ಮನೋರಂಜನೆ

ಕುಮಾರಸ್ವಾಮಿ ಬಳಿಕ ಮತ್ತೆ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ನಟ ಸುದೀಪ್ ! ಕುತೂಹಲಕ್ಕೆ ಕಾರಣವಾದ ಕಿಚ್ಚ ನಡೆ…

Pinterest LinkedIn Tumblr

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ ಕುತೂಹಲ ಕೆರಳಿಸಿದ್ದ ನಟ ಕಿಚ್ಚ ಸುದೀಪ್‌ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಮೂಲಕ ಮತ್ತೆ ಅಚ್ಚರಿ ಮೂಡಿಸಿದ್ದಾರೆ.

ಗುರುವಾರ ಬೆಳಗ್ಗೆ ನಟ ಕಿಚ್ಚಾ ಸುದೀಪ್ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಸಿದ್ದರಾಮಯ್ಯ ಅವರ ಜೊತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಪ್ರಸಕ್ತ ರಾಜಕೀಯ ಬೆಳವಣಿಗೆಳ ಕುರಿತು ಸುದೀಪ್ ಹಾಗೂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಂತೆಯೇ ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ನಟ ಸುದೀಪ್ ಅವರನ್ನು ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುವಂತೆಯೂ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಸುದೀಪ್ ಮತ್ತು ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಚರ್ಚೆಯಾಗಿದೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಸುದೀಪ್ ಆಗಲೀ ಅಥವಾ ಸಿಎಂ ಸಿದ್ದರಾಮಯ್ಯ ಅವರಾಗಲಿ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ನಟ ಸುದೀಪ್ ಅವರ ಅಭಿಮಾನಿಗಳ ತಂಡವೊಂದು ಸುದೀಪ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಫೋಟೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದೆ. ಅಲ್ಲದೆ ಖಾಸಗಿ ಆಂಗ್ಲ ಮಾಧ್ಯಮವೊಂದು ಸಿಎಂ ನಿವಾಸದಿಂದ ಸುದೀಪ್ ಹೊರಗೆ ಬರುತ್ತಿರುವ ವಿಡಿಯೋ ಪ್ರಸಾರ ಮಾಡಿದೆ.

ಇನ್ನು ಈ ಹಿಂದೆಯೂ ಕೂಡ ನಟ ಸುದೀಪ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದಿವಂಗತ ನಟ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣ ಕುರಿತು ಚರ್ಚಿಸಿದ್ದರು.

ಚುನಾವಣಾ ರಣ ಕಣದಲ್ಲಿ ಕಾವು ಏರುತ್ತಿದ್ದಂತೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಬಲ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸುದೀಪ್‌ ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದ್ದು ಅವರು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಅಥವಾ ಯಾವ ಪಕ್ಷದ ಪ್ರಚಾರ ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Comments are closed.