ಕ್ರೀಡೆ

ವಿರಾಟ್‌ ಕೊಹ್ಲಿ ತಮ್ಮ ಆಕ್ರಮಣಶೀಲತೆಯನ್ನು ಇನ್ನಷ್ಟು ಹದಗೊಳಿಸಿಕೊಳ್ಳಬೇಕು: ಸ್ಟೀವ್‌ ವಾ

Pinterest LinkedIn Tumblr


ಮೊನಾಕೋ: ಇತ್ತೀಚಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿರ ಆಕ್ರಮಣಶೀಲತೆ ಕೊಂಚ ಅತಿಯಾಯಿತು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ವಾ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಆಕ್ರಮಣಶೀಲತೆಯೆಲ್ಲಾ ಒಬ್ಬ ವರ್ಚಸ್ವೀ ನಾಯಕನಿಗಿರಬೇಕಾದ ಗುಣಗಳು ಎಂದು ವಾ ಇದೇ ವೇಳೆ ತಿಳಿಸಿದ್ದಾರೆ.

58 ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟೆಸ್ಟ್‌ ಸರಣಿಯನ್ನು 1-2ರಲ್ಲಿ ಸೋತು ಬಳಿಕ ಏಕದಿನ ಸರಣಿ(5-1) ಹಾಗು ಟಿ-20 ಸರಣಿ(2-1)ಯನ್ನು ಜಯಿಸಿತ್ತು. ಇಡೀ ಪ್ರವಾಸದಲ್ಲಿ ಕೊಹ್ಲಿರ ಅದ್ಭುತ ಬ್ಯಾಟಿಂಗ್‌ ಫಾರ್ಮ್‌ ಸದ್ದು ಮಾಡಿತ್ತು.

“ಕೊಹ್ಲಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಗಮನಿಸಿದ್ದೇನೆ. ಅವರ ಆಕ್ರಮಣಶೀಲತೆ ಸ್ವಲ್ಪ ಅತಿಯಾಯಿತು ಎನಿಸಿತು. ಆದರೆ ಒಬ್ಬ ನಾಯಕನಾಗಿ ಇವೆಲ್ಲಾ ಕಲಿಯಬೇಕಿರುವಂಥದ್ದೇ” ಎಂದು ವಾ ತಿಳಿಸಿದ್ದಾರೆ.

“ತಮ್ಮದೇ ರೀತಿಯಲ್ಲಿ ತಂಡದಲ್ಲಿರುವ ಪ್ರತಿಯೊಬ್ಬರೂ ಆಡಲು ಆಗುವುದಿಲ್ಲ ಎಂದು ಕೊಹ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಅಜಿಂಕ್ಯಾ ರಹನೆ, ಚೇತೇಶ್ವರ ಪೂಜಾರಾರಂಥ ಸಹನಾಶೀಲ ಆಟಗಾರರೂ ಇದ್ದಾರೆ. ಹಾಗಾಗಿ ಪ್ರತಿಯೊಬ್ಬ ಆಟಗಾರನೂ ವಿಭಿನ್ನ ಎಂದು ಕೊಹ್ಲಿ ಅರ್ಥ ಮಾಡಿಕೊಳ್ಳಬೇಕು” ಎಂದು ವಾ ತಿಳಿಸಿದ್ದಾರೆ.

ತಮ್ಮ ಆಕ್ರಮಣಶೀಲತೆಯನ್ನು ಇನ್ನಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಕೊಹ್ಲಿ ಕಲಿಯಬೇಕಿದೆ ಎಂದು ವಾ ಇದೇ ವೇಳೆ ಹೇಳಿದ್ದಾರೆ.

“ಕೊಹ್ಲಿ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅವರಲ್ಲಿ ಆ ಚರಿಷ್ಮಾ ಹಾಗು ಎಕ್ಸ್ ಫ್ಯಾಕ್ಟರ್‌ ಇದೆ ಹಾಗು ತಮ್ಮ ತಂಡ ಇದನ್ನೇ ಅನುಕರಿಸಲಿ ಎಂದು ಅವರು ಬಯಸುತ್ತಾರೆ. ಇಡೀ ತಂಡವೇ ತಮ್ಮಂತೆ ಸಕಾರಾತ್ಮಕವಾಗಿ ಆಡಿ ಶೀಘ್ರವಾಗಿ ಜಯಿಸಲಿ ಎಂದು ಕೊಹ್ಲಿ ಬಯಸುತ್ತಾರೆ” ಎಂದು ವಾ ತಿಳಿಸಿದ್ದಾರೆ.

“ಭಾರತ ಸದ್ಯ ಅತ್ಯುತ್ತಮ ತಂಡವಾಗಿದ್ದು ಆಟದ ಎಲ್ಲ ಮಾದರಿಗಳಲ್ಲೂ ಗೆಲುವಿನ ನಗೆ ಬೀರುತ್ತಿದ್ದಾರೆ.ತಮ್ಮ ತಂಡದ ಮೇಲೆ ವಿರಾಟ್‌ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲ ಮಾದರಿಗಳಲ್ಲೂ ನಂ.1 ಆಗುವ ಕೊಹ್ಲಿರ ಬಯಕೆ ಇವತ್ತಿನ ದಿನಗಳಲ್ಲಿ ಕಷ್ಟ” ಎಂದು 1999ರ ವಿಶ್ವ ಕಪ್‌ ವಿಜೇತ ಆಸೀಸ್‌ ತಂಡದ ನಾಯಕ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇಂಗ್ಲೆಂಡ್‌ ಹಾಗು ಆಸ್ಟ್ರೇಲಿಯಾ ಪ್ರವಾಸವಿದ್ದು ಭಾರತ ತಂಡ ಕಳೆದ ಬಾರಿ ಈ ಎರಡ ಪ್ರವಾಸಗಳ ವೇಳೆ ಟೆಸ್ಟ್‌ ಸರಣಿ ಸೋತಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನೋಡಲಿದೆ.

ಈ ಕುರಿತು ಮಾತನಾಡಿದ ಸ್ಟೀವ್‌ ವಾ “ಆಸ್ಟ್ರೇಲಿಯಾದಲ್ಲಿ ಆತಿಥೇಯರೇ ಫೇವರಿಟ್‌ ಆಗಿರಲಿದ್ದಾರೆ. ಭಾರತ ತನ್ನ ತವರಿನಲ್ಲಿ ಆಡುವಂತೆ ನಾವೂ ನಮ್ಮ ನೆಲದಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದೇವೆ. ಆಸ್ಟ್ರೇಲಿಯಾದಲ್ಲಿ ವಿರಾಟ್‌ ಪ್ರಮುಖ ಆಟಗಾರರಾಗಿರಲಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಕೊಹ್ಲಿ ಸಾರಥ್ಯದ ಭಾರತ ತಂಡದ ಆತ್ಮವಿಶ್ವಾಸದ ಮಟ್ಟ ಹೆಚ್ಚಿದ್ದು ಆಸ್ಟ್ರೇಲಿಯಾದಲ್ಲಿ ಗೆಲ್ಲುವ ಭರವಸೆ ಹೊಂದಿದ್ದಾರೆ” ಎಂದು ಹೇಳಿದ್ದಾರೆ.

ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕುರಿತು ಮಾತನಾಡಿದ ವಾ “ಆವರು ಈಗಲೂ ಶ್ರೇಷ್ಠ ಆಟಗಾರರಾಗಿದ್ದಾರೆ.ಆದರೆ ಅವರಲ್ಲಿ ಅದಮ್ಯ ಉತ್ಸಾಹ ಇರಬೇಕಾಗುತ್ತದೆ. ಅದು ಅವರಲ್ಲಿ ಈಗ ಇದೆ. ಆದರೆ ವಯಸ್ಸಾಗುತ್ತಾ ನೀವು ಮುಂಚಿನಂತೆಯೇ ತಯಾರಾಗಲು ಸಾಧ್ಯವಿಲ್ಲ. ಆವರೊಬ್ಬ ಶ್ರೇಷ್ಠ ನಾಯಕ” ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಪಿಚ್‌ಗಳು ಇತ್ತೀಚೆಗೆ ತಮ್ಮ ಸತ್ವ ಕಳೆದುಕೊಳ್ಳುತ್ತಿದ್ದು ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆಯೂ ಇದ್ದು

ಭಾರತೀಯ ಆಟಗಾರರಿಗೆ ಅನುವಾಗುವ ಸಾಧ್ಯತೆ ಇದೆ ಎಂದು ವಾ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತ, ಆಸ್ಟ್ರೇಲಿಯಾ ಹಾಗು ದಕ್ಷಿಣ ಆಫ್ರಿಕಾ ತಂಡಗಳು ಅತ್ಯುತ್ತಮ ಆಟವಾಡುತ್ತಿದ್ದು ನಂ.1 ಸ್ಥಾನಕ್ಕೆ ಪೈಪೋಟಿ ನೀಡುತ್ತಿದೆ ಎಂದು ವಾ ತಿಳಿಸಿದ್ದಾರೆ.

Comments are closed.