ಮನೋರಂಜನೆ

ಅಂಬರೀಶ್ ಗೆ ಸುಮಲತಾಗಿಂತ ಜೋಡಿ ಬೇಕೆ?

Pinterest LinkedIn Tumblr


ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ “ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಅಂಬರೀಶ್‌ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಸುದೀಪ್‌ ಅವರು ಅಂಬರೀಶ್‌ ಅವರ ಯೌವ್ವನದ ಪಾತ್ರ ಮಾಡುತ್ತಿದ್ದಾರೆ. ಸುದೀಪ್‌ ಅವರಿಗೆ ಜೋಡಿಯಾಗಿ ಈಗಾಗಲೇ ಶ್ರುತಿ ಹರಿಹರನ್‌ ಇದ್ದಾರೆ. ಆದರೆ, ಅಂಬರೀಷ್‌ ಅವರ ಜೋಡಿ ಆಯ್ಕೆ ಬಗ್ಗೆ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿದೆ.

ಈ ಹಿಂದೆ ಅಂಬರೀಷ್‌ ಅವರಿಗೆ ಸುಹಾಸಿನಿ ಜೋಡಿಯಾದರೆ, ಚೆನ್ನಾಗಿರುತ್ತೆ ಎಂಬ ಕಾರಣಕ್ಕೆ ಸುಹಾಸಿನಿ ಅವರ ಜೊತೆ ಮಾತುಕತೆ ನಡೆಸಿ, ಪಕ್ಕಾ ಮಾಡಿಕೊಂಡಿತ್ತು ಚಿತ್ರತಂಡ. ಆದರೆ, ಚಿತ್ರೀಕರಣ ಮುಂದಕ್ಕೆ ಹೋಗಿ, ಡೇಟ್ಸ್‌ ಹೆಚ್ಚು ಕಮ್ಮಿಯಾದ ಹಿನ್ನೆಲೆಯಲ್ಲಿ, ಸುಹಾಸಿನಿ ಅವರಿಗೆ “ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ, ಸುಹಾಸಿನಿ ಅವರೀಗ ತಮ್ಮ ಹೋಮ್‌ ಬ್ಯಾನ್‌ರ್‌ನಲ್ಲೊಂದು ಚಿತ್ರ ಕೈಗೆತ್ತಿಕೊಂಡಿರುವುದರಿಂದ ಅವರು ಚಿತ್ರದಲ್ಲಿ ನಟಿಸುವುದು ಅನುಮಾನ. ಅದರ ಬೆನ್ನ ಹಿಂದೆಯೇ, ರಮ್ಯಾಕೃಷ್ಣ ಅವರನ್ನು ಅಂಬರೀಶ್‌ ಜೋಡಿ ಮಾಡುವ ಯೋಚನೆ ಮಾಡಿದ ಚಿತ್ರತಂಡ, ಕೊನೆಗೆ ಡೇಟ್ಸ್‌ ಸಮಸ್ಯೆಯಿಂದಾಗಿ ಅದನ್ನೂ ಬದಿಗೊತ್ತಿದೆ. ಈ ಇಬ್ಬರನ್ನು ಬಿಟ್ಟು ಬೇರೆ ಯಾವ ನಾಯಕಿಯನ್ನು ಅಂಬರೀಶ್‌ಗೆ ಜೋಡಿ ಮಾಡಬೇಕೆಂಬ ಪ್ರಶ್ನೆ ಚಿತ್ರತಂಡದವರನ್ನು ಕಾಡುತ್ತಿರುವುದಂತೂ ಸುಳ್ಳಲ್ಲ.

ಹಾಗಾದರೆ, ಯಾರು ಅಂಬರೀಶ್‌ಗೆ ಜೋಡಿಯಾಗುತ್ತಾರೆ ಎಂಬ ಪ್ರಶ್ನೆ ಕೂಡ ಎದ್ದಿದೆ. ಚಿತ್ರತಂಡದವರ ವಲಯದಲ್ಲಿ, ಅಂಬರೀಷ್‌ ಅವರಿಗೆ ಅಲ್ಲಿ ಇಲ್ಲಿ ಯಾಕೆ ಜೋಡಿ ಹುಡುಕಬೇಕು. ಸುಮಲತಾ ಅವರಿಗಿಂತ ಒಳ್ಳೆಯ ಜೋಡಿ ಬೇಕಾ ಎಂಬ ಮಾತು ಕೇಳಿಬರುತ್ತಿದೆ. ಆ ಬಗ್ಗೆ ಚಿತ್ರತಂಡಕ್ಕೆ ಈಗ ಸರಿ ಎನಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸುಮಲತಾ ಅವರೇ ಅಂಬರೀಶ್‌ಗೆ “ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೆ ಜೋಡಿಯಾದರೂ ಅಚ್ಚರಿ ಇಲ್ಲ. ಈಗಾಗಲೇ ಅಂಬರೀಶ್‌ ಮತ್ತು ಸುಮಲತಾ ಅವರ ಜೋಡಿ ಹಲವು ಚಿತ್ರಗಳಲ್ಲಿ ಮೋಡಿ ಮಾಡಿದೆ.

“ಆಹುತಿ’ ಚಿತ್ರದ ಮೂಲಕ ಮೊದಲ ಸಲ ಇಬ್ಬರೂ ಜೋಡಿಯಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. “ಶ್ರೀಮಂಜುನಾಥ’ ಹಾಗೂ ನಾಗಾಭರಣ ನಿರ್ದೇಶನದ “ಕಲ್ಲರಳಿ ಹೂವಾಗಿ’ ಚಿತ್ರದಲ್ಲೂ ರಾಜ-ರಾಣಿಯಾಗಿ ನಟಿಸಿದ್ದರು. ಇತ್ತೀಚೆಗೆ “ದೊಡ್ಮನೆ ಹುಡುಗ’ ಚಿತ್ರದಲ್ಲೂ ಅಂಬರೀಶ್‌ ಹಾಗು ಸುಮಲತಾ ಅವರು ಅಭಿನಯಿಸಿದ್ದರು. ಸದ್ಯಕ್ಕೆ ನಿರ್ದೇಶಕ ಗುರುದತ್‌ ಗಾಣಿಗ ಅವರು ಬಿಡುವಿಲ್ಲದಂತೆ ಚಿತ್ರೀಕರಣ ನಡೆಸುತ್ತಿದ್ದಾರೆ. ಇಷ್ಟರಲ್ಲೇ ಅಂಬರೀಷ್‌ ಜೋಡಿ ಪಕ್ಕಾ ಮಾಡಿ ಅವರ ಭಾಗವನ್ನೂ ಚಿತ್ರೀಕರಿಸುವ ಉತ್ಸಾಹದಲ್ಲಿದ್ದಾರೆ. ಈ ಚಿತ್ರವನ್ನು ಜಾಕ್‌ ಮಂಜು ನಿರ್ಮಿಸುತ್ತಿದ್ದಾರೆ.

-ಉದಯವಾಣಿ

Comments are closed.