ಮನೋರಂಜನೆ

ದೇವರ ಬಗ್ಗೆ ನಂಬಿಕೆ ಇಲ್ಲದವನ ಬಗ್ಗೆ ರಾಜ್‌ ಶೆಟ್ಟಿ ಹೊಸ ಚಿತ್ರ

Pinterest LinkedIn Tumblr


“ಒಂದು ಮೊಟ್ಟೆಯ ಕಥೆ’ ಚಿತ್ರದ ನಂತರ ಆ ಚಿತ್ರದ ನಾಯಕ ಕಂ ನಿರ್ದೇಶಕ ಕ್ರಮೇಣ ಕನ್ನಡ ಚಿತ್ರರಂಗದಲ್ಲಿ ಬಿಝಿಯಾಗುತ್ತಿದ್ದಾರೆ. ನಿರ್ದೇಶಕರಾಗಲ್ಲ, ನಟರಾಗಿ ಎಂಬುದು ಗಮನಾರ್ಹ. ಪುನೀತ್‌ ರಾಜಕುಮಾರ್‌ ನಿರ್ಮಾಣದ “ಮಾಯಾ ಬಜಾರ್‌ 2016′ ಎಂಬ ಚಿತ್ರದಲ್ಲಿ ರಾಜ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ಅಮ್ಮಚ್ಚಿಯ ನೆನಪು’ ಎಂಬ ಚಿತ್ರದಲ್ಲಿ ನೆಗೆಟಿವ್‌ ಪಾತ್ರದಲ್ಲಿ ಅವರು ಈಗಾಗಲೇ ಕಾಣಿಸಿಕೊಂಡಿದ್ದಾಗಿದೆ.

ಅದರ ಜೊತೆಗೆ ಹೇಮಂತ್‌ ಕುಮಾರ್‌ ಎನ್ನುವ ಹೊಸ ನಿರ್ದೇಶಕರ ಚಿತ್ರದಲ್ಲೂ ರಾಜ್‌ ನಟಿಸಿದ್ದಾರೆ. ಅಲ್ಲಿಗೆ ಕ್ರಮೇಣ ಅವರು ಬಿಝಿಯಾಗುತ್ತಿದ್ದಾರೆ. ಈ ಮಧ್ಯೆ ರಾಜ್‌ ಇನ್ನೊಂದು ಹೊಸ ಚಿತ್ರ ಮಾಡುವ ಸಿದ್ಧತೆಯಲ್ಲಿದ್ದಾರೆ. “ಇದೊಂದು ಥ್ರಿಲ್ಲರ್‌ ಚಿತ್ರ. ಥ್ರಿಲ್ಲರ್‌. ಫೈನಲ್‌ ಡ್ರಾಫ್ಟ್ ಆಗುತ್ತಿದೆ. ಅದು ಸಹ ಮಂಗಳೂರಿನ ಕಥೆ. “ಒಂದು ಮೊಟ್ಟೆಯ ಕಥೆ’ಯಲ್ಲಿ ಅರ್ಬನ್‌ ಮಂಗಳೂರನ್ನು ನೋಡಿದರೆ, ಈ ಚಿತ್ರದಲ್ಲಿ ಗ್ರಾಮೀಣ ಭಾಗವನ್ನು ನೋಡಬಹುದು.

ಸೂಳ್ಯ ಮುಂತಾದ ಕಡೆ ಚಿತ್ರೀಕರಣ ಮಾಡಿಸುವ ಯೋಚನೆ ಇದೆ. ಒಬ್ಬ ದೇವರ ಬಗ್ಗೆ ನಂಬಿಕೆ ಇಲ್ಲದವನು, ದೇವರನ್ನು ನಂಬುವಂತಹ ಸ್ಥಿತಿಗೆ ಬಂದರೆ, ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ರಾಜ್‌. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜೂನ್‌ ಅಥವಾ ಜುಲೈನಲ್ಲಿ ಚಿತ್ರ ಪ್ರಾರಂಭವಾಗಬೇಕಿತ್ತು. ಆದರೆ, ಸದ್ಯಕ್ಕೆ “ಮಾಯಾ ಬಜಾರ್‌ 2016′ ಚಿತ್ರದಲ್ಲಿ ರಾಜ್‌ ಬಿಝಿ ಇರುವುದರಿಂದ, ಆ ಚಿತ್ರ ಮುಗಿದ ನಂತರ ಈ ಚಿತ್ರವನ್ನು ಕೈಗೆತ್ತುಕೊಳ್ಳುವ ಸಾಧ್ಯತೆ ಇದೆ.

ಅಲ್ಲಿಗೆ ಇನ್ನೊಂದೆರೆಡು ತಿಂಗಳುಗಳ ಕಾಲ ಚಿತ್ರ ಮುಂದೂಡುವ ಸಾಧ್ಯತೆ ಇದೆ. ಇನ್ನು ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ, ಯಾರು ನಿರ್ಮಿಸುತ್ತಾರೆ ಮತ್ತು ಯಾವಾಗ ಶುರುವಾಗುತ್ತದೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎನ್ನುತ್ತಾರೆ ರಾಜ್‌. “ನಾನು ಬರೆಯುವಾಗಲೇ ಯಾವುದನ್ನೂ ನಿರ್ಧರಿಸುವುದಿಲ್ಲ. ಮೊದಲು ಬರೆದು ಆ ನಂತರ ತಾರಾಗಣ, ನಿರ್ಮಾಣ ಬಗ್ಗೆ ಯೋಚಿಸುತ್ತೇನೆ. ಇದು ಬಹಳ ಕಷ್ಟದ ಕಥೆ.

“ಒಂದು ಮೊಟ್ಟೆಯ ಕಥೆ’ಯನ್ನು ಒಂದೂವರೆ, ಎರಡು ತಿಂಗಳಲ್ಲಿ ಬರೆದು ಮುಗಿಸಿದೆ. ಇದರ ಮೊದಲ ಡ್ರಾಫ್ಟ್ ಬರೆಯುವುದಕ್ಕೇ ಆರು ತಿಂಗಳಾಯಿತು. ಅದೂ ಬರೆದು ಒಂದು ವರ್ಷವಾಗಿದೆ. ಇನ್ನೂ ಪೂರ್ತಿ ಆಗಿಲ್ಲ. ಇದೊಂದು ಸವಾಲಿನ ಕಥೆ. ಅದೇ ಕಾರಣಕ್ಕೆ ಸಾಕಷ್ಟು ಟೈಮ್‌ ತೆಗೆದುಕೊಳ್ಳುತ್ತಿದೆ’ ಎನ್ನುತ್ತಾರೆ ರಾಜ್‌.

ಬೆಂಗಳೂರಿಗೇ ಬರಬೇಕಂತೇನಿಲ್ಲ: ರಾಜ್‌ ಶೆಟ್ಟಿ ಅವರ ಕಾರ್ಯಕ್ರೇತ್ರ ಇದೀಗ ಮಂಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರೂ, ರಾಜ್‌ ಮಂಗಳೂರಿನಲ್ಲೇ ಇರುತ್ತಾರಂತೆ. “ನಾನು ಮಂಗಳೂರಲ್ಲೇ ಇದ್ದೀನಿ. ಶೂಟಿಂಗ್‌ ಇದ್ದರೆ ಬೆಂಗಳೂರಿಗೆ ಬರುತ್ತೀನಿ. ನನಗೆ ಮಂಗಳೂರಿನಲ್ಲಿದ್ದುಕೊಂಡೇ ಕೆಲಸ ಮಾಡೋಕೆ ಬಹಳ ಆಸೆ.

ಏಕೆಂದರೆ, ಇವತ್ತು ಎಲ್ಲವೂ ಡಿಜಿಟಲ್‌ ಆಗಿದೆ. ಇಲ್ಲೇ ಬರಲೇಬೇಕು ಅಂತಿಲ್ಲ. ಎಲ್ಲಿ ಬೇಕಾದರೂ ಕೂತು ಕೆಲಸ ಮಾಡಬಹುದು. ಇಲ್ಲೇ ಬಂದು ಮಾಡಬೇಕು ಅಂತ ಒಂದು ಭ್ರಮೆ ಇದೆಯಲ್ಲಾ, ಅದರಿಂದ ಆಚೆ ಬಂದು ಕೆಲಸ ಮಾಡೋಕೆ ನಾನು ಇಷ್ಟಪಡುತ್ತೀನಿ. ಅದಕ್ಕೋಸ್ಕರ ಅಲ್ಲೇ ಇದ್ದು ಕೆಲಸ ಮಾಡುತ್ತೀನಿ’ ಎಂಬುದು ರಾಜ್‌ ಅಭಿಪ್ರಾಯ.

ಜನರ ದೃಷ್ಟಿಕೋನ ಬದಲಾಗಿದೆ: ಇನ್ನು ರಾಜ್‌ ರಾತ್ರೋರಾತ್ರಿ ಬಹಳ ಫೇಮಸ್‌ ಆಗಿಬಿಟ್ಟರಲ್ಲಾ ಎಂದರೆ ನಗುತ್ತಾರೆ. ತಾನು ಬದಲಾಗಿಲ್ಲ, ತನ್ನ ಬಗ್ಗೆ ಜನರ ದೃಷ್ಟಿಕೋನ ಬದಲಾಗಿದೆ ಎನ್ನುತ್ತಾರೆ. “ನಾನು ಬದಲಾಗಿಲ್ಲ. ಹಾಗೆಯೇ ಇದ್ದೀನಿ. ನನ್ನ ಬಗ್ಗೆ ಜನರ ದೃಷ್ಟಿಕೋನ ಬದಲಾಗಿದೆ.

ಅದೇ ಬಟ್ಟೆ. ಅದೇ ಗಾಡಿ. ಈಗಲೂ ಸ್ಲಿಪರ್‌ ಬಸ್‌ನಲ್ಲಿ ಮುಖಕ್ಕೆ ಕಚೀಪು ಕಟ್ಟಿಕೊಂಡು ಓಡಾಡುತ್ತಿನಿ. ನಾನು ಎಲ್ಲಿಯವರೆಗೂ ಬದಲಾಗುವುದಿಲ್ಲವೋ, ಅಲ್ಲಿಯವರೆಗೂ ಜನರ ಮಾತಿಗೆ ಹೆಚ್ಚು ಯೋಚಿಸಬೇಕಿಲ್ಲ, ಹೆದರಬೇಕಿಲ್ಲ. ಇನ್ನು ಜನ ನನ್ನ ಹೇಗೆ ನೋಡಿದರೂ ಪರವಾಗಿಲ್ಲ’ ಎನ್ನುತ್ತಾ ಮಾತು ಮುಗಿಸುತ್ತಾರೆ ರಾಜ್‌.

-ಉದಯವಾಣಿ

Comments are closed.