ಅಂತರಾಷ್ಟ್ರೀಯ

ಪಾಕ್‌: Red-light ಏರಿಯಕ್ಕೆ ಹೋಗಬಿಡದ್ದಕ್ಕೆ ಚೀನೀ ಕಾರ್ಮಿಕರ ಅಕ್ರೋಶ

Pinterest LinkedIn Tumblr


ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಚೀನದ ಕೃಪೆಯಲ್ಲಿ ನಡೆಯುತ್ತಿರುವ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ತಮ್ಮನ್ನು ಕಾಮಾಟಿಪುರದಂತಹ ರೆಡ್‌ ಲೈಟ್‌ ಏರಿಯಾಗಳಿಗೆ ಹೋಗದಂತೆ ತಡೆದ ಪಾಕ್‌ ಭದ್ರತಾ ಸಿಬಂದಿಗಳ ವಿರುದ್ಧ ಭೀಕರ ಮಾರಾಮಾರಿ ನಡೆಸಿದ ಘಟನೆ ವರದಿಯಾಗಿದೆ.

ಪಾಕಿಸ್ಥಾನದಲ್ಲಿ ಅಭಿವೃದ್ಧಿ ಕಾಮಗಾರಿ ನಿರತ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ಜೀವ ಬೆದರಿಕೆ ಇರುವುದರಿಂದ ಅವರ ರಕ್ಷಣೆ ಮತ್ತು ಸುರಕ್ಷೆಗಾಗಿ ಪಾಕ್‌ ಸರಕಾರ ವಿಶೇಷ ಭದ್ರತಾ ಸಿಬಂದಿಗಳನ್ನು ನಿಯೋಜಿಸಿದೆ. ಇವರ ಕಣ್ಗಾವಲು ಇಲ್ಲದೆ ಚೀನಿ ಕಾರ್ಮಿಕರು ಎಲ್ಲಿಗೂ ಹೋಗುವಂತಿಲ್ಲ.

ಆದರೆ ತಮ್ಮ ಕಾಮಾಸಕ್ತಿಯನ್ನು ಈಡೇರಿಸಿಕೊಳ್ಳಲು ರೆಡ್‌ಲೈಟ್‌ ಜಿಲ್ಲೆಗಳಿಗೆ ಭದ್ರತೆ ಇಲ್ಲದೆ ಮುಕ್ತವಾಗಿ ಹೋಗಲು ಬಯಸಿದ ಚೀನೀ ಕಾರ್ಮಿಕರನ್ನು ಭದ್ರತಾ ಸಿಬಂದಿಗಳು ತಡೆದಾಗ ಅಕ್ರೋಶಗೊಂಡ ಅವರು ಭದ್ರತಾ ಸಿಬಂದಿಗಳೊಂದಿಗೆ ಮಾರಾಮಾರಿ, ಕಾಳಗ ನಡೆಸಿದರು.

ಕೋಪೋದ್ರಿಕ್ತ ಚೀನೀ ಕಾರ್ಮಿಕರು ಪಾಕ್‌ ಭದ್ರತಾ ವಾಹನವನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿ ಅದನ್ನು ಏರಿ ಕುಳಿತರಲ್ಲದೆ ಭದ್ರತಾ ಸಿಬಂದಿ ಮೇಲೆ ಕುರ್ಚಿ ಎಸೆದು ಸಿಬಂದಿಗಳನ್ನು ಗಾಯಗೊಳಿಸಿದರು.

ಕಳೆದ ಮಂಗಳವಾರ ಸ್ಫೋಟಗೊಂಡ ಈ ಮಾರಾಮಾರಿಯನ್ನು ಪಾಕ್‌ ಭದ್ರತಾ ಸಿಬಂದಿಗಳು ಹೇಗೋ ನಿಯಂತ್ರಣಕ್ಕೆ ತಂದರು. ಆದರೆ ಒಂದು ದಿನದ ತರುವಾಯ ಮತ್ತೆ ಜಗಳ ತಲೆದೋರಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಹಾಲವಲಪುರ – ಫೈಸಲಾಬಾದ ಹೆದ್ದಾರಿಯಲ್ಲಿ ಕ್ಷೋಭೆ ಏರ್ಪಟ್ಟಿತು. ಚೀನೀ ಕಾರ್ಮಿಕರು ರಸ್ತೆ ನಿಮಾಣ ಕಾಮಗಾರಿಯ ದೊಡ್ಡ ದೊಡ್ಡ ವಾಹನಗಳನ್ನು ರಸ್ತೆಯ ನಡುವೆಯೇ ಇರಿಸಿ ತಡೆ ನಿರ್ಮಿಸಿದರು. ಪಾಕ್‌ ಭದ್ರತಾ ಸಿಬಂದಿಗಳ ವಸತಿ ಸಮೂಹದ ವಿದ್ಯುತ್‌ ಸಂಪರ್ಕವನ್ನು ಕಡಿದು ಹಾಕಿದರು.

ಇದಾದ ಬಳಿಕ ಚೀನೀ ಇಂಜಿನಿಯರ್‌ಗಳು ಪಾಕ್‌ ಸರಕಾರಕ್ಕೆ ಪತ್ರ ಬರೆದು “ನಿಮ್ಮ ಭದ್ರತಾ ಸಿಬಂದಿಗಳು ನಮ್ಮ ಮೇಲೆ ಹಲ್ಲೆ ಮಾಡಿವೆ’ ಎಂದು ದೂರಿದರು.

ಇಷ್ಟಾದರೂ ಚೀನ ಕೃಪೆಯಲ್ಲಿರುವ ಪಾಕ್‌ ಸರಕಾರ ಈ ಘಟನೆಯ ಬಗ್ಗೆ ಈ ವರೆಗೂ ತುಟಿ ಬಿಚ್ಚಿಲ್ಲ !

-ಉದಯವಾಣಿ

Comments are closed.