ಕರ್ನಾಟಕ

2019ರ ನಂತರ ಬಿಜೆಪಿ ಎನ್ನುವ ದೊಡ್ಡ ರೋಗ ದೇಶದಲ್ಲಿ ಇರುವುದಿಲ್ಲ: ಪ್ರಕಾಶ್‌ ರೈ

Pinterest LinkedIn Tumblr


ಬಾಗಲಕೋಟ: 2019ರ ಲೋಕಸಭೆ ಚುನಾವಣೆ ನಂತರ ಬಿಜೆಪಿ ಎನ್ನುವ ದೊಡ್ಡ ರೋಗ ದೇಶದಲ್ಲಿ ಇರುವುದಿಲ್ಲ’ ಎಂದು ನಟ, ನಿರ್ದೇಶಕ, ಜಸ್ಟ್ ಆಸ್ಕಿಂಗ್ ಫೌಂಡೇಶನ್ ಮುಖ್ಯಸ್ಥ ಪ್ರಕಾಶ ರೈ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದ ಕೆರಳಿಸುವ ಮೂಲಕ ಬಿಜೆಪಿ ದೇಶದಲ್ಲಿ ಅಲ್ಪಸಂಖ್ಯಾತರನ್ನು ಭಯಕ್ಕೆ ದೂಡಿದೆ. ಸಂವಿಧಾನ ಬದಲಾಯಿಸುವ ಮೂಲಕ ಜನರ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ ಎಂದರು.

ಸರಕಾರದ ವಿರುದ್ಧ ಮಾತನಾಡುವುದೇ ತಪ್ಪು ಎನ್ನುವ ಕೇಂದ್ರ ಸರಕಾರಕ್ಕೆ ಅಧಿಕಾರ ಹೇಗೆ ಕೊಡಬೇಕು? ಗೋಹತ್ಯೆ ನಿಷೇಧ ಹೇರಿರುವ ಬಿಜೆಪಿ ಸರಕಾರ ಗೋವು ಹತ್ಯೆ ಮಾಡಿದವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಕೊಲ್ಲಲು ಅನುಮತಿ ನೀಡಿದೆ. ಬಿಜೆಪಿ ರಾಕ್ಷಸರ ಬಣವಾಗಿದೆ’ ಎಂದು ಟೀಕಿಸಿದರು.

ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವ ಉತ್ತರ ಪ್ರದೇಶದ ಮುಖ್ಯಮಂತ್ರಿಯಿಂದ ಜನರು ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಜನರಿಗೆ ಬಿಜೆಪಿ ಬಿಟ್ಟು ಅವಕಾಶಗಳಿವೆ, ಈ ಪಕ್ಷ ಬೇಡ ಎಂದು ಹೇಳಲು ನೈತಿಕ ಹಕ್ಕಿದೆ ಎಂದು ರೈ ಹೇಳಿದರು.

ನಾನು ರಾಜಕಾರಣದ ಉದ್ದೇಶದಿಂದ ಪ್ರಶ್ನೆ ಮಾಡುತ್ತಿಲ್ಲ. ಇನ್ನೂ ಹತ್ತು ವರ್ಷ ನಾನು ರಾಜಕೀಯಕ್ಕೆ ಬರುವುದಿಲ್ಲ. ಪ್ರಜೆಗಳು ಸದಾ ವಿಪಕ್ಷದಂತೆ ಪ್ರಶ್ನೆ ಮಾಡುತ್ತಿದ್ದರೆ ದೇಶ ಬದಲಾಗುತ್ತದೆ. ಮೊದಲು ದೊಡ್ಡ ಸುಳ್ಳು ಹೇಳುವವರನ್ನು ಪಕ್ಕಕ್ಕೆ ಸರಿಸೋಣ, ನಂತರ ಉಳಿದವರೂ ಸರಿಯುತ್ತಾರೆ. ಒಂದೇ ವರ್ಷದಲ್ಲಿ ದೇಶದಲ್ಲಿ ಬದಲಾವಣೆಯಾಗುತ್ತದೆ ಎಂಬ ನಂಬಿಕೆ ನನಗಿಲ್ಲ’ ಎಂದು ಪ್ರಕಾಶ್‌ ರೈ ವಿವರಿಸಿದರು.

ಕಾವೇರಿ ವಿವಾದವನ್ನು ಚುನಾವಣೆ, ಬೇಸಿಗೆ ಬಂದಾಗ ಬೇಳೆ ಕಾಳಿನಂತೆ ಕೆಲವರು ಬೇಯಿಸಿಕೊಳ್ಳುತ್ತಾರೆ. ಮೂರು ರಾಜ್ಯಗಳು ಕುಳಿತು ಇತ್ಯರ್ಥಪಡಿಸುವ ವಿಷಯವಿದು. ತಜ್ಞರ ಸಲಹೆ ಮೇರೆಗೆ ವಿವಾದ ಇತ್ಯರ್ಥವಾಗಬೇಕು. ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಮಾತನಾಡುವಂತಾಗಬಾರದು ಎಂದು ಅವರು ಹೇಳಿದರು.

ಕಾವೇರಿ ನದಿ ಪಾತ್ರದಲ್ಲಿ ರಿಯಲ್ ಎಸ್ಟೇಟ್, ಅಕ್ರಮ ಮರಳು ಮಾಫಿಯಾ ನಡೆದಿದೆ. ರಾಜಕಾರಣಿಗಳು ಆ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಫೌಂಡೇಶನ್‍ನಿಂದ ಕಾವೇರಿ ಸಮಸ್ಯೆ ಬಗ್ಗೆ ವಿವರವಾದ ವರದಿ ತಯಾರಿಸಿ ಜನರ ಎದುರಿಗಿಡುತ್ತೇವೆ. ಕಮಲ್ ಹಾಸನ್, ರಜನೀಕಾಂತ್ ಅವರಿಗಿಂತ ಕಾವೇರಿ ಸಮಸ್ಯೆ ದೊಡ್ಡದು. ನಾನು ಆ ವ್ಯಕ್ತಿಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಪ್ರಕಾಶ್‌ ರೈ ಸ್ಪಷ್ಟಪಡಿಸಿದರು.

Comments are closed.