ಮನೋರಂಜನೆ

ಕಲ್ಯಾಣದಲ್ಲಿ ಸಿಗಲಿದ್ದಾನೆ ನಗುವಿನ ನಂಜುಂಡಿ: ನಂಜುಂಡಿ ಕಲ್ಯಾಣ ಚಿತ್ರ ವಿಮರ್ಶೆ

Pinterest LinkedIn Tumblr

*ಶರಣು ಹುಲ್ಲೂರು

ನಮ್ಮ ರೇಟಿಂಗ್ 2.5 / 5
ಓದುಗರ ರೇಟಿಂಗ್4 / 5
ನಿಮ್ಮ ವಿಮರ್ಶೆ ಬರೆಯಿರಿ
ಕಲಾವಿದರುತನುಷ್,ಶ್ರವ್ಯಾ ರಾವ್,ಕುರಿ ಪ್ರತಾಪ್,ಪದ್ಮಜಾ ರಾವ್,ಸುಂದರ್‌,ಪಿ.ಡಿ.ಸತೀಶ್‌
ನಿರ್ದೇಶಕರಾಜೇಂದ್ರ ಕಾರಂತ್
ಚಿತ್ರದ ವಿಧRomantic Comedy
ಅವಧಿ2 hrs. 10 Min.

……………………………………………

ನಗುವುದಕ್ಕೇ ಯಾವುದೇ ಲಾಜಿಕ್‌ ಬೇಕಿಲ್ಲ. ನಿರುಮ್ಮಳ ಮನಸು ಸಾಕು ಎಂಬ ಮಾತಿದೆ. ಇದೇ ಫಾರ್ಮುಲಾ ಬಳಸಿಕೊಂಡು ‘ನಂಜುಂಡಿ ಕಲ್ಯಾಣ’ ಚಿತ್ರ ಮಾಡಿದ್ದಾರೆ ನಿರ್ದೇಶಕ ರಾಜೇಂದ್ರ ಕಾರಂತ್‌. ಈ ಸಿನಿಮಾದ ಕಥೆಯಲ್ಲಿ ಯಾವುದೇ ಲಾಜಿಕ್‌ ಹುಡುಕದೇ ಪಾತ್ರಗಳು ಆಡುವ ಆಟಕ್ಕೆ ಕಣ್ಣೊಡಿದರೆ ಒಂದಷ್ಟು ನಗು ಸಿಗುತ್ತದೆ. ಆ ರೀತಿಯಲ್ಲಿ ಚಿತ್ರ ಕಟ್ಟಿದ್ದಾರೆ ನಿರ್ದೇಶಕರು.

ಸಿನಿಮಾದ ಕಥೆ ಸಿಂಪಲ್‌. ವಿದೇಶದಲ್ಲಿರುವ ಕಥಾ ನಾಯಕ ನಂಜುಂಡಿ (ತನುಷ್‌), ಅಮ್ಮನ ಗರ್ವಭಂಗ ಮಾಡಲು ಒಂದು ನಾಟಕವಾಡುತ್ತಾನೆ. ತನ್ನಿಷ್ಟದ ಹುಡುಗಿಯನ್ನು ಮದುವೆಯಾಗಲು ಮತ್ತು ತಾಯಿಯ ದುಡ್ಡಿನ ಮದ ಅಡಗಿಸಲು ಸ್ನೇಹಿತ ಮಾಲು (ಕುರಿ ಪ್ರತಾಪ್‌)ನನ್ನು ಮದುವೆಯಾಗಿ ಭಾರತಕ್ಕೆ ಬರುತ್ತಾನೆ. ತನ್ನ ಮಗನ ಸಲಿಂಗ ಮದುವೆಗೆ ಒಪ್ಪದ ತಾಯಿ, ಮಾಲುನಿಂದ ಮಗನನ್ನು ದೂರ ಮಾಡಲು ಹಲವು ತಂತ್ರಗಳನ್ನು ಹೆಣೆಯುತ್ತಾಳೆ. ತನ್ನ ಅಮ್ಮನ ತಂತ್ರವನ್ನು ಗೆದ್ದು ತಾನಿಷ್ಟಪಟ್ಟ ಹುಡುಗಿ ವಿಂದ್ಯಾ(ಶ್ರವ್ಯ)ಳನ್ನು ನಂಜುಂಡಿ ಮದುವೆ ಆಗುತ್ತಾನಾ ಅಥವಾ ಇಲ್ಲವಾ ಎನ್ನುವುದೇ ಸಿನಿಮಾ.

ಭಾರತದಲ್ಲಿ ಸಲಿಂಗ ಮದುವೆಗೆ ಅವಕಾಶವಿಲ್ಲದೇ ಇದ್ದರೂ, ಅದು ಕೇವಲ ನಾಟಕೀಯ ತಂತ್ರವಾಗಿ ಬಳಕೆಯಾಗಿದ್ದರಿಂದ ಈ ಅಂಶ ಮತ್ತು ಪಾತ್ರ ಪ್ರೇಕ್ಷಕನಿಗೆ ಕಿರಿಕಿರಿ ಮಾಡದು. ಹಾಸ್ಯ ನಟ ಕುರಿ ಪ್ರತಾಪ್‌ ಇಂಥದ್ದೊಂದು ಪಾತ್ರವನ್ನು ಸಲೀಸಾಗಿ ನಿರ್ವಹಿಸಿದ್ದು, ಡಬಲ್‌ ಮೀನಿಂಗ್‌ ಹೊಡೆಯುತ್ತಲೇ ಪ್ರೇಕ್ಷಕರನ್ನು ನಗಿಸುತ್ತಾರೆ. ನಾಯಕಿಗಿಂತಲೂ ಹೆಚ್ಚು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ನಾಯಕ ತನುಷ್‌, ಆ್ಯಕ್ಷನ್‌ ದೃಶ್ಯಗಳಲ್ಲಿ ಖುಷಿಕೊಟ್ಟಷ್ಟು ಭಾವನಾತ್ಮಕ ಸನ್ನಿವೇಶಗಳಲ್ಲಿ ಕೊಡಲ್ಲ. ಆದರೆ, ತಮ್ಮ ಪಾತ್ರವನ್ನು ಪ್ರೇಕ್ಷಕರಿಗೆ ದಾಟಿಸಲು ಶಕ್ತಿಮೀರಿ ಪ್ರಯತ್ನ ಮಾಡಿದ್ದಾರೆ. ಮತ್ತಷ್ಟು ತರಬೇತಿಯೊಂದಿಗೆ ಬಂದರೆ, ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರುತ್ತಾರೆ. ಸಲಿಂಗಿಗಳ ಹಾವಳಿಯಲ್ಲಿ ಶ್ರವ್ಯ ಮಂಕಾಗಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪದ್ಮಜಾ ರಾವ್‌, ಪಿರಿಪಿರಿ ಮಾಡುವಷ್ಟು ಪಾತ್ರದೊಳಕ್ಕೆ ಇಳಿದಿದ್ದಾರೆ. ಬೆರಳೆಣಿಕೆಯ ದೃಶ್ಯದಲ್ಲಿ ಬಂದು ಹೋಗುವ ಸುಂದರ್‌ ಕೂಡ ಮನಸ್ಸಿನಲ್ಲಿ ಉಳಿಯುತ್ತಾರೆ.

ಸಾಮಾನ್ಯವಾಗಿ ರಾಜೇಂದ್ರ ಕಾರಂತ್‌ ನಿರ್ದೇಶನದ ಚಿತ್ರದಲ್ಲಿ ಆಂಗೀಕ ಅಭಿನಯಕ್ಕಿಂತ ವಾಚಿಕಕ್ಕೆ ಮಹತ್ವ ಜಾಸ್ತಿ. ಈ ಸಿನಿಮಾದಲ್ಲೂ ಅದು ಮುಂದುವರೆದಿದೆ. ಮಾತೇ ಇಲ್ಲಿ ಮಾಣಿಕ್ಯದಂತಿದೆ. ಮೌನವೂ ಮಾತಾಡಲು ಹಪಾಹಪಿಸುತ್ತದೆ. ಅಲ್ಲಷ್ಟು ಡಬಲ್‌ ಮೀನಿಂಗ್‌ ಡೈಲಾಗ್‌ ನುಸುಳುತ್ತವೆ. ಇವೆಲ್ಲವೂ ನಂಜುಂಡಿಯ ಕಲ್ಯಾಣಕ್ಕೆ ತಳಿರು ತೋರಣದಂತೆ ಕಾಣುತ್ತವೆ. ಲಾಜಿಕ್‌ ಹುಡುಕದೇ ನಗಬೇಕು ಎನ್ನುವವರು ‘ನಂಜುಂಡಿ ಕಲ್ಯಾಣ’ಕ್ಕೆ ಸಾಕ್ಷಿಯಾಗಬಹುದು.

Comments are closed.