ಮನೋರಂಜನೆ

ಎಲ್ಲಾ ಇದ್ದರೂ ಶ್ರೀದೇವಿ ಎಂದೂ ಸಂತೋಷವಾಗಿರಲಿಲ್ಲ: ರಾಮ್ ಗೋಪಾಲ್ ವರ್ಮಾ

Pinterest LinkedIn Tumblr


ಮುಂಬೈ: ಬಹುಭಾಷಾ ನಟಿ ಶ್ರೀದೇವಿಯವರ ಅಭಿಮಾನಿಯಾಗಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಲವು ಪೋಸ್ಟರ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆದೆರಡು ದಿನಗಳಿಂದ ಹಾಕುತ್ತಿದ್ದಾರೆ. ಇದೀಗ ಅವರು ಫೇಸ್ ಬುಕ್ ನಲ್ಲಿ ಶ್ರೀದೇವಿ ಅಭಿಮಾನಿಗಳಿಗೆಂದು ಬರೆದಿರುವ ಪತ್ರ ಬಹಳ ಚರ್ಚೆಯ ವಿಷಯವಾಗಿದೆ.

ಗೋವಿಂದಾ..ಗೋವಿಂದಾ.., ಹೈರಾನ್, ಕ್ಷಣ..ಕ್ಷಣಂ…, ಗ್ರೇಟ್ ರಾಬರಿ ಇತ್ಯಾದಿ ಚಿತ್ರಗಳನ್ನು ಶ್ರೀದೇವಿಗೆಂದು ನಿರ್ದೇಶಿಸಿದ್ದ ರಾಮ್ ಗೋಪಾಲ್ ವರ್ಮಾ, ಶ್ರೀದೇವಿ ತೆರೆಯ ಮೇಲೆ ಮತ್ತು ಸಾರ್ವಜನಿಕವಾಗಿ ಎಷ್ಟು ಸಂತೋಷವಾಗಿ, ಖುಷಿಯಾಗಿದ್ದಂತೆ ಕಾಣುತ್ತಿದ್ದರೊ ನಿಜ ಜೀವನದಲ್ಲಿ ಅದಕ್ಕೆ ವ್ಯತಿರಿಕ್ತವಾಗಿದ್ದರು. ಅವರೊಬ್ಬ ಅಸಂತುಷ್ಟ ಮಹಿಳೆಯಾಗಿದ್ದರು. ಪ್ರತಿ ವ್ಯಕ್ತಿಯ ನಿಜವಾದ ಜೀವನವು ಹೇಗೆ ಪ್ರಪಂಚ ಗ್ರಹಿಸುತ್ತದೆ, ಅದಕ್ಕೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ ಎಂಬುದಕ್ಕೆ ಶ್ರೀದೇವಿ ಉತ್ತಮ ಉದಾಹರಣೆ ಎನ್ನುತ್ತಾರೆ ಆರ್ ಜಿವಿ.

ಶ್ರೀದೇವಿ ಭಾರತ ಸಿನಿಮಾ ಜಗತ್ತಿನ ಮಹಿಳಾ ಸೂಪರ್ ಸ್ಟಾರ್ ಮತ್ತು ಮಹತ್ವಾಕಾಂಕ್ಷಿ ಮಹಿಳೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಅವರ ಜೀವನದ ಒಂದು ಭಾಗವಷ್ಟೆ ಎನ್ನುತ್ತಾರೆ ಆರ್ ಜಿವಿ. ಅವರ ಬರವಣಿಗೆಯ ಟಿಪ್ಪಣಿ ಹೀಗಿದೆ:

ಭಾರತದಲ್ಲಿ ಅಸಂಖ್ಯಾತ ಅಭಿಮಾನಿಗಳಿಗೆ ಹೊರಜಗತ್ತಿಗೆ ಕಾಣುವ ಶ್ರೀದೇವಿಯ ಜೀವನ ಸಂಪೂರ್ಣ, ಸುಂದರವಾದ ಮುಖ, ಪ್ರತಿಭಾನ್ವಿತೆ, ಇಬ್ಬರು ಸುಂದರ ಪುತ್ರಿಯರೊಂದಿಗೆ ಸುಂದರ ಸಂಸಾರ. ಆದರೆ ಅವರು ನಿಜವಾಗಿಯೂ ಸುಂದರ ಬದುಕು, ಸಂಸಾರ ಮತ್ತು ಉತ್ತಮ ಜೀವನ ನಡೆಸುತ್ತಿದ್ದರೇ? ಕ್ಷಣ ಕ್ಷಣ ಸಿನಿಮಾಕ್ಕೆಂದು ಶ್ರೀದೇವಿಯನ್ನು ಭೇಟಿಯಾದ ದಿನದಿಂದ ಆಕೆಯನ್ನು ಬಲ್ಲೆ, ಆಕೆಯ ತಂದೆ ಸಾಯುವಲ್ಲಿಯವರೆಗೆ ಶ್ರೀದೇವಿಯ ಬದುಕು ಆಕಾಶದಲ್ಲಿ ಹಾರುವ ಹಕ್ಕಿಯಂತೆ ಸ್ವಚ್ಛಂದವಾಗಿತ್ತು. ತಂದೆಯ ಮರಣನಂತರ ತಾಯಿಯ ಅತಿ ಕಾಳಜಿಯಿಂದ ಗೂಡಿನಲ್ಲಿರುವ ಹಕ್ಕಿಯಂತಾಯಿತು. ಆ ಸಮಯದಲ್ಲಿ ಖ್ಯಾತ ನಟ, ನಟಿಯರಿಗೆ ಕಪ್ಪು ಹಣ ಹೆಚ್ಚು ದೊರಕುತ್ತಿತ್ತು. ತೆರಿಗೆ ಅಧಿಕಾರಿಗಳ ದಾಳಿಯ ಭೀತಿಯಿಂದ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಹೆಸರಿನಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ಶ್ರೀದೇವಿಯ ಬಳಿ ಇದ್ದ ಸಂಪತ್ತು ಕೂಡ ಹೀಗೆಯೇ ಆಯಿತು, ಆಕೆಯ ತಂದೆ ಸತ್ತಾಗ ಸ್ನೇಹಿತರು, ಬಂಧುಗಳು ಮೋಸ ಮಾಡಿದರು,

ಶ್ರೀದೇವಿಯ ತಾಯಿ ಹಲವು ಅಕ್ರಮ ಆಸ್ತಿಗಳಲ್ಲಿ ಹಣ ಹೂಡಿಕೆ ಮಾಡಿದ್ದರು. ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ಬೋನಿ ಕಪೂರ್ ಆಕೆಯ ಜೀವನದಲ್ಲಿ ಬರುವ ಹೊತ್ತಿಗೆ ಶ್ರೀದೇವಿ ನಿರ್ಗತಿಕರಾಗಿದ್ದರು. ಇನ್ನು ಬೋನಿ ಕಪೂರ್ ತಲೆ ಮೇಲೆ ಸಹ ಸಾಲದ ಕತ್ತಿ ತೂಗುತ್ತಿತ್ತು.

ನಂತರ ಶ್ರೀದೇವಿಯ ತಾಯಿ ತೀರಿಕೊಂಡ ನಂತರ ಆಕೆಯ ಕಿರಿ ಸೋದರಿ ಶ್ರೀಲತಾ ನೆರೆಮನೆಯ ಹುಡುಗನ ಜೊತೆ ಓಡಿಹೋಗಿ ಮದುವೆಯಾದಳು. ಶ್ರೀದೇವಿಯ ತಾಯಿ ತೀರಿಕೊಳ್ಳುವುದಕ್ಕೆ ಮೊದಲು ಆಸ್ತಿಯನ್ನೆಲ್ಲಾ ಆಕೆಯ ಹೆಸರಿಗೆ ಬರೆದಿಟ್ಟಿದ್ದರು. ಆದರೆ ಸೋದರಿ ಶ್ರೀಲತಾ ಆಸ್ತಿಯಲ್ಲಿ ತನಗೆ ಕೂಡ ಅರ್ಧಪಾಲು ಬರಬೇಕು ಎಂದು ಕೇಸು ಹಾಕಿದ್ದಳು. ತಾಯಿಗೆ ಮೆದುಳು ಸರ್ಜರಿಯಾಗಿತ್ತು. ಹಾಗಾಗಿ ವಿಲ್ ನಲ್ಲಿ ನನ್ನ ಹೆಸರು ಬರೆದಿರಲಿಲ್ಲ. ಅವರಿಗೆ ಬುದ್ಧಿ ಸ್ಥಿಮಿತದಲ್ಲಿರಲಿಲ್ಲ ಎಂದು ಶ್ರೀಲತಾ ವ್ಯಾಜ್ಯ ಹೂಡಿದ್ದಳು. ಈ ಸಂದರ್ಭದಲ್ಲಿ ದಿಕ್ಕೆಟ್ಟವರಂತೆ ಇದ್ದ ಶ್ರೀದೇವಿಗೆ ಬೋನಿ ಕಪೂರ್ ಆಸರೆಯಂತೆ ಕಂಡುಬಂದಿದ್ದು.

ಆಕೆಯ ಇಂಗ್ಲಿಷ್-ವಿಂಗ್ಲಿಷ್ ಸಿನಿಮಾ ಶ್ರೀದೇವಿ ನಿಜಜೀವನಕ್ಕೆ ಹೋಲಿಕೆಯಾಗುತ್ತದೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಬಂದಿದ್ದ ಶ್ರೀದೇವಿಗೆ ಎಲ್ಲರಂತೆ ಸಾಮಾನ್ಯವಾಗಿ ಬದುಕಲು ಸಾಧ್ಯವಾಗಲಿಲ್ಲ. ಬಾಹ್ಯ ಜಗತ್ತಿನಲ್ಲಿ ಆಕೆ ಅಸಂಖ್ಯಾತ ಮಂದಿಗೆ ಸೌಂದರ್ಯವತಿಯಾಗಿರಬುಹು, ಆದರೆ ಅಂತರಂಗದಲ್ಲಿ ಆಕೆ ತಾನು ಸೌಂದರ್ಯವತಿ ಎಂದು ಭಾವಿಸಿದ್ದಳೇ?

ಶ್ರೀದೇವಿ ಯಾವಾಗಲೂ ನಾಚಿಕೆ ಸ್ವಭಾವದ, ಅಸುರಕ್ಷತೆಯ ಮತ್ತು ಕಡಿಮೆ ವಿಶ್ವಾಸವಿರುವ ಹೆಣ್ಣು ಮಗಳಾಗಿ ಕಾಣುತ್ತಿದ್ದಳು. ತನ್ನ ಮಾನಸಿಕ ಅಭದ್ರತೆಗಳ ಬಗ್ಗೆ ಯಾರಾದರೂ ತಿಳಿದುಕೊಳ್ಳುತ್ತಾರೆಯೇ ಎಂಬ ಭೀತಿಯಿತ್ತು ಆಕೆಗೆ. ತನ್ನ ಸುತ್ತ ಪರದೆಯನ್ನು ಸೃಷ್ಟಿಸಿಕೊಂಡಿದ್ದರು. ಆಕೆಗೆ ತಾನು ತಪ್ಪು ಮಾಡಿದ್ದೇನೆ ಎಂಬ ಭಯ ಇದಕ್ಕೆ ಕಾರಣವಲ್ಲ. ಚಿಕ್ಕ ವಯಸ್ಸಿನಿಂದಲೇ ಖ್ಯಾತಿ ಗಳಿಸಿದ್ದರಿಂದ ತನ್ನ ಮನಸ್ಸಿನೊಳಗಿನ ತುಮುಲಗಳನ್ನು ಹೊರ ಜಗತ್ತಿಗೆ ತೋರಿಸಲು ಇಚ್ಛಿಸುತ್ತಿರಲಿಲ್ಲ. ಆಕೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗಲೇ ಇಲ್ಲ. ಇದಕ್ಕಾಗಿ ಚೆನ್ನಾಗಿ ಮೇಕಪ್ ಮಾಡಿಕೊಳ್ಳುತ್ತಿದ್ದರು. ಕ್ಯಾಮರಾ ಮುಂದೆ ಮಾತ್ರವಲ್ಲದೆ ಹಿಂದೆ ಕೂಡ ಬೇರೆಯವರಂತೆ ಕಾಣಲು ಯತ್ನಿಸುತ್ತಿದ್ದರು.

ಬಾಲಿವುಡ್ ನಲ್ಲಿ ತನ್ನ ಮಗಳು ಜಾಹ್ನವಿ ಮತ್ತು ಕಿರಿಯ ಮಗಳು ಖುಷಿಯನ್ನು ಜನರು ಸ್ವೀಕರಿಸಹುದೆ ಎಂಬ ಭಯ ಆಕೆಯನ್ನು ಕಾಡುತ್ತಿತ್ತು. ಆಕೆಯ ಕಣ್ಣುಗಳಲ್ಲಿ ನೋವನ್ನು ಕಂಡಿದ್ದೆ. ಅವಳು ವಾಸ್ತವವಾಗಿ ಮಹಿಳೆಯ ದೇಹದಲ್ಲಿ ಸಿಕ್ಕಿಬಿದ್ದ ಮಗುವಾಗಿದ್ದಳು… ಆಕೆ ನಿಷ್ಕಪಟ, ಆದರೆ ಅವಳ ಕಹಿ ಅನುಭವಗಳ ಕಾರಣ ಈ ರೀತಿಯ ಮನೋಭಾವ ಹೊಂದಿದ್ದಳು.

ಆಕೆಯ ಸಾವಿನ ವಿಚಾರ ಬಂದಾಗ ಅದು ಹೃದಯಾಘಾತವಾಗಿ ಆತಸ್ಮಿಕವಾಗಿ ಬಾತ್ ಟಬ್ ನಲ್ಲಿ ಬಿದ್ದು ಅಕಾಲಿಕ ಮರಣಹೊಂದಿರುವುದು. ಆದರೆ ಆಕೆ ತೆಗೆದುಕೊಳ್ಳುತ್ತಿದ್ದ ಔಷಧಗಳು ಭಾರೀ ಪ್ರಭಾವಬೀರಿರಬಹುದು.ದೊಡ್ಡ ದೊಡ್ಡ ಮದುವೆಗಳು, ಪಾರ್ಟಿಗಳು ನಡೆದ ನಂತರ ಹಲವು ಆತ್ಮಹತ್ಯೆಗಳು ಮತ್ತು ಆಕಸ್ಮಿಕ ಸಾವುಗಳು ಸಂಭವಿಸುತ್ತವೆ.

ಯಾಕೆಂದರೆ ಹೆಚ್ಚು ಖಿನ್ನತೆ ಮತ್ತು ಅಸುರಕ್ಷತೆ ಹೊಂದಿರುವ ವ್ಯಕ್ತಿಗಳಿಗೆ ಜಗತ್ತು ಯಾಕಿಷ್ಟು ಸುಂದರವಾಗಿದೆ, ಖುಷಿಪಡುತ್ತಿದೆ ಎಂದು ಅರ್ಥವಾಗುವುದಿಲ್ಲ. ತಮ್ಮ ಸುತ್ತಮುತ್ತ ಬೆಳಕು ಇದ್ದರೂ ಇಂತಹ ವ್ಯಕ್ತಿಗಳಿಗೆ ಸಂತೋಷವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅವರು ತೀವ್ರ ಬೇಸರದ ಸ್ಥಿತಿಗೆ ಹೋಗುತ್ತಾರೆ. ಯಾವುದನ್ನೂ ಅನುಭವಿಸುವ ಸ್ಥಿತಿಯಲ್ಲಿ ಅಂತವರು ಇರುವುದಿಲ್ಲ.

ಹೆಚ್ಚು ಖಿನ್ನತೆಯನ್ನು ಹೊಂದಿರುವ ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಇನ್ನು ಕೆಲವರು ತಮ್ಮ ಆತಂಕ, ಖಿನ್ನತೆಯನ್ನು ನಿಯಂತ್ರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದು ಒಂದು ಹಂತದಲ್ಲಿ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಗೊತ್ತಿರುವುದಿಲ್ಲ.

ಶ್ರೀದೇವಿ ಸಾವಿನ ಸುತ್ತ ಹುಟ್ಟಿಕೊಂಡಿರುವ ಅನುಮಾನದ ಹುತ್ತವನ್ನು ಪಕ್ಕಕ್ಕಿಟ್ಟು ಆಕೆಯ ಜೀವನದ ಬಗ್ಗೆ ಮತ್ತೆ ಹೇಳುವುದಾದರೆ ಸಾಮಾನ್ಯವಾಗಿ ಬೇರೆ ಜನರು ಸತ್ತಾಗ ನಾನು ರೆಸ್ಟ್ ಇನ್ ಪೀಸ್ ಎಂದು ಹೇಳುವುದಿಲ್ಲ, ಆದರೆ ಶ್ರೀದೇವಿ ವಿಚಾರದಲ್ಲಿ ಹಾಗೆ ಹೇಳಲು ಬಯಸುತ್ತೇನೆ ಏಕೆಂದರೆ ಆಕೆ ಕೊನೆಗೂ ಈಗ ಶಾಂತಿಯಿಂದ ವಿಶ್ರಮಿಸಿದ್ದಾಳೆ, ಅದು ಆಕೆಯ ಜೀವನದಲ್ಲಿ ಮೊದಲ ಸಲವೇ ಅಥವಾ ಸಾವಿನಲ್ಲಿಯೇ?

Comments are closed.