ಕರಾವಳಿ

ಕುಷ್ಠರೋಗದ ಬಗ್ಗೆ ಆತಂಕಪಡದೆ ಚಿಕಿತ್ಸೆ ಪಡೆಯಿರಿ- ಪ್ರಮೋದ್

Pinterest LinkedIn Tumblr

ಉಡುಪಿ: ಕುಷ್ಠರೋಗ ಚಿಕಿತ್ಸೆಗೆ ಸಮಗ್ರ ಔಷಧಿ ಇಂದು ಲಭ್ಯವಿದ್ದು, ರೋಗಪೀಡಿತರು ಆತಂಕಪಡಬೇಕಿಲ್ಲ ಎಂದು ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ಎಂ.ಜಿ.ಎಂ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಕುಷ್ಠರೋಗ ನಿವಾರಣಾ ದಿನಾಚರಣೆ ಮತ್ತು ಸ್ಪರ್ಶ ಕುಷ್ಠ ಅರಿವು ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಷ್ಠರೋಗ ಪೂರ್ವಜನ್ಮದ ಪಾಪದ ಫಲ ಎಂಬ ನಂಬಿಕೆ ಹಾಗೂ ಕುಷ್ಠರೋಗ ಬಂದವರನ್ನು ಕುಟುಂಬದಿಂದ ಹೊರಹಾಕುವಂತಹ ಮೂಢನಂಬಿಕೆಗಳು ಹಿಂದಿನ ದಿನಗಳಲ್ಲಿ ಬಹಳಷ್ಟು ಇತ್ತು. ಆದರೆ ಹೊರಹಾಕಿದ ಕುಷ್ಠರೋಗಿಗಳನ್ನು ಎತ್ತಿಕೊಂಡು, ಸ್ನಾನ ಮಾಡಿಸಿ, ಊಟ ಮಾಡಿಸಿ ಸೇವೆ ಮಾಡಿದ ಮಹಾನ್ ಮಾನವತಾವಾದಿ ಮದರ್ ತರೆಸಾ. ಮಾನವನ ಜೀವನಮಟ್ಟ ಉನ್ನತೀಕರಣಗೊಂಡಂತೆ, ವಿಜ್ಞಾನ ಕಾಯಿಲೆಗೆ ಔಷಧಿಯನ್ನು ಹುಡುಕಿದ ಪರಿಣಾಮ ಇಂದು ಕುಷ್ಠರೋಗ ಕಡಿಮೆಯಾಗಿದೆ. ಆದರೆ ರೋಗ ಮೂಲ ಪತ್ತೆ ಹಾಗೂ ಸಮಗ್ರ ಔಷಧೋಪಚಾರದ ಕೊರತೆಯಿಂದ ರೋಗ ಹರಡುವಿಕೆ ಮತ್ತೆ ವರದಿಯಾಗುತ್ತಿದೆ; ಈ ಬಗ್ಗೆ ಜಾಗೃತಿ ಮೂಡಿಸಿ ನಮ್ಮ ಮೈಮೇಲಿರುವ ಮಚ್ಚೆಯ ಮೇಲೆ ಸ್ಪರ್ಶ ಮಾಡಿ, ಸ್ಪರ್ಶಜ್ಞಾನ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು, ಅಲ್ಲಿ ಯಾವುದೇ ಸ್ಪರ್ಶಜ್ಞಾನ ಸಿಗದಿದಲ್ಲಿ ತಕ್ಷಣವೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲೇ ಇದನ್ನು ನಿವಾರಣೆ ಮಾಡಲು ಸಾಧ್ಯ ಎಂದರು. ಇದರ ಬಗ್ಗೆ ಇತರರಿಗೂ ಸಲಹೆ ನೀಡುವಂತೆ ಸೂಚಿಸಿದರು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಸುರೇಂದ್ರ ಚಂಬಾಳ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 22 ಕುಷ್ಠರೋಗದ ಪ್ರಕರಣಗಳು ದಾಖಲಾಗಿದ್ದು, ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿ ಬೇರೆಯವರಿಗೆ ಹರಡದಂತೆ ತಡೆಯಬಹುದು ಎಂದರು. ಇದಕ್ಕೆ ಪ್ರಾಥಮಿಕ ಹಂತದಲ್ಲಿಯೇ ಸಂಪೂರ್ಣ ಚಿಕಿತ್ಸೆಯನ್ನು ಮಾಡಿದರೆ ಆತ ಸಂಪೂರ್ಣ ಗುಣಮುಖನಾಗುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ.ಶೆಟ್ಟಿ, ಎಂ.ಜಿ.ಎಂ ಕಾಲೇಜಿನ ಪ್ರಾಂಶಪಾಲರಾದ ಡಾ. ಸಂಧ್ಯಾ ನಂಬಿಯಾರ್, ಎಂ.ಜಿ.ಎಂ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಯು.ಆರ್. ಲವರಾಜ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೋಹಿಣಿ ಸ್ವಾಗತಿಸಿದರು. ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Comments are closed.