Uncategorized

ರೀಲ್‌ನಲ್ಲಿ ಹೀರೋ, ರಿಯಲ್ ಲೈಫ್‌ನಲ್ಲಿ ವಿಲನ್ !

Pinterest LinkedIn Tumblr

-ಭವ್ಯ ಬೊಳ್ಳೂರು

ಬಾಲಿವುಡ್‌ನ್ನು ಬರೋಬ್ಬರಿ ಮೂರು ದಶಕಗಳಷ್ಟು ಕಾಲ ಆಳಿದ ಸಲ್ಮಾನ್ ಖಾನ್‌ಗೆ ಕೊನೆಗೂ ಜೈಲಿನಲ್ಲಿ ಮುದ್ದೆ ಮುರಿಯುವ ಕಾಲ ಬಂದಿದೆ. ಯಾವ್ಯಾವುದೋ ಕಾರಣಗಳಿಂದಾಗಿ ಸುಮಾರು 20 ವರ್ಷಗಳಿಂದ ಕೋರ್ಟ್‌ನಲ್ಲಿ ಎಳೆದಾಡಿದ ಪ್ರಕರಣಕ್ಕೆ ಅಂತೂ ಇಂತೂ ಮುಕ್ತಿ ದೊರಕಿದೆ. ಈ ಮೂಲಕ ಅದೆಷ್ಟೋ ಹೆಣ್ಮಕ್ಕಳ ಕನಸಿನ ಚಿತ್ತಾರವನ್ನೇ ಬಿಡಿಸಿದ ಸಲ್ಲೂ ಮಿಯಾ, ವಿಲನ್ ಪಟ್ಟವನ್ನು ಹೊತ್ತುಕೊಳ್ಳುವ ದೌರ್ಭಾಗ್ಯಕ್ಕೆ ತುತ್ತಾಗಿದ್ದಾರೆ. ವಿಷಾದದ ಸಂಗತಿಯೆಂದರೆ ಸಲ್ಮಾನ್ ಖಾನ್‌ನ ಮೇಲೆ ಅಪರಾಧ ಸಾಬೀತಾಗಲು, ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿ ಇಪ್ಪತ್ತು ವರ್ಷಗಳೇ ಬೇಕಾಯಿತು. 52ರ ಸಲ್ಮಾನ್, ಯೌವನದಲ್ಲಿ ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುವಂತಾಗಿದೆ. ಕಾನೂನು ಅಂದರೆ ಎಲ್ಲರಿಗೂ ಒಂದೇ. ಅದು ಬಡವನೇ ಆಗಿರಲಿ, ಬಲ್ಲಿದನೇ ಆಗಿರಲಿ ಕಾನೂನಿನ ಕಣ್ಣಲ್ಲಿ ಇಬ್ಬರೂ ಸಮಾನರೇ ಎಂಬ ಮಾತನ್ನು ಈ ತೀರ್ಪು ಪಡಿಸಿದರೂ, ಯಾವನೇ ಒಬ್ಬ ಸಾಮಾನ್ಯ ಮನುಷ್ಯ ಈ ಅಪರಾಧ ಎಸಗಿದ್ದರೆ, ಆತ ಜೈಲುಪಾಲಾಗಲು ಎರಡು ದಶಕಗಳೇ ಬೇಕಾಗುತ್ತಿತ್ತೇ? ತೆರೆಮೇಲೆ ಅದೆಷ್ಟೋ ಖಳನಾಯಕರನ್ನು, ದುಷ್ಟರನ್ನು ಸದೆಬಡಿಯುವ ಈ ಹೀರೋ ನಿಜ ಜೀವನದಲ್ಲಿ ವಿಲನ್ ಆಗಿದ್ದರೂ, ಆತನನ್ನೇ ತಮ್ಮ ರೋಲ್ ಮಾಡೆಲ್ ಮಾಡಿಕೊಂಡ ಯುವಜನರಿಗೆ ಯಾವ ಸಂದೇಶ ನೀಡಿದಂತಾಯಿತು?

1998ರ ಅಕ್ಟೋಬರ್ ಒಂದರಂದು ರಾಜಸ್ಥಾನದ ಜೋಧಪುರಲ್ಲಿ ಹಮ್ ಸಾಥ್ ಸಾಥ್ ಹೈ ಹಿಂದಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅದು ಸಲ್ಮಾನ್ ಖಾನ್ ಖ್ಯಾತಿಯ ಉತ್ತುಂಗದಲ್ಲಿದ್ದ ಸಮಯ. ಬಿಸಿ ರಕ್ತದ ಯುವಕರಾದ ಸಲ್ಮಾನ್ ಖಾನ್, ಸೈಫ್ ಆಲಿ ಖಾನ್, ಟಬು, ಸೊನಾಲಿ ಬೇಂದ್ರೆ ಮತ್ತು ನೀಲಂ ಶೂಟಿಂಗ್ ನಡುವಿನ ಬಿಡುವಿನಲ್ಲಿ ಜೋಧಪುರ ಸಮೀಪದ ಕನಕಿಣಿ ಗ್ರಾಮಕ್ಕೆ ತೆರಳುತ್ತಾರೆ. ಸಲ್ಮಾನ್ ಖಾನ್ ಥೇಟ್ ಸಿನಿಮಾ ಶೈಲಿಯಲ್ಲಿ ಎರಡು ಕೃಷ್ಣಮೃಗಗಳನ್ನು ಶೂಟ್ ಮಾಡಿ ಸಾಯಿಸುತ್ತಾರೆ. ಗುಂಡಿನ ಸದ್ದು ಅಲ್ಲಿನ ಬಿಷ್ಣೋಯ್ ಗ್ರಾಮಸ್ಥರ ಕಿವಿಗೆ ಬೀಳುತ್ತದೆ. ಕೂಡಲೇ ಸ್ಥಳಕ್ಕೆ ಧಾವಿಸುತ್ತಾರೆ. ಬಿಷ್ಣೋಯ್ ಗ್ರಾಮಸ್ಥರು ಕಾಡುಪ್ರಾಣಿಗಳ ರಕ್ಷಣೆಗೋಸ್ಕರ ತಮ್ಮ ಮುಡಿಪಾಗಿಟ್ಟವರು. ಅಂಥವರು ಸಲ್ಮಾನ್ ಅಲ್ಲ ಆ ದೇವರೇ ಬಂದು ಬೇಟೆಗೆ ಇಳಿಯುತ್ತೇನೆಂದರೂ ಅವರನ್ನು ಸುಮ್ಮನೆ ಬಿಡುವ ಜಾಯಮಾನದವರಲ್ಲ.

ಗ್ರಾಮಸ್ಥರನ್ನು ಕಂಡೊಡನೆಯೇ ಜೀಪ್‌ನಲ್ಲಿ ಸಲ್ಮಾನ್ ಹಾಗೂ ಜತೆಗಾರರು ಪರಾರಿಯಾಗಲು ಯತ್ನಿಸುತ್ತಾರೆ. ಪಟ್ಟು ಬಿಡದ ಗ್ರಾಮಸ್ಥರು ಬೆನ್ನತುತ್ತಾರೆ. ಕೊನೆಗೆ ಕೃಷ್ಣಮೃಗಗಳ ದೇಹವನ್ನು ಎಸೆದು ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಈ ಪ್ರಕರಣಕ್ಕೆ ಬಿಷ್ಣೋಯ್ ಗ್ರಾಮಸ್ಥರೇ ಪ್ರಮುಖ ಸಾಕ್ಷಿ. ಒಂದೆರಡಲ್ಲ 52 ಸಾಕ್ಷಿಗಳು ಸಲ್ಲೂ ಮಿಯಾನನ್ನು ಕಂಬಿ ಎಣಿಸಲು ಪಣ ತೊಟ್ಟು ನಿಂತವು. ವನ್ಯಜೀವಿ ಕಾಯಿದೆಯು 1972ರಲ್ಲಿ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಪಟ್ಟಿಯನ್ನು ಮಾಡಿತ್ತು. ಆ ಪಟ್ಟಿಯಲ್ಲಿ ಕೃಷ್ಣಮೃಗ, ಸಾರಂಗ, ಕಡವೆಗಳೂ ಸೇರಿವೆ. ಈ ವನ್ಯಜೀವಿಗಳನ್ನು ಕೊಂದರೆ ಒಂದರಿಂದ ಏಳು ವರ್ಷಗಳವರೆಗೆ ಶಿಕ್ಷೆ.

ಹಲವು ಬಾರಿ ಆರೋಪಮುಕ್ತ: ಕನಕಿಣಿಯ ಪ್ರಕರಣಕ್ಕೆ ಒಂದು ತಿಂಗಳ ಮೊದಲು 1998, ಸೆ. 27ರಂದು ಜೋಧಪುರದ ಹೊರವಲಯದಲ್ಲಿರುವ ಭವಾದ್ ಗ್ರಾಮದಲ್ಲಿ ಸಲ್ಮಾನ್ ಖಾನ್ ಒಂದು ಕಡವೆಯನ್ನು ಬೇಟೆಯಾಡಿದ್ದರು. ಇದೇ ಅಪರಾಧಕ್ಕೆ 2006ರ ಫೆ. 17ರಂದು ಜೋಧಪುರದ ಮುಖ್ಯ ಮ್ಯಾಜಿಸ್ಟ್ರೇಟರು ಸಲ್ಮಾನ್‌ಗೆ ಒಂದು ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿದ್ದರು.

ಸಲ್ಲು ಜಿಲ್ಲಾ ನ್ಯಾಯಾಲಯದ ಬದಲು ರಾಜಸ್ಥಾನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದಷ್ಟೇ ಅಲ್ಲದೆ ಭವಾದ್‌ನಲ್ಲಿ ನಡೆದ ಕುಕೃತ್ಯದ ಮರುದಿನ ಸೆ.28ರಂದು ಘೋಡಾ ಫಾರ್ಮ್ ಪ್ರದೇಶದಲ್ಲಿ ಎರಡು ಕಡವೆಗಳನ್ನು ಕೊಂದಿದ್ದರು. ಈ ತಪ್ಪಿಗೆ 2006ರ ಏ.10ರಂದು ನ್ಯಾಯಾಧೀಶರು ಸಲ್ಮಾನ್‌ಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿದ್ದರು. ತೀರ್ಪಿನ ವಿರುದ್ಧ ಸಲ್ಲು ನೀಡಿದ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಲಯ ಕೂಡ ತಿರಸ್ಕರಿಸಿತ್ತು. ಇದಾದ ಬಳಿಕ, ಸಲ್ಲು ಮಿಯಾ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಾರೆ. ಕಳೆದ ವರ್ಷವಷ್ಟೇ, ಜುಲೈ 25ರಂದು ರಾಜಸ್ಥಾನ ಹೈಕೋರ್ಟ್ ಈ ಮೇಲಿನ ಎರಡೂ ಪ್ರಕರಣಗಳಲ್ಲಿ ಸಲ್ಮಾನ್ ಖಾನ್ ಅವರನ್ನು ಆರೋಪಮುಕ್ತಗೊಳಿಸಿ ತೀರ್ಪು ಹೊರಡಿಸಿತು. ಈ ಎರಡು ಪ್ರಕರಣಗಳನ್ನು ಬೆನ್ನತ್ತಿದ್ದ ಪೊಲೀಸ್ ಇಲಾಖೆ 1998ರ ಅಕ್ಟೋಬರ್ 15ರಲ್ಲಿ ಸಲ್ಮಾನ್ ಖಾನ್ ತಂಗಿದ್ದ ಹೊಟೇಲ್ ರೂಮನ್ನು ಪರಿಶೀಲಿಸಿತು. ಅಲ್ಲಿ ಸಿಕ್ಕಿದ್ದು 32 ರಿವಾಲ್ವರ್ ಹಾಗೂ 22 ರೈಫಲ್. ಅಷ್ಟೇ ಅಲ್ಲದೆ ಒಂದು ತಿಂಗಳಿನ ಹಿಂದೆಯೇ ಇದಕ್ಕೆ ಪಡೆದಿದ್ದ ಲೈಸನ್‌ಸ್ನ ಮುಗಿದು ಹೋಗಿತ್ತು. ಹೀಗಾಗಿ ಅಕ್ರಮ ಶಸ್ತ್ರಾಸ್ತ್ರ ಕಾಯಿದೆ ಅನ್ವಯ ಬಾಲಿವುಡ್ ಬ್ಯಾಡ್‌ಬಾಯ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಯಿತು. 2017ರ ಜನವರಿಯಲ್ಲಿ ನ್ಯಾಯಾಲಯವು ಈ ಕೇಸನ್ನು ವಜಾಗೊಳಿಸಿತು. ರಾಜಸ್ಥಾನ ಸರಕಾರವು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿತು.

ಎರಡೂ ಪ್ರಕರಣಗಳಲ್ಲಿ ಹೈಕೋರ್ಟ್ ಸಲ್ಲುವನ್ನು ಖುಲಾಸೆಗೊಳಿಸಿತ್ತು. ಭವಾದ್ ಮತ್ತು ಘೋಡಾ ಫಾರ್ಮ್ ಬೇಟೆ ಪ್ರಕರಣಗಳಲ್ಲಿ ಸೆಷೆನ್‌ಸ್ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಿ ಸಲ್ಮಾನ್ ಖಾನ್ ಅವರನ್ನು ಹೈಕೋರ್ಟ್ ಆರೋಪಮುಕ್ತಗೊಳಿಸಿತ್ತು. ‘ಘಟನೆ ನಡೆದ ಸ್ಥಳ ಯಾವುದೆಂದು ತಿಳಿಸಲು ಸಾಧ್ಯವಾಗಿಲ್ಲ. ಸ್ಥಳದಲ್ಲಿ ದೊರೆತ ರಕ್ತದ ಕಲೆಗೂ ಜಿಂಕೆ ದೇಹದ ರಕ್ತ ಕಲೆಗೂ ಸಂಬಂಧವಿಲ್ಲ’ ಎಂದು ಅಭಿಪ್ರಾಯಪಟ್ಟ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸಾಕ್ಷ್ಯಾಧಾರ ಕೊರತೆಯಿಂದ ಸಲ್ಲುವನ್ನು ಖುಲಾಸೆಗೊಳಿಸಿದರು. ಹಾಗಿದ್ದೂ 1998ರ ಅಕ್ಟೋಬರ್ 12ರಂದು ಅರಣ್ಯ ಇಲಾಖೆಯು ಸಲ್ಮಾನ್ ಖಾನ್‌ರನ್ನು ಬಂಧಿಸಿತು. ಐದು ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. 2006ರಲ್ಲಿ ಸಲ್ಲುಗೆ ಟ್ರಯಲ್ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿದಾಗ ಕೇವಲ ಆರು ದಿನ ಜೈಲುವಾಸ ಜಾಮೀನಿನ ಮೇಲೆ ಹೊರಬಂದರು. ಘೋಡಾ ಫಾರ್ಮ್ ಕೇಸ್ ಸಂಬಂಧ 2007ರ ಆಗಸ್‌ಟ್ 26ರಿಂದ 31ರವರೆಗೆ ಸಲ್ಲು ಸೆರೆಮನೆವಾಸ ಅನುಭವಿಸಿದರು. ಐದು ವರ್ಷ ಸೆರೆಮನೆವಾಸ ಅನುಭವಿಸಬೇಕಾಗಿದ್ದ ಸಲ್ಮಾನ್ ಕೇವಲ 18 ದಿನಗಳಷ್ಟೇ ಜೈಲಿನಲ್ಲಿ ಕಾಲಕಳೆದಿದ್ದು, ಕಾನೂನಿಕ ಕುಣಿಕೆಯಿಂದ ಬಚಾವಾಗಲು ಸರ್ವಶಕ್ತಿ ಬಳಸಿದ್ದರು.

ಕಡವೆ ಕೊಂದ ಪ್ರಕರಣ ಹಾಗಿರಲಿ ಒಬ್ಬ ಮನುಷ್ಯನ ಜೀವವನ್ನೇ ತೆಗೆದ ಸಲ್ಮಾನ್‌ಗೆ ಸಿಕ್ಕಿದ್ದು 48 ಘಂಟೆಗಳ ಸಜೆ. 2002ರ ರಾತ್ರಿ ಕುಡಿದ ಮತ್ತಿನಲ್ಲಿ ಬಾಂದ್ರಾದ ಫುಟ್‌ಪಾತ್ ಮೇಲೆ ಟೊಯೊಟಾ ಲ್ಯಾಂಡ್ ಕ್ರೂಯಿಸರ್ ಕಾರು ಗುದ್ದಿಸಿ ಒಂದು ಅಮಾಯಕ ಜೀವವನ್ನೇ ಬಲಿ ಪಡೆದು, ನಾಲ್ವರಿಗೆ ಗಾಯ ಮಾಡಿದ ಪುಣ್ಯಾತ್ಮ, ಅಭಿಮಾನಿಗಳ ಪಾಲಿನ ದೇವರು, ಅಪತ್ಭಾಂದವ ಅಂತನ್ನಿಸಿಕೊಂಡ ಸಲ್ಮಾನ್ ಖಾನ್. ಈ ದುಷ್ಕೃತ್ಯವನ್ನು ಕಣ್ಣಾರೆ ಕಂಡ ಸಾಕ್ಷಿಗಳಿದ್ದರೂ ತೀರ್ಪು ಹೊರಬರಲು 13 ವರ್ಷಗಳೇ ಬೇಕಾಯಿತು. ಸಲ್ಮಾನ್ ಖಾನ್ ಚಾಲಕನ ಸೀಟಿನಲ್ಲಿ ಇರಲೇ ಇಲ್ಲ. ಆತ ಕಾರನ್ನು ಚಲಾಯಿಸುತ್ತಿದ್ದಿದಕ್ಕೆ ಸಾಕ್ಷಿಗಳೇ ಇಲ್ಲ ಎಂಬುದನ್ನು ವಾದಿಸಿದ ನ್ಯಾಯವಾದಿ, ಸಲ್ಮಾನ್‌ನನ್ನು ಬಚಾವ್ ಮಾಡಿದರು. ಅದಾದ ಆತನ ರಕ್ತದಲ್ಲಿ ಮಧ್ಯಪಾನದ ಅಂಶವಿತ್ತು ಎಂದು ಪರೀಕ್ಷೆಗಳಿಂದ ತಿಳಿದು ಬಂದು ಮತ್ತೆ ಬಂಧನಕ್ಕೆ ಒಳಪಟ್ಟರೂ ಅದೇ ದಿನ ಬೇಲ್ ತೆಗೆದುಕೊಂಡು ಹೊರ ಬಂದರು.

ಹೈಕೋರ್ಟ್ ಸಾವಿಗೀಡಾದ ನತದೃಷ್ಟ ನೂರುಲ್ ಮೆಹಬೂಬ್ ಷರೀಫ್‌ಗೆ 19ಲಕ್ಷ ರು. ನೀಡಬೇಕೆಂದು ಆದೇಶ ನೀಡಿದ್ದರೂ ಆ ವ್ಯಕ್ತಿಗೆ ತಲುಪಿದ್ದು ಕೇವಲ 10ಲಕ್ಷ ರು. ಮಾತ್ರ. ಡ್ರೈವರ್ ತಾನೇ ಕಾರನ್ನು ಚಲಾಯಿಸುತ್ತಿದ್ದು, ಇದರಲ್ಲಿ ಸಲ್ಮಾನ್‌ರದ್ದೇನೂ ತಪ್ಪಿಲ್ಲ ಎಂದು ಸರಾಸರಿ 13 ವರ್ಷಗಳ ಕಾಲ ತನ್ನ ತಲೆಯ ಸಲ್ಲೂನ ಪಾಪದ ಭಾರವನ್ನು ಹೊತ್ತಿದ್ದುದರಿಂದಾಗಿ ಯಾವುದೇ ನ್ಯಾಯಾಲಯ, ಸಾಕ್ಷಿಗಳ ವಿಚಾರಣೆ, ಪರಿಶೀಲನೆಯಿಂದ ಏನೂ ಪ್ರಯೋಜನವೇ ಗಿಟ್ಟಿರಲಿಲ್ಲ. ಕೊನೆಗೆ ಮೇ 6, 2015ರಂದು ನಡೆದ ವಿಚಾರಣೆಯಲ್ಲಿ ಸಲ್ಮಾನ್ ಖಾನ್ ನಿರಪರಾಧಿಯೆಂಬುದು ಸಾಬೀತಾಗಿ ಕೇವಲ 48 ಘಂಟೆಗಳ ಜೈಲುವಾಸದ ರುಚಿ ನೋಡಿ ಹೊರ ಬಂದಿದ್ದಾಯಿತು.

ಇದರ ನಡುವೆ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಈ ನಟ ಮಿಂಚಿ, ಕೋಟಿ ಕೋಟಿ ಬಾಚಿಕೊಂಡಿದ್ದರು. ಮುಗ್ಧ, ಅಮಾಯಕ, ಅಪತ್ಭಾಂಧವ, ದಯಾಳು, ದೀನ ದಲಿತರ ಪಾಲಿನ ಹೀಗೆ ಏನೆಲ್ಲಾ ಪಟ್ಟವನ್ನು ಅಲಂಕರಿಸಿದ್ದರು. ಬದುಕಿದರೆ ಹೀಗೆ ಬದುಕಬೇಕು ಅನ್ನುವಂತೆ ಜನರ ಮನಸ್ಸಿನಲ್ಲಿ ಒಂದು ಭರವಸೆಯ ಕಿಡಿಯನ್ನು ಹಚ್ಚಿದ್ದರು. ತನ್ನ ನಿಜಜೀವನದ ಕೈಯಲ್ಲಿನ ರಕ್ತದ ಕಲೆ, ಯಾವುದೇ ಪಾತ್ರದ ಮೇಲಾಗದಂತೆ ಇಮೇಜ್‌ನ್ನು ಕಾಪಾಡಿಕೊಂಡಿದ್ದರು. ಐಶ್ವರ್ಯ ರೈ ಜತೆಗೆ ಪ್ರೇಮ ವೈಫಲ್ಯದಿಂದ ಉಂಟಾದ ಜಟಾಪಟಿ, ಶಾರುಖ್ ಜತೆಗಿನ ಕಿರಿಕ್ ಹೀಗೆ ಕೆಲವೊಂದು ಸನ್ನಿವೇಶಗಳಲ್ಲಿ ತನ್ನಲ್ಲಿರುವ ನೆಗೆಟಿವ್ ಕ್ಯಾರೆಕ್ಟರ್‌ನ್ನು ಹೊರಗೆಡಹಿದರೂ ಅದು ಆ ಕ್ಷಣಕ್ಕಷ್ಟೇ ಸೀಮಿತವಾಗಿದ್ದು, ಏನೂ ಆಗಿಲ್ಲವೆಂಬಂತೆ ಎಲ್ಲದರಿಂದಲೂ ಹೊರಬಂದಿದ್ದರು. ಸಿನಿಜಗತ್ತಿಗೂ ಹೊರತಾದ ಜೀವನ ಇವರಿಗಿದೆ, ರೀಲ್‌ಗೂ ರಿಯಲ್‌ಗೂ ನಡುವಿನ ಅಂತರ ಬಹಳಷ್ಟು ದೊಡ್ಡದು ಅನ್ನುವ ಸತ್ಯ ತಿಳಿಯದೆ ಅದೆಷ್ಟೋ ಸಿನಿಮಾ ಅಭಿಮಾನಿಗಳಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಎಕೆ 47 ರೈಫಲ್‌ನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ನಟ ಸಂಜಯ್ ದತ್, ಆರೋಪವನ್ನು ಹೊತ್ತುಕೊಂಡಿದ್ದ ಸಂದರ್ಭದಲ್ಲೇ ಮುನ್ನಾ ಬಾಯಿ ಎಂಬಿಬಿಎಸ್ ಚಿತ್ರದ ಮೂಲಕ, ಹೊಸ ಟ್ರೆಂಡ್‌ನ್ನು ಸೃಷ್ಟಿಸಿದ್ದರು.

ಅದೆಷ್ಟೋ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಭೂಗತ ಪಾತಕಿ ಸಲೇಂ ಜತೆಗಿನ ನಂಟು ಇವರ ಇಮೇಜ್‌ಗೆ ಕಿಂಚಿತ್ತೂ ಧಕ್ಕೆ ಮಾಡದಿರುವುದೇ ನಮ್ಮ ದೇಶದಲ್ಲಿ ನಡೆಯುವಂತಹ ಆಶ್ಚರ್ಯದ ಸಂಗತಿ. ನಂತರ ಆತ ಸ್ವಯಂ ರಕ್ಷಣೆಗೋಸ್ಕರ ಗನ್‌ನ್ನು ತನ್ನ ಜತೆ ಇಟ್ಟುಕೊಂಡಿದ್ದಾನೆ ಎಂದು ಬೇಲ್‌ನ್ನು ಪಡೆದುಕೊಂಡರು. ಹಾಗಿದ್ದರೂ ಕಾನೂನಿನ ಕಬಂಧ ಬಾಹುವಿನಿಂದ ಕೊನೆಗೂ ತಪ್ಪಿಸಿಕೊಳ್ಳಲಾಗದ ಸಂಜಯ್ ಇದೀಗ ಜೈಲುಕಂಬಿ ಎಣಿಸುತ್ತಿದ್ದಾರೆ.

ಇದೀಗ ಸಲ್ಮಾನ್ ಖಾನ್‌ಗೆ ಐದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ, ಈ ಹಿಂದೆ ಆತ ತಪ್ಪಿಸಿಕೊಂಡ ಶಿಕ್ಷೆಯನ್ನು ಗಮನಿಸಿದರೆ, ದಿನ ಚಾಲ್ತಿಯಲ್ಲಿರುತ್ತದೆ ಅನ್ನುವುದನ್ನು ಊಹಿಸುವುದು ಅಸಾಧ್ಯ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಮಾಯಕನ ಜೀವವನ್ನೇ ತೆಗೆದು ಕಾನೂನಿನ ಕೈಯಿಂದ ಬಚಾವಾದ ಈತನಿಗೆ, ಕೃಷ್ಣಮೃಗವನ್ನು ಸಾಯಿಸಿದ ಎಂಬ ಆರೋಪದಿಂದ ಮುಕ್ತವಾಗುವ ದಾರಿಯಂತೂ ತಿಳಿದೇ ಇರುತ್ತದೆ. ದುಡ್ಡು, ಖ್ಯಾತಿಯ ಬಲವೊಂದಿದ್ದರೆ ಜಗತ್ತಿನಲ್ಲಿ, ಅದರಲ್ಲೂ ನಮ್ಮ ದೇಶದಲ್ಲಿ ಏನನ್ನೂ ಕೊಂಡುಕೊಳ್ಳಬಹುದು. ಕಾನೂನನ್ನು ಯಾಮಾರಿಸುವುದು ಇವರಿಗೆ ಮತ್ತು ಇವರ ವಕೀಲರಿಗೆ ಕಷ್ಟದ ಸಂಗತಿಯೇನಲ್ಲ. ಇಷ್ಟೆಲ್ಲಾ ಆದ ಮೇಲೂ ಶಿಕ್ಷೆಯೆಂಬ ತೂಗುಕತ್ತಿ ಜತೆಗೆ ಬದುಕಿ, ಮೆರೆದ ನಟರು ನಿಜವಾಗಿಯೋ ಹೀರೋಗಳೋ ಅಥವಾ ಖಳನಾಯಕರೋ ಎಂಬುದನ್ನು ಜನರೇ ನಿರ್ಧರಿಸಬೇಕು.

Comments are closed.