ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಪ್ರಮುಖ ಘಟ್ಟ ತಲುಪಿದ್ದು, ಪ್ರಭಾವಿ ರಾಜಕೀಯ ನಾಯಕರೊಬ್ಬರ ಬ್ಯಾಂಕ್ ಖಾತೆಗೆ 1.8 ಕೋಟಿ ರೂ.ಗಳನ್ನು ಕಾರ್ತಿ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ.
ಮಾಜಿ ವಿತ್ತಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಇ.ಡಿ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್‌ನ (ಆರ್‌ಬಿಎಸ್) ಚೆನ್ನೈ ಶಾಖೆಯಿಂದ ಪ್ರಭಾವಿ ನಾಯಕನ ಖಾತೆಗೆ ಈ ಮೊತ್ತವನ್ನು ವರ್ಗಾಯಿಸಿರುವುದು ಪತ್ತೆಯಾಗಿದೆ.
ಹಣ ಸ್ವೀಕರಿಸಿದ ಆ ಮುಖಂಡರು ಕೇಂದ್ರ ಸರಕಾರದಲ್ಲಿ ದಶಕಗಳ ಕಾಲ ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು. ತನಿಖೆಗೆ ಅಡಚಣೆಯಾಗಬಹುದೆಂಬ ಕಾರಣಕ್ಕೆ ಈ ನಾಯಕರ ಹೆಸರು ಬಹಿರಂಗಪಡಿಸಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಪ್ರವರ್ತಿತ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಯಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ಕಾರ್ತಿ ಅವರನ್ನು ಸಿಬಿಐ ಬಂಧಿಸಿತ್ತು. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ವಹಿವಾಟು ಬೆಳಕಿಗೆ ಬಂದಿರುವುದು ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ.
2006ರ ಜನವರಿ 16ರಿಂದ 2009ರ ಸೆಪ್ಟೆಂಬರ್ 23ರ ನಡುವೆ ಐದು ಕಂತುಗಳಲ್ಲಿ ಆರ್‌ಬಿಎಸ್ ಬ್ಯಾಂಕಿನ ಹಣ ವರ್ಗಾವಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿವರಣೆ ಪಡೆಯಲು ರಾಜಕೀಯ ಗಣ್ಯರನ್ನು ಕರೆಸಿಕೊಳ್ಳುವ ಬಗ್ಗೆ ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.
ಸದ್ಯ ಸಿಬಿಐ ವಶದಲ್ಲಿರುವ ಕಾರ್ತಿಯ ವಿಚಾರಣೆ ಪೂರ್ಣಗೊಳ್ಳಲು ಇ.ಡಿ ಅಧಿಕಾರಿಗಳು ಕಾಯುತ್ತಿದ್ದಾರೆ. ಬಳಿಕ ಕಾರ್ತಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರ್ಟಿಗೆ ಮನವಿ ಮಾಡಲಿದ್ದಾರೆ. ಹಣದ ವರ್ಗಾವಣೆ ಕಾರಣ ಹಾಗೂ ವರಿಷ್ಠ ರಾಜಕಾರಣಿಯ ಜತೆಗಿರುವ ವ್ಯಾವಹಾರಿಕ ಸಂಬಂಧಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
‘ಕಾರ್ತಿ ಅವರ ಪ್ರಭಾವ ಹಾಗೂ ಸಂಪರ್ಕಗಳನ್ನು ಬಳಸಿ ಅಡಚಣೆಗಳನ್ನು ನಿವಾರಿಸಿಕೊಳ್ಳಲು ಹಣ ಪಾವತಿಸಿರುವುದಾಗಿ ಐಎನ್ಎಕ್ಸ್ ಮೀಡಿಯಾ ಹೇಳಿಕೊಂಡಿರುವುದರಿಂದ ಈ ನಿಟ್ಟಿನಲ್ಲಿ ವಿಸ್ತೃತ ತನಿಖೆಗಾಗಿ ರಾಜಕೀಯ ಮುಖಂಡರನ್ನು ಕರೆಸಿಕೊಳ್ಳುವುದು ಅಗತ್ಯವಾಗಿದೆ’ ಎಂದು ಇಡಿ ಅಧಿಕಾರಿ ತಿಳಿಸಿದರು.
ಆರ್‌ಬಿಎಸ್ ಚೆನ್ನೈ ಶಾಖೆಯ ತಮ್ಮ ಖಾತೆಯಿಂದ (ಖಾತೆ ಸಂಖ್ಯೆ 397990) ಕಾರ್ತಿ ಅವರು ರಾಜಕೀಯ ಗಣ್ಯರ ಖಾತೆಗೆ ಹಣ ವರ್ಗಾಯಿಸಿರುವುದು ಅವರ ನಡುವಣ ಸಂಪರ್ಕಗಳ ಬಗ್ಗೆ ಸಂದೇಹಕ್ಕೆ ಕಾರಣವಾಗಿದೆ. ಹಣ ದುರ್ಬಳಕೆ ತಡೆ ಕಾಯ್ದೆ ಅಡಿಯಲ್ಲಿ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಹೇಳಿಕೆ ನೀಡಿದ್ದಾರೆ. ಇದು ಕೋರ್ಟಿನಲ್ಲಿ ಪ್ರಬಲ ಸಾಕ್ಷ್ಯವಾಗಲಿದೆ. ಅವರ ಹೇಳಿಕೆ ಪ್ರಕಾರ, ಮುಖರ್ಜಿ ದಂಪತಿಗಳು 7 ಲಕ್ಷ ಡಾಲರ್ (3.1 ಕೋಟಿ ರೂ) ಹಣವನ್ನು ವಿದೇಶಗಳಲ್ಲಿರುವ ಅಂಗ ಸಂಸ್ಥೆಗಳ ಮೂಲಕ ಕಾರ್ತಿ ಖಾತೆಗೆ ಪಾವತಿಸಿದ್ದರು.
ಐಎನ್‌ಎಕ್ಸ್ ಮೀಡಿಯಾದ ಟಿವಿ ಚಾನೆಲ್‌ಗಾಗಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ (ಎಫ್‌ಐಪಿಬಿ) ಅನುಮತಿ ದೊರಕಿಸಿಕೊಡಲು ಈ ಹಣ ಪಾವತಿಸಲಾಗಿತ್ತು ಎಂದು ಮುಖರ್ಜಿ ದಂಪತಿ ಹೇಳಿಕೊಂಡಿದ್ದರು. ಎಫ್‌ಐಪಿಬಿ ವಿತ್ತ ಖಾತೆಯ ಅಧೀನದಲ್ಲಿದ್ದು, ಆಗ ಪಿ. ಚಿದಂಬರಂ ಸಚಿವರಾಗಿದ್ದರು.
ಎಫ್‌ಡಿಐ ಅನುಮತಿಗಾಗಿ 2007ರ ಮಾರ್ಚ್‌ನಲ್ಲಿ ಮುಖರ್ಜಿ ದಂಪತಿಗಳು ಎಫ್‌ಐಪಿಬಿಗೆ ಅರ್ಜಿ ಸಲ್ಲಿಸಿದ್ದರು. ನಂತರ ಎರಡು ತಿಂಗಳೊಳಗೆ ಅನುಮತಿಯನ್ನೂ ಪಡೆದುಕೊಂಡಿದ್ದರು. ಕೇವಲ 4.6 ಕೋಟಿ ರೂ.ಗಳ ವಿದೇಶಿ ನೇರ ಹೂಡಿಕೆಗೆ ಅನುಮತಿ ದೊರೆತಿದ್ದರೂ 305 ಕೋಟಿ ರೂ.ಗಳ ವಿದೇಶಿ ಹೂಡಿಕೆಯನ್ನು ಐಎನ್‌ಎಕ್ಸ್ ಮೀಡಿಯಾ ಪ್ರವರ್ತಕರು ಪಡೆದುಕೊಂಡಿರುವುದು ಐಟಿ ತನಿಖೆಯಿಂದ ಬೆಳಕಿಗೆ ಬಂದಿತ್ತು.