ಕರ್ನಾಟಕ

ಉತ್ತರದ ಬಿಸಿಲ ಪ್ರಖರತೆ ದಕ್ಷಿಣಕ್ಕೆ ಶಿಫ್ಟ್ ?

Pinterest LinkedIn Tumblr


ಬೆಂಗಳೂರು: ಬೇಸಿಗೆ ಎಂದಾಕ್ಷಣ ಕಣ್ಮುಂದೆ ಬರೋದು ಉತ್ತರ ಕರ್ನಾಟಕ. ಆದರೆ, ಈಗ ದಕ್ಷಿಣದಲ್ಲೂ ನೆತ್ತಿಸುಡುವ ಬಿಸಿಲಿನ ಅನುಭವ ಆಗುತ್ತಿದೆ. ಹಾಗಿದ್ದರೆ, ಉತ್ತರದ ಬಿಸಿಲಿನ ಪ್ರಖರತೆ ದಕ್ಷಿಣಕ್ಕೆ ಶಿಫ್ಟ್ ಆಗುತ್ತಿದೆಯೇ?

– ಹೌದು, ಇಂತಹದ್ದೊಂದು “ಟ್ರೆಂಡ್‌’ ಶುರುವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು ಮತ್ತು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು.

ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಕಂಡುಬರುವ ಬಿಸಿಲಿನ ಧಗೆಯ ಅನುಭವ ಈಗ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲೂ ಆಗುತ್ತಿದೆ. ಕಳೆದ ಐದು ವರ್ಷಗಳ ಅಂಕಿ-ಅಂಶಗಳೂ ಇದಕ್ಕೆ ಪೂರಕವಾಗಿದ್ದು, ದಕ್ಷಿಣದ ಆಯ್ದ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸು ದಾಖಲಾಗುತ್ತಿದೆ.

ಅದರಲ್ಲೂ ವಿಶೇಷವಾಗಿ ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಗಡಿ ದಾಟುತ್ತಿದೆ. ಹೈದರಾಬಾದ್‌ ಕರ್ನಾಟಕದ ಮಟ್ಟಿಗೆ ಈ ತಾಪಮಾನ ಇಲ್ಲದಿರಬಹುದು. ಆದರೆ ಸಾಮಾನ್ಯಕ್ಕಿಂತ 4ರಿಂದ 5 ಡಿಗ್ರಿ ಸೆಲ್ಸಿಯಸ್‌ ಏರಿಕೆ ಆಗಿರುವುದು ಆತಂಕಕಾರಿ ಬೆಳವಣಿಗೆ. ಅಷ್ಟೇ ಅಲ್ಲ, ನಿರಂತರವಾಗಿ ಏರಿಕೆ ಕ್ರಮದಲ್ಲೇ ಸಾಗುತ್ತಿದೆ. ಇದೆಲ್ಲವೂ ಜಾಗತಿಕ ತಾಪಮಾನದ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ.

1-1.5 ಡಿಗ್ರಿ ಏರಿಕೆ; ಡಾ.ರಾಜೇಗೌಡ
10-15 ವರ್ಷಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಉಷ್ಣಾಂಶ 1ರಿಂದ 1.5 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿರುವುದನ್ನು ಕಾಣಬಹುದು. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿದೆ. ತಾಪಮಾನ ಹೆಚ್ಚಳದಿಂದ ಚಳಿ ಕಡಿಮೆಯಾಗಿದೆ.

ವಾತಾವರಣದಲ್ಲಿ ತೇವಾಂಶ ಇಲ್ಲವಾಗಿದೆ. ಸ್ಥಳೀಯವಾಗಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿ ಮಳೆ ಪ್ರಮಾಣ ಹೆಚ್ಚಾಗಿದೆ. ಸಾಮಾನ್ಯವಾಗಿ ಏಪ್ರಿಲ್‌ ಮೂರು-ನಾಲ್ಕನೇ ವಾರದಿಂದ ಬೇಸಿಗೆ ಮಳೆ ಶುರುವಾಗುತ್ತಿತ್ತು. ಆದರೆ, ಈ ವರ್ಷ 15-20 ದಿನಗಳು ಮುಂಚಿತವಾಗಿಯೇ ಮಳೆಯಾಗುತ್ತಿದೆ. ಅಂದರೆ, ಎಲ್ಲದರಲ್ಲೂ ವೈಪರೀತ್ಯ ಕಂಡುಬರುತ್ತಿದೆ ಎಂದು ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ತಿಳಿಸುತ್ತಾರೆ.

ದಕ್ಷಿಣ ಒಳನಾಡಿನಲ್ಲಿ ಬೇಸಿಗೆ ವಾಡಿಕೆ ಮಳೆ 15ರಿಂದ 180 ಮಿ.ಮೀ. ಆದರೆ, ಬಿಸಿಲಿನ ಧಗೆ ಹೆಚ್ಚಿದ್ದರಿಂದ ಮತ್ತು ಚಳಿ ಕಡಿಮೆ ಆಗುತ್ತಿರುವುದರಿಂದ ಶೇ. 15ರಿಂದ 18ರಷ್ಟು ಮಳೆ ಪ್ರಮಾಣ ಅಧಿಕವಾಗಿದೆ. ಒಟ್ಟಾರೆ ರಾಜ್ಯದಲ್ಲಿ ಮಾರ್ಚ್‌-ಮೇ ಅವಧಿಯಲ್ಲಿ ವಾಡಿಕೆ ಮಳೆ 165 ಮಿ.ಮೀ. ಆದರೆ, ಶೇ. 4-5ರಷ್ಟು ಮಳೆ ಏರಿಕೆ ಕಂಡುಬಂದಿದೆ. ಇದಕ್ಕೆ ಪ್ರತಿಯಾಗಿ ಮುಂಗಾರಿನ ಮಳೆ ಇಳಿಮುಖವಾಗಿದೆ. ಇದು ಕೃಷಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಾಗಾಗಿ, ರೈತರು ಹೆಚ್ಚು ಉಷ್ಣಾಂಶವನ್ನು ತಡೆದುಕೊಳ್ಳುವಂತಹ ಅಲ್ಪಾವಧಿ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರು ಕೃಷಿ ವಿವಿ ನಿವೃತ್ತ ಕುಲಸಚಿವರೂ ಆದ ಡಾ.ರಾಜೇಗೌಡ ಸಲಹೆ ಮಾಡುತ್ತಾರೆ.

ಮಳೆಯಲ್ಲಿ ಏರುಪೇರು
ವಿಶ್ವ ಹವಾಮಾನ ಸಂಸ್ಥೆ (ಡಬುÉಎಂಒ) ಹೊರತಂದ ಅಧ್ಯಯನ ವರದಿ ಪ್ರಕಾರ ಕಳೆದ 10-15 ವರ್ಷಗಳಲ್ಲಿ ಜಾಗತಿಕ ತಾಪಮಾನದ ಪ್ರಭಾವ ಕಂಡುಬರುತ್ತಿದ್ದು, ಇದಕ್ಕೆ ರಾಜ್ಯದ ದಕ್ಷಿಣ ಒಳನಾಡು ಕೂಡ ಹೊರತಾಗಿಲ್ಲ. ಒಂದು ವರ್ಷ ಭರಪೂರ ಮಳೆಯಾದರೆ, ಮತ್ತೂಂದು ವರ್ಷ ಬರ ಎದುರಾಗುತ್ತದೆ. ಇದೆಲ್ಲವೂ ಹೆಚ್ಚುತ್ತಿರುವ ತಾಪಮಾನಕ್ಕೆ ಹಿಡಿದ ಕನ್ನಡಿ. ಸ್ಥಳೀಯವಾಗಿ ಹಸಿರು, ಜಲಾಶಯ, ಕೆರೆ-ಕಟ್ಟೆಗಳಿರಬಹುದು. ಆದರೆ, ಈ ಜಾಗತಿಕ ತಾಪಮಾನ ಅದೆಲ್ಲವನ್ನೂ ಮೀರಿದೆ. ಹಾಗಾಗಿ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯದಂತಹ ಹಸಿರು ಮತ್ತು ಜಲಾಶಯಗಳಿರುವಲ್ಲಿಯೂ ತೀವ್ರ ಬಿಸಿಲಿನ ಅನುಭವ ಆಗುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಭಾಗದ ವಿಜ್ಞಾನಿ ಪ್ರೊ.ರವೀಂದ್ರನಾಥ್‌ ತಿಳಿಸುತ್ತಾರೆ.

ಒಟ್ಟಾರೆ ಅಂಕಿ-ಅಂಶಗಳು ಬಿಸಿಲಿನ ಧಗೆ ಬದಲಾಗುತ್ತಿರುವ ಟ್ರೆಂಡ್‌ ಅನ್ನು ಸೂಚಿಸುತ್ತವೆ. ಸಾಮಾನ್ಯವಾಗಿ ದಕ್ಷಿಣ ಒಳನಾಡಿನ ಆಯ್ದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಗಣನೀಯವಾಗಿ ಗರಿಷ್ಠ ಉಷ್ಣಾಂಶ ಏರಿಕೆ ಆಗಿದೆ. ಇದಕ್ಕೆ ಜಾಗತಿಕ ತಾಪಮಾನ ಒಂದೆಡೆಯಾದರೆ, ಮತ್ತೂಂದೆಡೆ ಸ್ಥಳೀಯ ಬೆಳವಣಿಗೆಗಳೂ ಕಾರಣವಾಗಿವೆ. ಹೆಚ್ಚುತ್ತಿರುವ ಕೈಗಾರಿಕೆಗಳು, ಕಾಂಕ್ರೀಟ್‌ ಕಾಡು, ಮರಗಳ ಹನನ ತಾಪಮಾನ ಏರಿಕೆಗೆ ಕೊಡುಗೆ ನೀಡುತ್ತಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಹವಾಮಾನ ತಜ್ಞ ರಾಜಾ ರಮೇಶ್‌ ಅಭಿಪ್ರಾಯಪಡುತ್ತಾರೆ.

-ವಿಜಯಕುಮಾರ್‌ ಚಂದರಗಿ

-ಉದಯವಾಣಿ

Comments are closed.