ಮನೋರಂಜನೆ

ಗೂಗಲ್ ಚಿತ್ರ ವಿಮರ್ಶೆ

Pinterest LinkedIn Tumblr

*ಶರಣು ಹುಲ್ಲೂರು

ಯುವಕ ಯುವತಿಯರನ್ನು ಚಿತ್ರಮಂದಿರದತ್ತ ಸೆಳೆಯಲು ಸಿನಿಮಾ ರಂಗದಲ್ಲಿ ಏನೆಲ್ಲ ಕಸರತ್ತು ನಡೆಯುತ್ತಿವೆ. ಇದರ ಭಾಗವಾಗಿ ಬಹುತೇಕ ನಿರ್ದೇಶಕರು ಯುವ ಪ್ರೇಮಿಗಳ ಲವ್‌ಸ್ಟೋರಿಗಳ ಬೆನ್ನು ಬಿದ್ದಿದ್ದಾರೆ. ಹಾಗಾಗಿ ಮಧ್ಯ ವಯಸ್ಸಿನವರ ಕಥೆಗಳು ಬೆಳ್ಳಿ ತೆರೆಯಿಂದ ಮರೆಯಾಗುತ್ತಿವೆ. ಕುಟುಂಬ ಸಮೇತ ನೋಡುವಂತಹ ಸಿನಿಮಾಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಈ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್‌, ಯುವಕರ ಮತ್ತು ಮಧ್ಯ ವಯಸ್ಸಿನವರ ಮನಸ್ಸಿನ ತಮುಲುಗಳನ್ನು ಹದವಾಗಿ ಬೆರೆಸಿಕೊಂಡು ‘ಗೂಗಲ್‌’ ಸಿನಿಮಾ ಮಾಡಿದ್ದಾರೆ.

ಕೆಲ ನ್ಯೂನ್ಯತೆಗಳ ನಡುವೆಯೂ ಈ ಚಿತ್ರ ಹಲವು ಉತ್ತಮ ಅಂಶಗಳನ್ನು ನೋಡುಗರ ಮನಸ್ಸಿನಲ್ಲಿ ಉಳಿಸುತ್ತದೆ. ಬದುಕಿನ ಕುರಿತಾದ ಪಾಠ ಮಾಡುತ್ತದೆ. ದಾಂಪತ್ಯದಲ್ಲಿ ಸಮರಸದ ಗೀತೆ ಹೇಳಿಸುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಇಷ್ಟವಾಗುತ್ತದೆ.

ನೋಡುಗನ ಮನಸ್ಥಿತಿ ಬದಲಾದ ಈ ಸಂದರ್ಭದಲ್ಲಿ ನಿರ್ದೇಶಕ ನಾಗೇಂದ್ರ ಪ್ರಸಾದ್‌, ಇಂಥದ್ದೊಂದು ಕತೆಯನ್ನು ಆಯ್ದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಮೊದಲು ಅವರನ್ನು ಅಭಿನಂದಿಸಬೇಕು. ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ಸಂಗೀತ ಮತ್ತು ನಾಯಕರಾಗಿ ಚಿತ್ರದ ಬಹುತೇಕ ಜವಾಬ್ದಾರಿ ಹೊತ್ತಿದ್ದಾರೆ ನಿರ್ದೇಶಕರು. ಈ ಹೊರೆ ಕಡಿಮೆಯಾಗಿದ್ದರೆ, ಕತೆಗೆ ಮತ್ತಷ್ಟು ನ್ಯಾಯ ಸಲ್ಲಿಸಬಹುದಿತ್ತು.

ನಮ್ಮ ನಡುವೆಯೇ ನಡೆಯಬಹುದಾದ ಅಥವಾ ನಡೆದಿರಬಹುದಾದ ಕಥೆ ಈ ಸಿನಿಮಾದಲ್ಲಿದೆ. ಆ ಸ್ಟೋರಿಯನ್ನು ಹಲವು ಆಯಾಮಗಳಲ್ಲಿ ನೋಡಿದ್ದರಿಂದ ಹಲವು ಚರ್ಚೆಗಳನ್ನೂ ಅದು ಹುಟ್ಟು ಹಾಕುತ್ತದೆ. ಅವನು ಹರೀಶ್‌ (ನಾಗೇಂದ್ರ ಪ್ರಸಾದ್‌). ಖಾಸಗಿ ಕಂಪೆನಿಯ ಉದ್ಯೋಗಿ. ಈತನ ಪತ್ನಿ ನಂದಿನಿ ( ಶುಭಾ ಪೂಂಜಾ). ಈ ದಂಪತಿಗೆ ಮುದ್ದಾದ ಮಗುವಿದೆ. ಸಂಸಾರದ ಸುಖಕ್ಕಾಗಿ ಹಗಲಿರುಳು ದುಡಿಯುತ್ತಿದ್ದೇನೆ ಎನ್ನುವ ಗಂಡ. ಕೆಲಸದ ಬಿಝಿಯಲ್ಲಿ ತನ್ನ ಸಣ್ಣ ಸಣ್ಣ ಆಸೆಗಳನ್ನೂ ಗಂಡ ಮರೆಯುತ್ತಿದ್ದಾನೆ ಎಂದುಕೊಳ್ಳುವ ನಂದಿನಿ. ಒಬ್ಬರ ಮನಸು ಮತ್ತೊಬ್ಬರು ಅರಿತುಕೊಳ್ಳದೇ ಹೋಗುತ್ತಾರೆ. ಹಾಗಾಗಿ ನಂದಿನಿ ಬದುಕಿನಲ್ಲಿ ಪರಪುರುಷನ ಪ್ರವೇಶವಾಗುತ್ತದೆ. ಮಗು ಮತ್ತು ಗಂಡನನ್ನು ಮರೆತು, ಆ ಹುಡುಗನೊಂದಿಗೆ ಅವಳು ಓಡಿ ಹೋಗುತ್ತಾಳೆ. ಪತ್ನಿಯ ಹುಡುಕಾಟ, ತಾಯಿಗಾಗಿ ಮಗಳ ಸಂಕಟ ಹೀಗೆ ಕತೆ ಟಿಸಿಲೊಡೆಯುತ್ತದೆ. ಕೊನೆಯಲ್ಲಿ ನಂದಿನಿ ಯಾರ ಪಾಲಾಗುತ್ತಾಳೆ ಎಂಬ ಟ್ವಿಸ್ಟ್‌ ಕೂಡ ಇದೆ. ಈ ಹುಡುಕಾಟದಲ್ಲಿ ಕರ್ನಾಟಕದಲ್ಲಿಯೇ ಇರುವ ಗೂಗಲ್‌ ಎಂಬ ಊರು ಸಿಗುತ್ತದೆ. ಆ ಉಪಕತೆಯನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು.

ನಿರ್ದೇಶಕ ನಾಗೇಂದ್ರ ಪ್ರಸಾದ್‌ ನಟನಿಗಿಂತ ಡೈರೆಕ್ಟರ್‌ ಆಗಿ ಇಷ್ಟವಾಗುತ್ತಾರೆ. ಸ್ವತಃ ಚಿತ್ರ ಸಾಹಿತಿಯೂ ಆಗಿರುವುದರಿಂದ ಕತೆಯ್ನನು ಹಾಡಿನ ಮೂಲಕ ದಾಟಿಸುತ್ತಾರೆ. ಶುಭಾ ಪೂಂಜಾ ಮೈ ಚಳಿ ಬಿಟ್ಟು ಪಾತ್ರ ಪೋಷಿಸಿದ್ದಾರೆ. ತಮ್ಮ ಮಿತಿಗಳನ್ನು ಅರಿತುಕೊಂಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರೊಂದಿಗೆ ಬೇಬಿ ವೈಷ್ಣವಿ, ಜಯದೇವ್‌, ಶೋಭರಾಜ್‌, ಸಂಪತ್‌, ಮುನಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗಾಗಿ ಪಾತ್ರಗಳು ನೋಡುಗನಿಗೆ ಬೇಗ ಅರ್ಥವಾಗುತ್ತಾ ಹೋಗುತ್ತವೆ.
ಇದು ಸುಖ ದಾಂಪತ್ಯಕ್ಕೆ ಒಂದಷ್ಟು ಸೂತ್ರಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾ. ಆ ಸುಖಿ ದಾಂಪತ್ಯದ ಹುಡುಕಾಟಕ್ಕೆ ಗೂಗಲ್‌ಗೆ ಮೊರೆ ಹೋಗಬಹುದು.

Comments are closed.