ಮನೋರಂಜನೆ

ಮಗನ ಜತೆ ಕುಸ್ತಿ ಕಲಿಯುತ್ತಿರುವ ದುನಿಯಾ ವಿಜಯ್‌

Pinterest LinkedIn Tumblr

*ಹರೀಶ್‌ಬಸವರಾಜ್‌

ಬಾಲಿವುಡ್‌ನಲ್ಲಿ ಕುಸ್ತಿಯನ್ನು ಆಧರಿಸಿ ಎರಡು ಚಿತ್ರಗಳು ತೆರೆಗೆ ಬಂದು ಯಶಸ್ವಿಯಾಗಿರುವ ಬೆನ್ನಲ್ಲೆ ಈಗ ಕನ್ನಡದಲ್ಲಿಯೂ ಕುಸ್ತಿ ಕಥೆಯನ್ನಿಟ್ಟುಕೊಂಡು ದುನಿಯಾ ವಿಜಯ್‌ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕಾಗಿ ಉತ್ತರ ಕರ್ನಾಟಕದಿಂದ ಪೈಲ್ವಾನರನ್ನು ಕರೆಸಿದ್ದಾರೆ.

ಈ ಚಿತ್ರದ ಮೂಲಕ ತಮ್ಮ ಪುತ್ರ ಸಾಮ್ರಾಟ್‌ನನ್ನು ಬೆಳ್ಳಿತೆರೆಗೆ ಪಚರಿಚಯ ಮಾಡುತ್ತಿರುವ ವಿಜಯ್‌, ಕುಸ್ತಿಯಂಥ ಕ್ರೀಡೆಗಳು ಉಳಿದು ಬೆಳೆಯಬೇಕು. ಅದಕ್ಕಾಗಿ ಈ ಚಿತ್ರ ಪೂರವಾಗಿರುತ್ತದೆ ಎಂದು ಹೇಳಿದ್ದಾರೆ.

ಅನಿಲ್‌ ಮಂಡ್ಯ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇಡೀ ಸಿನಿಮಾ ಮಟ್ಟಿ ಕುಸ್ತಿಯನ್ನು ಆಧರಿಸಿದ್ದು, ಅದಕ್ಕಾಗಿ ಪುತ್ರನ ಜತೆಗೂಡಿ ಪ್ರತಿ ದಿನ ಬೆಳಗ್ಗೆ, ಸಂಜೆ ಕುಸ್ತಿಯ ಪಟ್ಟುಗಳ ತರಬೇತಿ ನಡೆಸುತ್ತಿದ್ದಾರೆ.

‘ನಾನು ಚಿಕ್ಕ ವಯಸ್ಸಿನಿಂದಲೂ ಗರಡಿ ಮನೆಯಲ್ಲಿ ಬೆಳೆದವನು. ಸಿನಿಮಾ ರಂಗಕ್ಕೆ ಬಂದಾಗಿನಿಂದ ನನಗೆ ಕುಸ್ತಿ ಬಗ್ಗೆ ಸಿನಿಮಾ ಮಾಡಬೇಕು ಎಂಬ ಕನಸಿತ್ತು. ಈಗ ಅದು ಈಡೇರುತ್ತಿದೆ. ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಾದ ಪೈಲ್ವಾನ್‌ ಕಾರ್ತಿಕ್‌ ಕಾಟೆ, ಅಪ್ಪಾಸಿ ತೇರದಾಳ, ಬೀರೇಶ್‌ ಎಂಬುವವರು ನನಗೆ ತರಬೇತಿ ನೀಡುತ್ತಿದ್ದಾರೆ. ನನ್ನ ಜತೆ ಸಾಮ್ರಾಟ್‌ ಸಹ ಬೆಳಗ್ಗೆ ಮತ್ತು ಸಂಜೆ ಕುಸ್ತಿ ಕಲಿಯುತ್ತಿದ್ದಾನೆ. ಇದು ಸ್ಯಾಂಡಲ್‌ವುಡ್‌ಗೆ ನೆಲದ ಮೂಲದ ಸಿನಿಮಾ ಆಗುತ್ತದೆ’ಎನ್ನುತ್ತಾರೆ ವಿಜಯ್‌.

ಈ ಚಿತ್ರದಲ್ಲಿ ವಿಜಯ್‌ ಪುತ್ರ ಸಾಮ್ರಾಟ್‌ ಮರಿ ಪೈಲ್ವಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆತನ ಜತೆ ರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಆಡಿದ ಬಾಲಕನೋರ್ವನನ್ನು ಕರೆಸಿ ಅವನ ಜತೆ ತಯಾರಿ ಮಾಡಿಸಲಾಗುತ್ತಿದೆ. ಸಿನಿಮಾದಲ್ಲಿ ಸಾಮ್ರಾಟ್‌ ಎದುರು ಆ ಹುಡುಗನೇ ನಟಿಸುತ್ತಾನೆ. ಈ ಚಿತ್ರದ ಕಥೆಯನ್ನು ಸ್ವತಃ ದುನಿಯಾ ವಿಜಯ್‌ ಬರೆದಿದ್ದು, ಅದಕ್ಕಾಗಿ ಪ್ರಖ್ಯಾತ ಕುಸ್ತಿ ಪಟುಗಳಿಂದಲೇ ಮಾಹಿತಿ ಸಂಗ್ರಹಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಕುಸ್ತಿ ನಶಿಸುತ್ತಾ ಹೋಗುತ್ತಿದೆ. ಹಾಗಾಗಿ ನನಗೆ ಅದರ ಬಗ್ಗೆ ಸಿನಿಮಾ ಮಾಡಬೇಕು ಎಂದು ತೀವ್ರವಾಗಿ ಅನ್ನಿಸಿತ್ತು. ಜಿಮ್‌ಗೆ ಹೋಗುವವರಿಗಿಂತ ಗರಡಿ ಮನೆಯಲ್ಲಿ ಕಸರತ್ತು ಮಾಡುವವರದ್ದು ನೈಜ ದೇಹದಾಢ್ಯತೆ. ಅವರ ಬಗ್ಗೆ ಜನರಿಗೆ ಹೇಳುವ ಒಂದು ಪ್ರಯತ್ನ ಇದಾಗಿದೆ.” -ದುನಿಯಾ ವಿಜಯ್‌, ನಟ

Comments are closed.