ಮನೋರಂಜನೆ

ದುನಿಯಾದೊಳಗಿದೆ ಹಸಿ ಹಸಿ ಕನಸು: ಯೋಗಿ ದುನಿಯಾ ಚಿತ್ರ ವಿಮರ್ಶೆ

Pinterest LinkedIn Tumblr


ನಮ್ಮ ರೇಟಿಂಗ್ 3 / 5
ಓದುಗರ ರೇಟಿಂಗ್2.5 / 5
ನಿಮ್ಮ ವಿಮರ್ಶೆ ಬರೆಯಿರಿ
ಕಲಾವಿದರುಯೋಗೀಶ್, ಹಿತಾ ಚಂದ್ರಶೇಖರ್, ವಸಿಷ್ಟ ಸಿಂಹ, ನೀನಾಸಂ ಅಶ್ವತ್‌, ಸಂದೀಪ್‌.
ನಿರ್ದೇಶಕಹರಿ
ಅವಧಿ2 hrs. 10 Min.

ವಿಮರ್ಶಕರ ವಿಮರ್ಶೆ

*ಶರಣು ಹುಲ್ಲೂರು

ಕನ್ನಡದ ಅನೇಕ ಸಿನಿಮಾಗಳಿಗೆ ಬೆಂಗಳೂರು ಸ್ಫೂರ್ತಿಯಾಗಿದೆ. ಸ್ಯಾಂಡಲ್‌ವುಡ್‌ನ ನಿರ್ದೇಶಕರು ಈಗಾಗಲೇ ರಾಜಧಾನಿಯ ಗಲ್ಲಿ ಗಲ್ಲಿಗಳಲ್ಲಿಯೂ ಕ್ಯಾಮೆರಾ ಇಟ್ಟಿದ್ದಾರೆ. ಆದರೆ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ ಎಂಬ ಮಾಯಾಲೋಕದ ಒಳಸುಳಿಯನ್ನು ಅಷ್ಟೊಂದು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರಲಿಲ್ಲ. ಈಗ ‘ಯೋಗಿ ದುನಿಯಾ’ ಮೂಲಕ ಆ ಕೆಲಸವನ್ನೂ ಮಾಡಿದ್ದಾರೆ ನಿರ್ದೇಶಕ ಹರಿ. ದಿನದ 24 ಗಂಟೆಯೂ ಎಚ್ಚರವಿರುವ ಮೆಜೆಸ್ಟಿಕ್‌ನ ಮತ್ತೊಂದು ಮುಖವನ್ನು ಈ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ. ಈ ಕಾರಣದಿಂದಾಗಿ ಈ ಚಿತ್ರ ಗಮನ ಸೆಳೆಯುತ್ತದೆ.

ಗಾಂಧಿನಗರದ ಮಡಿಲಿನಲ್ಲಿ ಹಾಯಾಗಿರುವ ಮೆಜೆಸ್ಟಿಕ್‌ನ ರಾತ್ರಿಗಳು ಕೆಲವರಿಗೆ ಕಲರ್‌ಫುಲ್‌, ಇನ್ನೂ ಕೆಲವರಿಗೆ ಕರಾಳ. ಇವೆರಡೂ ಸಿನಿಮಾದ ಕಥಾವಸ್ತು. ಆತ ಕಥಾನಾಯಕ (ಯೋಗೀಶ್‌) ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿರುವಂಥವನು. ಜತೆಗೆ ದಿಕ್ಕು ದೆಸೆಯಿಲ್ಲದವನು. ಮೆಜೆಸ್ಟಿಕ್‌ ಇವನ ಮನೆ. ನಾಯಕಿ ಶೀಲಾ (ಹಿತಾ ಚಂದ್ರಶೇಖರ್‌) ವೇಶ್ಯೆ. ಗಿರಾಕಿಗಾಗಿ ಈಕೆಯೂ ಮಜೆಸ್ಟಿಕ್‌ ಪ್ರದೇಶವನ್ನೇ ನಂಬಿಕೊಂಡಿರುತ್ತಾಳೆ. ಮೊದಲ ನೋಟದಲ್ಲಿಯೇ ನಾಯಕನಿಗೆ ಅವಳ ಮೇಲೆ ಲವ್‌ ಆಗುತ್ತದೆ. ಇಬ್ಬರೂ ಒಟ್ಟಿಗೆ ಬಾಳಲು ನಿರ್ಧರಿಸುತ್ತಾರೆ. ಆದರೆ, ಪರಿಸ್ಥಿತಿಗಳು ಅವರ ಕನಸುಗಳಿಗೆ ಸ್ಪಂದಿಸುವುದಿಲ್ಲ. ಅನೇಕ ಅಡೆತಡೆಗಳನ್ನು ಈ ಜೋಡಿ ಎದುರಿಸಬೇಕಾಗುತ್ತದೆ. ಅವುಗಳನ್ನು ಗೆಲ್ಲುತ್ತಾರಾ? ಸೋಲುತ್ತಾರಾ? ಎನ್ನುವುದೇ ಕ್ಲೈಮ್ಯಾಕ್ಸ್‌.

ಪ್ರತಿ ದೃಶ್ಯವನ್ನೂ ನೈಜ ಎನ್ನುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು, ಮೆಜೆಸ್ಟಿಕ್‌ನ ರಾತ್ರಿಗಳನ್ನು ಬೆಚ್ಚಿಬೀಳಿಸುವಂತೆ ಚಿತ್ರಿಸಿದ್ದಾರೆ. ನಾಯಕ ಯೋಗಿ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದರಲ್ಲೂ ನಾಯಕಿ ಹಿತಾ ತಮ್ಮ ಪಾತ್ರಕ್ಕೆ ಅಚ್ಚರಿಪಡುವಷ್ಟು ಜೀವ ತುಂಬಿದ್ದಾರೆ. ಈ ಪಾತ್ರಕ್ಕೆ ಹೆಚ್ಚು ಮಾತುಗಳು ಇಲ್ಲದಿದ್ದರೂ ಮೌನದಲ್ಲಿಯೇ ಮನಸ್ಸನ್ನು ಕರಗಿಸುತ್ತಾರೆ. ರಾತ್ರಿಯ ಮೌನದಷ್ಟೇ ನಮ್ಮೊಳಗೆ ಇಳಿದುಬಿಡುತ್ತಾರೆ.

ಹಾಗಂತ ದುನಿಯಾದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳುವುದೂ ಕಷ್ಟ. ಬೆಟ್ಟಿಂಗ್‌ ಸನ್ನಿವೇಶಗಳು ಸಾಕಪ್ಪ ಅನ್ನಿಸುವಷ್ಟು ಪಿರಿಪಿರಿ ಮಾಡುತ್ತವೆ. ಕ್ಲೈಮ್ಯಾಕ್ಸ್‌ನಲ್ಲಿ ಅಪೂರ್ಣತೆ ಕಾಣುತ್ತದೆ. ಸೂಕ್ಷ್ಮವಾದ ಸನ್ನಿವೇಶಗಳಲ್ಲಿ ಅಸಂಬದ್ಧ ಸಂಭಾಷಣೆಗಳು ಬಂದು ಹೋಗುತ್ತವೆ. ಇವೆಲ್ಲವನ್ನೂ ತಂತ್ರಜ್ಞರ ಶ್ರಮ ಹೊಡೆದುಹಾಕುತ್ತದೆ. ಬಹುತೇಕ ಶೂಟಿಂಗ್‌ ರಾತ್ರಿಯಲ್ಲೇ ಆಗಿರುವುದರಿಂದ ಕತ್ತಲು ಬೆಳಕಿನಾಟದಲ್ಲಿ ಗೆದ್ದಿದ್ದಾರೆ ಸಿನಿಮಾಟೋಗ್ರಾಫರ್‌ ಮಂಜುನಾಥ್‌ ನಾಯಕ. ಹಾಡಿಗಿಂತ ಹಿನ್ನೆಲೆ ಸಂಗೀತ ಹೆಚ್ಚು ಖುಷಿ ಕೊಡುತ್ತದೆ. ಒಳಿತು ಕೆಡುಕುಗಳ ಬಗ್ಗೆ ಪ್ರೇಕ್ಷಕನನ್ನು ಯೋಚನೆಗೆ ಹಚ್ಚುವ ಚಿತ್ರವಿದು.

Comments are closed.