ಮೋಹಕ ತಾರೆ ಶ್ರೀದೇವಿ ಅಕಾಲಿಕ ಸಾವಿನಿಂದ ಅವರು ಪೋಷಿಸಬೇಕಾಗಿದ್ದ ಪಾತ್ರವೊಂದು ಮಾಧುರಿ ದೀಕ್ಷಿತ್‌ಗೆ ಒಲಿದಿದೆ. ಸ್ವತಃ ಈ ಸುದ್ದಿಯನ್ನು ಶ್ರೀದೇವಿ ಮಗಳು ಜಾಹ್ನವಿ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ‘ಅಮ್ಮನ ಹೃದಯಕ್ಕೆ ಆ ಪಾತ್ರ ತುಂಬಾ ಹತ್ತಿರವಾಗಿತ್ತು, ಅಂತಹ ಸುಂದರ ಪಾತ್ರ ಪೋಷಿಸುತ್ತಿರುವ ಮಾಧುರಿ ದೀಕ್ಷಿತ್ ಅವರಿಗೆ ನಾನು, ಅಪ್ಪ ಮತ್ತು ಖುಷಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ’ ಎಂದಿದ್ದಾರೆ.
ಅಭಿಷೇಕ್ ವರ್ಮನ್ ನಿರ್ದೇಶನದ ‘ಶಿದ್ದತ್’ ಸಿನಿಮಾದಲ್ಲಿ ಶ್ರೀದೇವಿ ಅಭಿನಯಿಸಬೇಕಾಗಿತ್ತು. ಇದೀಗ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಆ ಪಾತ್ರವನ್ನು ಮಾಧುರಿ ದೀಕ್ಷಿತ್ ತುಂಬಲಿದ್ದಾರೆ. ಸಂಜಯ್ ದತ್, ಆಲಿಯಾ ಭಟ್, ವರುಣ್ ಧವನ್ ಮತ್ತು ಆದಿತ್ಯ ರಾಯ್ ಕಪೂರ್ ಪಾತ್ರವರ್ಗದಲ್ಲಿದ್ದಾರೆ.
ಸಂಜಯ್ ದತ್ ಮತ್ತು ಶ್ರೀದೇವಿ ಈ ಚಿತ್ರದಲ್ಲಿ ಯುವ ಜೋಡಿಯೊಂದರ ಪೋಷಕರಾಗಿ ಅಭಿನಯಿಸಬೇಕಾಗಿತ್ತು. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಗುಲಾಬ್ ಗುಲ್ಲಟಿ ಬರೆದಿದ್ದಾರೆ. ಧರ್ಮ ಪ್ರೊಡಕ್ಷನ್ ನಿರ್ಮಾಣದ ಚಿತ್ರವಿದು. ಇದೇ ನಿರ್ಮಾಣ ಸಂಸ್ಥೆ ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಜಾಹ್ನವಿ ಅಭಿನಯದ ‘ದಢಕ್’ ಚಿತ್ರವನ್ನೂ ನಿರ್ಮಿಸಿದೆ.
Comments are closed.