ಮನೋರಂಜನೆ

ಯಂಗ್‌ ಅಂಬಿಯ ಚಿತ್ರೀಕರಣ ಜೋರು; 10 ಕೆಜಿ ತೂಕ ಇಳಿಸಿಕೊಂಡ ಸುದೀಪ್‌

Pinterest LinkedIn Tumblr


“ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣ ಇದೀಗ ಭರದಿಂದ ಸಾಗುತ್ತಿದೆ. ಈಗಾಗಲೇ ಅಂಬರೀಷ್‌ ಅವರ ಭಾಗದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುವ ನಿರ್ದೇಶಕ ಗುರುದತ್‌ ಗಾಣಿಗ, ಇದೀಗ ಸುದೀಪ್‌ ಮತ್ತು ಶ್ರುತಿ ಹರಿಹರನ್‌ ಅವರ ಭಾಗದ ದೃಶ್ಯಗಳನ್ನು ಚಿತ್ರೀಕರಿಸುವಲ್ಲಿ ನಿರತರಾಗಿದ್ದಾರೆ. ಚನ್ನಪಟ್ಟಣ, ಮದ್ದೂರು ಮತ್ತು ಕೆಆರ್‌ಎಸ್‌ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ಜೋರಾಗಿ ಸಾಗುತ್ತಿದೆ.

ಇತ್ತೀಚೆಗೆ ಆ ಭಾಗದಲ್ಲಿ ಸುದೀಪ್‌ ಮತ್ತು ಶ್ರುತಿಹರಿಹರನ್‌ ಅವರ ಮಾತಿನ ಭಾಗದ ದೃಶ್ಯಗಳನ್ನೂ ಸೆರೆ ಹಿಡಿಯಲಾಗಿದೆ. ಈ ಚಿತ್ರಕ್ಕಾಗಿಯೇ ಸುದೀಪ್‌ ಅವರು ಸುಮಾರು 10 ಕೆಜಿ ತೂಕವನ್ನು ಇಳಿಸಿಕೊಂಡಿರುವುದು ವಿಶೇಷ. ಯಾಕೆಂದರೆ, ಅವರು ಅಂಬರೀಷ್‌ ಅವರ ಯೌವ್ವನದ ಪಾತ್ರ ನಿರ್ವಹಿಸುತ್ತಿದ್ದು, ಅದಕ್ಕಾಗಿ ತೂಕ ಇಳಿಸಿಕೊಳ್ಳುವ ಅಗತ್ಯವಿತ್ತು. ಹಾಗಾಗಿ, ಸುದೀಪ್‌ ಅವರು ಹತ್ತು ಕೆಜಿಯಷ್ಟು ತೂಕ ಇಳಿಸಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದು ವಿಶೇಷ. ಯಂಗ್‌ ಅಂಬಿಯಾಗಿ ಕಾಣಿಸಿಕೊಳ್ಳುತ್ತಿರುವ ಸುದೀಪ್‌ ಅವರ ಪಾತ್ರ ಮತ್ತು ಕಾಸ್ಟೂಮ್‌ ಕೂಡ ಚಿತ್ರದ ಹೈಲೈಟ್‌ಗಳಲ್ಲೊಂದು ಎಂಬುದು ನಿರ್ಮಾಪಕ ಜಾಕ್‌ಮಂಜು ಅವರ ಮಾತು.

ಆರ್‌.ಎಸ್‌.ಗೌಡ ಸ್ಟುಡಿಯೋದಲ್ಲಿ ಸೆಟ್‌ ಹಾಕಿದ್ದು, ಅಲ್ಲೂ ಕೂಡ ಕೆಲ ಭಾಗವನ್ನು ಚಿತ್ರೀಕರಿಸಲಾಗಿದೆ. ಇನ್ನು, ಸುದೀಪ್‌ ಹಾಗೂ ಶ್ರುತಿ ಹರಿಹರನ್‌ ಅವರ ಕಾಂಬಿನೇಷನ್‌ನಲ್ಲಿ ಒಂದು ಹಾಡು ಬಾಕಿ ಇದ್ದು, ಇದುವರೆಗೆ ಮಾತಿನ ಭಾಗವನ್ನು ಚಿತ್ರೀಕರಿಸಲಾಗಿದೆ. ಅಂಬರೀಷ್‌ ಅವರ ಭಾಗದ ಚಿತ್ರೀಕರಣ ಇನ್ನೂ ಬಾಕಿ ಇದೆ. ಅವರು ಏ.26 (ಇಂದು)ರಿಂದ ಡೇಟ್‌ ನೀಡಿದ್ದು, ಗುರುವಾರದಿಂದ ಅವರ ಭಾಗದ ಚಿತ್ರೀಕರಣ ನಡೆಯಲಿದೆ. ಅವರ ಜೋಡಿಯಾಗಿ ಚಿತ್ರದಲ್ಲಿ ಸುಹಾಸಿನಿ ಕಾಣಿಸಿಕೊಂಡಿದ್ದು. ಅವರಿಬ್ಬರ ಕಾಂಬಿನೇಷನ್‌ ದೃಶ್ಯಗಳನ್ನು ಚಿತ್ರೀಕರಿಸಲು ತಂಡ ಸಜ್ಜಾಗಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಜೆಬಿನ್‌ ಜಾಕೋಬ್‌ ಛಾಯಾಗ್ರಹಣವಿದೆ.

-ಉದಯವಾಣಿ

Comments are closed.