ಗಳು ಬಚಾವಾಗಿದ್ದವು. ಹರಿದ ನೋಟುಗಳ ರಾಶಿಯಲ್ಲಿ ಸತ್ತ ಇಲಿಯೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜೋಕುಗಳ ಸುರಿಮಳೆಯಾಗಿದ್ದು, ‘ಎಟಿಎಂ ಯಂತ್ರದ ಮೇಲೆ ಇಲಿಯಿಂದ ಸರ್ಜಿಕಲ್‌ ದಾಳಿ’, ‘ಇಲಿ ಎಟಿಎಂಗೆ ಹೋದರೆ ಇದೇ ಆಗುವುದು’, ‘ನೋಟು ಅಪಮೌಲ್ಯ ಮಾಡಿದ ಇಲಿ’ ಎಂಬೆಲ್ಲ ಟ್ವೀಟ್‌ ಗಳು ಕಾಣಿಸಿಕೊಂಡಿವೆ.

Comments are closed.