ಅಂತರಾಷ್ಟ್ರೀಯ

ಸೌದಿಗೆ ಪಡೆಗಳನ್ನು ಕಳುಹಿಸಲು ಪಾಕ್‌ ನಿರ್ಧಾರ?

Pinterest LinkedIn Tumblr


ಇಸ್ಲಾಮಾಬಾದ್‌: ಪ್ರಮುಖ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ತನ್ನ ಪಡೆಗಳನ್ನು ನಿಯೋಜಿಸಲು ಪಾಕಿಸ್ತಾನ ನಿರ್ಧರಿಸಿದೆ.

ನೆರೆಯ ಯೆಮೆನ್‌ ಮೇಲೆ ದಂಡೆತ್ತಿ ಹೋಗಿರುವ ಸೌದಿಗೆ ತನ್ನ ಪಡೆಗಳನ್ನು ನಿಯೋಜಿಸಲು ಪಾಕ್‌ ದ್ವಿಪಕ್ಷೀಯ ಒಪ್ಪಂದವೊಂದನ್ನು ಮಾಡಿಕೊಂಡಿದೆ.

ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್‌ ಕಮರ್‌ ಜಾವೆದ್‌ ಬಾಜ್ವಾ ಹಾಗು ಪಾಕ್‌ನ ಸೌದಿ ರಾಯಭಾರಿ ಸಯೀದ್‌ ಅಲ್‌ ಮಲೀಕಿ ಸಮಾಲೋಚನೆ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

“ಪಾಕ್‌-ಸೌದಿ ದ್ವಿಪಕ್ಷೀಯ ಭದ್ರತಾ ಸಹಕಾರದ ಭಾಗವಾಗಿ ಪಾಕಿಸ್ತಾನ ಸೇನೆ ತನ್ನ ತುಕಡಿಗಳನ್ನು ಸೌದಿ ಅರೇಬಿಯಾಗೆ ಕಳುಹಿಸುತ್ತಿದ್ದು ಸಲಹಾ ಮಿಶನ್ ಒಂದನ್ನು ಆರಂಭಿಸಲಿದೆ. ಪಡೆಗಳು ಈಗಾಗಲೇ ಅಲ್ಲಿದ್ದು ಬೇರೆಡೆ ನಿಯೋಜಿಸಲಾಗುವುದು” ಎಂದು ಪಾಕ್‌ ಸೇನೆ ಹೇಳಿದೆ.

ಕೊಲ್ಲಿ ಹಾಗು ಪ್ರದೇಶದ ಇನ್ನಿತರ ದೇಶಗಳೊಂದಿಗೆ ಪಾಕ್‌ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಂಡಿದೆ.

ಸಲಹೆ ಹಾಗು ತರಬೇತಿ ಸಂಬಂಧ ಕೆಲಸಗಳಿಗೆ ಈಗಾಗಲೇ ಪಾಕ್‌ನ ಸುಮಾರು 1000 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಒಂದು ಬ್ರಿಗೇಡ್‌ ಮಟ್ಟದ ತುಕಡಿಗಳನ್ನು ಸೌದಿಗೆ ಕಳುಹಿಸಲು ಇಸ್ಲಾಮಾಬಾದ್‌ ಸಜ್ಜಾಗಿದೆ ಎಂದು ತಿಳಿದುಬಂದಿದೆ.

2015ರಲ್ಲಿ ಯೆಮೆನ್‌ ಆಕ್ರಮಣ ಆರಂಭವಾದಾಗಿನಿಂದಲೂ ಪಡೆಗಳನ್ನು ಕಳುಹಿಸಿಕೊಡಲು ಪಾಕಿಸ್ತಾನವನ್ನು ಸೌದಿ ಅರೇಬಿಯಾ ಕೋರುತ್ತಿದೆ. ಆದರೆ ಯಾವುದೇ ಪ್ರಾದೇಶಿಕ ವೈಷಮ್ಯದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಪಾಕ್‌ ಸೌದಿ ಕರೆಯನ್ನು ನಿರಾಕರಿಸುತ್ತಲೇ ಬಂದಿತ್ತು.

ಯೆಮೆನ್‌ನ ಯುದ್ಧ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ಅಲ್ಲಿನ ದಂಗೆಕೋರರು ಸೌದಿ ಮೇಲೆ ಮಿಸೈಲ್‌ ದಾಳಿಗೆ ಮುಂದಾಗಿದ್ದಾರೆ.

ಪಾಕ್‌ ಸೇನೆಯ ಮಾಜಿ ಮುಖ್ಯಸ್ಥ ರಹೀಲ್ ಶರೀಫ್‌ ನೇತೃತ್ವದಲ್ಲಿ ಸೇರಿದಂತೆ ಪ್ರತ್ಯೇಕ ಮುಸ್ಲಿಂ ದೇಶಗಳ ಮಿಲಿಟರಿ ಬಣ ಮಾಡುವ ಸೌದಿಯ ಆಶಯ ಇನ್ನೂ ಆರಂಭಿಕ ಹಂತದಲ್ಲೇ ಇದೆ.

ಇದೇ ವಿಚಾರವಾಗಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಬಾಜ್ವಾ ಸೌದಿಗೆ ಎರಡು ಬಾರಿ ಭೇಟಿಯಿತ್ತು ಮರಳಿದ್ದಾರೆ. ಇರಾನ್‌, ಕತಾರ್‌, ಸೌದಿ ಅರೇಬಿಯಾ ಹಾಗು ಟರ್ಕಿ ಸೇರಿದಂತೆ ಮುಸ್ಲಿಂ ಜಗತ್ತಿನೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಉದ್ದೇಶಿಸಿರುವ ಪಾಕ್‌ ಈ ವಿಚಾರವಾಗಿ ಇರಾನ್‌ ಹಾಗು ಕತಾರ್‌ ಕೆಂಗಣ್ಣಿಗೆ ಗುರಿಯಾಗಲು ಇಚ್ಛಿಸುವುದಿಲ್ಲ.

ಈ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ನೋಡುತ್ತಿರುವ ಬಾಜ್ವಾ ಕತಾರ್‌ ಹಾಗು ಟರ್ಕಿಗೆ ಭೇಟಿ ನೀಡಿದ್ದಾರೆ.

ಪಾಕ್‌ನ ಈ ಹೊಸ ನಿರ್ಧಾರದಿಂದ ಆಂತರಿಕ ಮಟ್ಟದಲ್ಲಿ ಸಾಕಷ್ಟು ಭಿನ್ನಭಿಪ್ರಾಯ ಮೂಡುವ ಸಾಧ್ಯತೆ ಇದೆ. ಸೌದಿಗೆ ತನ್ನ ಪಡೆಗಳನ್ನು ಕಳುಹಿಸದಿರಲು ಪಾಕ್‌ ಈಗಾಗಲೇ ತನ್ನ ಸಂಸತ್ತಿನಲ್ಲಿ ನಿರ್ಧರಿಸಿದೆ.

Comments are closed.