ಮನೋರಂಜನೆ

ಖ್ಯಾತ ನಿರ್ಮಾಪಕನ ಪುತ್ರನಿಂದ ಅತ್ಯಾಚಾರ: ನಟಿ ಆರೋಪ

Pinterest LinkedIn Tumblr


ತೆಲುಗು ಚಿತ್ರರಂಗದಲ್ಲಿ ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗೆ ತೆಲುಗು ನಟಿಯೊಬ್ಬರು ಕಾಸ್ಟಿಂಗ್ ಕೌಚ್ ವಿರುದ್ಧ ಅರೆಬೆತ್ತಲಾಗಿ ಪ್ರತಿಭಟಿಸುವ ಮೂಲಕ ಇಡೀ ದೇಶದ ಗಮನಸೆಳೆದರು. ಇದೀಗ ಕಾಸ್ಟಿಂಗ್ ಕೌಚ್‌ನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾರೆ.

ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್‌ನಲ್ಲಿ ಭಾಗಿಯಾಗಿರುವ ಖ್ಯಾತನಾಮರ ಹೆಸರನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ತೆಲುಗಿನ ಟಾಪ್ ನಿರ್ಮಾಪಕರೊಬ್ಬರ ಪುತ್ರ ತನ್ನ ಜತೆ ಅಶ್ಲೀಲವಾಗಿ ವರ್ತಿಸಿರುವ ಫೋಟೋವನ್ನು ಬಿಡುಗಡೆ ಮಾಡಿರುವ ನಟಿ, ‘ಅವರ ಸ್ಟುಡಿಯೋದಲ್ಲಿ ಆ ನಟ ನನ್ನ ಮೇಲೆ ಅಕ್ಷರಶಃ ಅತ್ಯಾಚಾರ ಎಸಗಿದ. ನಿನ್ನನ್ನು ಖ್ಯಾತ ನಿರ್ದೇಶಕ, ನಿರ್ಮಾಪಕರ ಮೂಲಕ ಬೆಳ್ಳಿತೆರೆಗೆ ಪರಿಚಯಿಸುತ್ತೀನಿ ಎಂದು ಪುಸಲಾಯಿಸಿದ್ದ. ಪಾತ್ರಕ್ಕಾಗಿ ನಿರೀಕ್ಷಿಸುತ್ತಿದ್ದ ನಾನು ಅವರ ಜತೆ ಹೋದೆ. ಒಂದು ದಿನ ಅವರ ಸ್ಟುಡಿಯೋಗೆ ಕರೆದೊಯ್ದು ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ’ ಎಂದು ಆರೋಪಿಸಿದ್ದಾರೆ.

ಈ ಘಟನೆ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಇಂಡಿಯನ್ ಐಡಲ್ ಗಾಯಕರೊಬ್ಬರು ಆಗಾಗ ತನ್ನನ್ನು ಭೇಟಿಯಾಗುತ್ತಿದ್ದರು. ಬಳಿಕ ತನ್ನ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಕೇಳಿದ್ದ. ವಾಟ್ಸಾಪ್‌ನಲ್ಲಿ ಆ ಗಾಯಕನ ಜತೆಗೆ ನಡೆದಿರುವ ಸಂಭಾಷಣೆಯ ಸ್ಕ್ರೀನ್‌ಶಾಟ್ಸನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ನಗ್ನ ಚಿತ್ರಗಳ ಪ್ರಸ್ತಾಪವೂ ಇದೆ. ಅದೇ ರೀತಿ ತೆಲುಗಿನ ಖ್ಯಾತ ನಿರ್ದೇಶಕರೊಬ್ಬರ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಒಟ್ಟಾರೆ ಟಾಲಿವುಡ್‍ನಲ್ಲಿ ಅರೆನಗ್ನ ಪ್ರತಿಭಟನೆ ಮೂಲಕ ಸಂಚಲನ ಮೂಡಿಸಿರುವ ನಟಿಯ ಪರ ಕೆಲವರಿದ್ದರೆ, ಇನ್ನೂ ಕೆಲವರು ಆಕೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಪೊಲೀಸರಿಗೆ ದೂರು ನೀಡುವುದು ಬಿಟ್ಟು ಈ ರೀತಿ ಬಟ್ಟೆ ಕಳಚಿ ಪ್ರತಿಭಟಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

Comments are closed.