ಮನೋರಂಜನೆ

ಎಲ್ಲರನ್ನು ಫಿದಾ ಮಾಡಿದ ಪ್ರಿಯಾ ಕಣ್ ಸನ್ನೆಗೆ ಸೋತ ರೋಷನ್ ಯಾರೆಂದು ಗೊತ್ತೇ..?

Pinterest LinkedIn Tumblr

ಹುಬ್ಬು ಹಾರಿಸುತ್ತಾ, ಕಣ್ಣಿನ ನೋಟದಲ್ಲೇ ಯುವಕರನ್ನು ಫಿದಾ ಮಾಡಿದವರು ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌. ಅವರಿಗೆ ಕಣ್ಸನ್ನೆ ಮೂಲಕವೇ ಪ್ರೀತಿಯ ಬಾಣ ಬಿಟ್ಟವರು ನಟ ರೋಶನ್‌ ಅಬ್ದುಲ್‌ ರವೂಫ್‌.

ಪ್ರಿಯಾ ಪ್ರಕಾಶ್‌ ಮೂವತ್ತು ಸೆಕೆಂಡಿನ ದೃಶ್ಯದ ಮೂಲಕ ಪಡ್ಡೆ ಹೈಕ್ಳ ಹೃದಯ ಕದ್ದು ‘ನ್ಯಾಷನಲ್‌ ಕ್ರಶ್‌’ ಎನಿಸಿಕೊಂಡಿದ್ದಾರೆ. ಟ್ವಿಟ್ಟರ್‌, ಫೇಸ್‌ಬುಕ್‌, ವಾಟ್ಸಾಪ್‌ಗಳಲ್ಲಿ ಇವರದೇ ಹವಾ. ಅದ್ಯಾಕೋ ಏನೋ ಪ್ರಿಯಾಗೆ ಕಣ್ಣು ಹೊಡೆಯುವ ರೋಶನ್‌ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದರೂ, ಪ್ರಿಯಾಳಷ್ಟು ಸುದ್ದಿಯಾಗಲಿಲ್ಲ.

ರೋಶನ್‌ ಅಬ್ದುಲ್‌ ರವೂಫ್‌ ಕೇರಳದ ಗುರುವಾಯೂರಿನವರು. 19 ವರ್ಷದ ರೋಶನ್, ತ್ರಿಶ್ಯೂರ್ ನಗರದ ವಿಮಲ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದ ರೋಶನ್ ತೀರ್ಪುಗಾರರಾಗಿದ್ದ ನಟಿ ಪ್ರಿಯಾಮಣಿ ಅವರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

‘ಹುಬ್ಬು ಹಾರಿಸಲು ನಾನೇನೂ ಟ್ರೇನಿಂಗ್ ಪಡೆದಿಲ್ಲ. ಚಿತ್ರೀಕರಣದ ಸಂದರ್ಭ ಕಣ್ಣು ಹುಬ್ಬು ಹಾರಿಸುವುದನ್ನು ತೋರಿಸಿ ಎಂದು ನಿರ್ದೇಶಕರು ಹೇಳಿದರು. ನಾವಿಬ್ಬರೂ ಕಣ್ಣುಹುಬ್ಬು ಹಾರಿಸುತ್ತಾ ತೋರಿಸಿದೆವು. ಅವರಿಗೆ ವಿಶೇಷವಾಯಿತು. ಬಳಿಕ ಆ ದೃಶ್ಯವನ್ನು ಹೆಣೆದರು. ಆದರೆ ಆ ದೃಶ್ಯ ಬರೆಯುವಾಗ ಅದು ಈ ಮಟ್ಟದಲ್ಲಿ ಕ್ಲಿಕ್‌ ಆಗುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ’ ಎಂದು ರವೂಫ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಇಬ್ಬರೂ ದೃಶ್ಯದಲ್ಲಿದ್ದರೂ, ಕಣ್ಣಿನ ಸನ್ನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರೂ ಪ್ರಿಯಾ ವಾರಿಯರ್‌ ಅಷ್ಟು ತಾವು ಜನಪ್ರಿಯವಾಗಿಲ್ಲದ್ದಕ್ಕೆ ರೋಶನ್‌ ಬೇಸರ ಪಟ್ಟುಕೊಂಡಂತೆ ಇಲ್ಲ.

‘ಪ್ರಿಯಾ ಜನಪ್ರಿಯಳಾಗಿರುವುದಕ್ಕೆ ಖುಷಿಯಾಗುತ್ತಿದೆ. ಕೇರಳದ ನಟಿಯೊಬ್ಬರು ರಾತ್ರೋರಾತ್ರಿ ನಟನೆಯ ಮೂಲಕ ಜನಪ್ರಿಯವಾಗಿರುವುದು ಹೆಮ್ಮೆಯ ಸಂಗತಿ’ ಎಂದು ಸಹನಟಿಯನ್ನು ಶ್ಲಾಘಿಸಿದ್ದಾರೆ.

ರೋಶನ್ ಒರು ಅಡಾರ್ ಲವ್ ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ ‘ನಾನ್ ಸೆನ್ಸ್’ ಫೆಬ್ರವರಿ 16ರಂದು ತೆರೆಕಾಣಲಿದೆ. ನಾನ್ ಸೆನ್ಸ್ ಸಿನಿಮಾದಲ್ಲಿ ವಿನಯ್ ಪೋರ್ಟ್ ಮತ್ತು ಶೃತಿ ರಾಮಚಂದ್ರನ್ ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ಪದವಿ ವ್ಯಾಸಂಗ ಮಾಡುತ್ತಿರುವ ರೋಶನ್ ಸ್ನಾತಕೋತ್ತರ ಪದವಿಯನ್ನು ಪಡೆಯುವ ಇಚ್ಛೆಯನ್ನು ಹೊಂದಿದ್ದಾರೆ.

ಡ್ಯಾನ್ಸರ್ ಆಗಿರುವ ರೋಶನ್ ಮುಂದಿನ ದಿನಗಳಲ್ಲಿ ಸಕ್ರೀಯವಾಗಿ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ಒರು ಅಡಾರ್ ಲವ್ ಚಿತ್ರದಲ್ಲಿ ಪ್ರಿಯಾ ವಾರಿಯರ್, ರೋಶನ್ ಅಬ್ದುಲ್, ನುರೀನ್ ಶರೀಫ್, ಸಿಯಾದ್ ಶಹಜಾನ್ ಸೇರಿದಂತೆ ನವಕಲಾವಿದರನ್ನು ಚಿತ್ರತಂಡ ಹೊಂದಿದೆ. ಒರು ಅಡಾರ್ ಲವ್ ಇದೇ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

Comments are closed.