ಮನೋರಂಜನೆ

ನಟನೆಗೆ ವಿದಾಯ ಹೇಳಿದ ಕಮಲ್ ಹಾಸನ್; ಸಮಾಜ ಸೇವೆಯಲ್ಲಿಯೇ ಬದುಕಿನ ಕೊನೆಯಾಗಲಿ ಎಂದ ನಟ

Pinterest LinkedIn Tumblr

ನವದೆಹಲಿ: ತಮಿಳುನಾಡಿನ ಜನರಿಗಾಗಿ ರಾಜಕೀಯ ಪ್ರವೇಶಿಸಲು ನಿರ್ಧರಿಸಿರುವುದಾಗಿ ಹೇಳಿರುವ ನಟ ಕಮಲ್‌ ಹಾಸನ್‌, ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುವುದು ಕೊನೆಯಾಗಲಿದೆ ಎಂದಿದ್ದಾರೆ.

ನಿರ್ಮಾಣ ಹಂತದಲ್ಲಿರುವ ನನ್ನ ಎರಡು ಸಿನಿಮಾಗಳು ಮಾತ್ರ ತೆರೆ ಮೇಲೆ ಬರಲಿವೆ. ತದನಂತರ ನಾನು ಯಾವುದೇ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ ಎಂದು ಕಮಲ್ ಹಾಸನ್ ಮಂಗಳವಾರ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸೋತರೂ ರಾಜಕೀಯದಲ್ಲಿ ಉಳಿಯುವಿರಾ? ಎನ್ನುವ ಪ್ರಶ್ನೆಗೆ; ಪ್ರಾಮಾಣಿಕವಾಗಿ ಬದುಕಲು ಏನಾದರೂ ಮಾಡಬೇಕು. ಇಲ್ಲಿ ಗೆಲುವಿನ ಪೂರ್ಣ ವಿಶ್ವಾಸ ಇರುವುದಾಗಿ ಉತ್ತರಿಸಿದ್ದಾರೆ.

ನನಗೆ ರಾಜಕೀಯದಲ್ಲಿ ಪೂರ್ಣ ತೊಡಗಿದ ಅನುಭವ ಇಲ್ಲವಾದರೂ, ಕಳೆದ 37 ವರ್ಷಗಳಿಂದ ಸಮಾಜ ಸೇವೆಯಲ್ಲಿದ್ದೇನೆ. ಈ 37 ವರ್ಷಗಳಲ್ಲಿ 10 ಲಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಸಂಪಾದಿಸಿದ್ದೇನೆ. 250 ವಕೀಲರು, ಯುವಜನತೆ ಸೇರಿ ಹಲವಾರು ಜನ ನಮ್ಮ ಸಮಾಜ ಕಲ್ಯಾಣ ಆಂದೋಲನದಲ್ಲಿ ಸ್ವಯಂಸೇವಕರಾಗಲಿದ್ದಾರೆ ಎಂದು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ಬ್ಯಾಂಕ್ ಖಾತೆಯನ್ನು ಸುಧಾರಿಸಿಕೊಳ್ಳಲು ಇಲ್ಲಿಗೆ ಬರುತ್ತಿಲ್ಲ. ಇರುವುದರಲ್ಲಿ ಅತ್ಯಂತ ಸುಖವಾದ, ನಿವೃತ್ತ, ಮೆಚ್ಚುಗೆಯ ಬದುಕನ್ನು ನಡೆಸಬಹುದು. ಬರಿ ನಟನಾಗಿಯೇ ಬದುಕು ಮುಗಿಸಲು ಇಚ್ಛೆ ಇಲ್ಲ. ಹಾಗಾಗಿಯೇ ರಾಜಕೀಯ ಪ್ರವೇಶಿಸಿ ಜನರ ಸೇವೆಯಲ್ಲಿ ನನ್ನ ಜೀವನ ಕೊನೆಯಾಗಬೇಕು ಎಂದು ಪ್ರತಿಜ್ಞೆ ಮಾಡಿಕೊಂಡಿರುವೆ ಎಂದಿದ್ದಾರೆ.

ಕೇಸರಿ ಬಣ್ಣದ ಕುರಿತು ಕಳವಳ ವ್ಯಕ್ತಪಡಿಸಿರುವ ಕಮಲ್‌, ನಮ್ಮದು ‘ಕಪ್ಪು’ ರಾಜಕೀಯ ಯಾನ. ಕಪ್ಪು ದ್ರಾವಿಡ ಜನಾಂಗದ ಧ್ವನಿ ಮತ್ತು ಅವರ ಗಾಢ ಬಣ್ಣದ ಸಂಕೇತ. ಇದು ಸಾಂಸ್ಕೃತಿಕವಾಗಿ ತಮಿಳಿಗರಿಗೆ ಕೆಟ್ಟ ಬಣ್ಣ ಎನಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.