ಮನೋರಂಜನೆ

ಮಾನಸ ಸರೋವರ ಮತ್ತೆ ಹರಿಯುತಿದೆ

Pinterest LinkedIn Tumblr


ಅಂದು ಶ್ರೀನಾಥ್‌, ರಾಮಕೃಷ್ಣ ಹಾಗೂ ಪದ್ಮಾವಾಸಂತಿ ಒಟ್ಟಿಗೆ ಸೇರಿದ್ದರು. ಅವರ ಜೊತೆ ಶಿವರಾಜಕುಮಾರ್‌ ಕೂತಿದ್ದರು. “ಮಾನಸ ಸರೋವರ’ ಚಿತ್ರದ ಈ ಮೂವರು ನಟರು ಅಂದು ಒಟ್ಟಿಗೆ ಸೇರಲು ಕಾರಣ “ಮಾನಸ ಸರೋವರ’ ಮತ್ತು ಶಿವರಾಜಕುಮಾರ್‌. ಹೌದು, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ಮಾನಸ ಸರೋವರ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಎವರ್‌ಗ್ರೀನ್‌ ಸಿನಿಮಾ. ಈಗ ಮತ್ತೆ ಆ ಸಿನಿಮಾ ಸುದ್ದಿ ಮಾಡಲು ಕಾರಣ ಧಾರಾವಾಹಿ.

ಹೌದು, “ಮಾನಸ ಸರೋವರ’ ಎಂಬ ಧಾರಾವಾಹಿಯೊಂದು ಆರಂಭವಾಗುತ್ತಿದೆ. ಹೊಸ ವರ್ಷದಿಂದ ಅಂದರೆ ಜನವರಿಯಿಂದ ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ವಿಶೇಷವೆಂದರೆ ಶಿವರಾಜಕುಮಾರ್‌ ನಿರ್ಮಿಸುತ್ತಿರೋದು. ಹೌದು, ಶಿವರಾಜಕುಮಾರ್‌ “ಶ್ರೀಮುತ್ತು ಸಿನಿ ಸರ್ವೀಸ್‌’ ಎಂಬ ಬ್ಯಾನರ್‌ ಹುಟ್ಟುಹಾಕಿ, ಅದರಡಿ “ಮಾನಸ ಸರೋವರ’ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಅವರ ಮಗಳು ನಿವೇದಿತಾ ಈ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

“ಮಾನಸ ಸರೋವರ’ ಸಿನಿಮಾಕ್ಕೂ ಧಾರಾವಾಹಿಗೂ ಏನಾದರೂ ಸಂಬಂಧವಿದೆಯಾ ಎಂದರೆ ಖಂಡಿತಾ ಇದೆ. ಅದು ಕಥೆಯಿಂದ ಹಿಡಿದು ಕಲಾವಿದರವರೆಗೆ. “ಮಾನಸ ಸರೋವರ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶ್ರೀನಾಥ್‌, ಪದ್ಮಾವಾಸಂತಿ, ರಾಮಕೃಷ್ಣ ಅವರು ಈ ಧಾರಾವಾಹಿಯಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು ಈ ಧಾರಾವಾಹಿಯ ಮತ್ತೂಂದು ವಿಶೇಷವೆಂದರೆ, ಕಥೆ ಕೂಡಾ “ಮಾನಸ ಸರೋವರ’ ಚಿತ್ರದ ಅಂಶಗಳಿಂದಲೇ ಆರಂಭವಾಗಲಿದೆ.

ಜೊತೆಗೆ ಶೀರ್ಷಿಕೆ ಗೀತೆ ಸೇರಿದಂತೆ ಆ ಚಿತ್ರದಲ್ಲಿನ ಬಹುತೇಕ ಎಲ್ಲಾ ಹಾಡುಗಳು ಈ ಧಾರಾವಾಹಿಯುದ್ದಕ್ಕೂ ಮೂಡಿಬರಲಿದೆಯಂತೆ. ಹಾಗಾಗಿ, “ಮಾನಸ ಸರೋವರ’ ಚಿತ್ರಕ್ಕೂ ಧಾರಾವಾಹಿಗೂ ಸಂಬಂಧವಿದೆ ಎನ್ನಬಹುದು. ಈ ಧಾರಾವಾಹಿಯನ್ನು ರಾಮ್‌ ಜಯಶೀಲ ವೈದ್ಯ ನಿರ್ದೇಶಿಸುತ್ತಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಬಗ್ಗೆ ಮಾತನಾಡುವ ಶಿವಣ್ಣ, “ನಾನು ಪುಟ್ಟಣ್ಣ ಕಣಗಾಲ್‌ ಅವರ ಅಭಿಮಾನಿ. ಅವರ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಮಾತ್ರ ಈಡೇರಲೇ ಇಲ್ಲ.

ಅವರ “ನಾಗರಹಾವು’ ಚಿತ್ರ ಬಿಡುಗಡೆಯಾದಾಗ ನನಗೆ 11 ವರ್ಷ. ಸಪೈರ್‌ ಚಿತ್ರಮಂದಿರದಲ್ಲಿ ಆ ಸಿನಿಮಾ ನೋಡಿ ತುಂಬಾ ಖುಷಿಪಟ್ಟಿದ್ದೆ. ಈ ಸಿನಿಮಾ ಹಿಟ್‌ ಆಗುತ್ತದೆಂದು ಅಪ್ಪಾಜಿಯಲ್ಲಿ ಹೇಳಿದ್ದೆ. ಈ ವಿಷಯ ಪುಟ್ಟಣ್ಣ ಅವರ ಕಿವಿಗೂ ಬಿತ್ತು. ಆಗ ಪುಟ್ಣಣ್ಣ “ಯಾರು ಈ ಹುಡುಗ’ ಎಂದು ಕೇಳಿದ್ದರು. ಆಗ ಚಿಕ್ಕಪ್ಪ ವರದಪ್ಪ ಅವರು, “ಅಣ್ಣನ ಮಗ’ ಎಂದಿದ್ದರು. ಚಿತ್ರರಂಗಕ್ಕೆ ಬಂದ ನಂತರ ಅವರ ಒಂದು ಸಿನಿಮಾದಲ್ಲಾದರೂ ನಟಿಸಬೇಕೆಂಬ ಆಸೆ ಇತ್ತು.

ಆದರೆ, ಅದು ಈಡೇರಲಿಲ್ಲ. ಈಗ ನಮ್ಮ ಸಂಸ್ಥೆಯ ಬ್ಯಾನರ್‌ನಲ್ಲಿ ಪುಟ್ಟಣ್ಣ ಅವರ ಸಿನಿಮಾವನ್ನು ಧಾರಾವಾಹಿ ಮಾಡುವ ಅವಕಾಶ ಸಿಕ್ಕಿದೆ. ಅದು ನನ್ನ ಭಾಗ್ಯ’ ಎನ್ನುತ್ತಾರೆ. ಇನ್ನು, ಮಗಳು ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟ ಬಗ್ಗೆಯೂ ಶಿವಣ್ಣ ಖುಷಿಯಿಂದ ಮಾತನಾಡಿದರು. “ನಾವೇನೋ ಆ್ಯಕ್ಟ್ ಮಾಡ್ತಿದ್ದೇವೆ. ಆದರೆ, ನಿವಿಗೂ (ನಿವೇದಿತಾ) ಈ ಫೀಲ್ಡ್‌ನಲ್ಲೇ ಏನೋ ಮಾಡಬೇಕೆಂಬ ಆಸೆ ಇತ್ತು. ಅವಳು ಬೇರೆ ಬೇರೆ ಭಾಷೆಯ ಧಾರಾವಾಹಿ, ಸಿನಿಮಾ ನೋಡುತ್ತಾಳೆ. ಹೊಸ ಹೊಸ ಐಡಿಯಾಗಳು ಬರುತ್ತವೆ.

ಅವಳಿಗೆ ನಿರ್ಮಾಣದಲ್ಲೂ ಆಸಕ್ತಿ ಇತ್ತು. ಹಾಗಾಗಿ, ಆಕೆ ಈಗ ನಿರ್ಮಾಪಕಿಯಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ’ ಎಂದರು. ಮುಂದಿನ ದಿನಗಳಲ್ಲಿ ಈ ಬ್ಯಾನರ್‌ನಡಿ ಸಾಕಷ್ಟು ಸಿನಿಮಾ ನಿರ್ಮಿಸುವ ಆಲೋಚನೆ ಕೂಡಾ ಇದೆಯಂತೆ. ನಿರ್ಮಾಪಕಿ ನಿವೇದಿತಾ ಅವರಿಗೆ ಮೊದಲ ಪತ್ರಿಕಾಗೋಷ್ಠಿಯಾದ್ದರಿಂದ ಹೆಚ್ಚು ಮಾತನಾಡಲಿಲ್ಲ. ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಹಿರಿಯ ನಟ ಶ್ರೀನಾಥ್‌ ಅವರಿಗೆ ಶಿವರಾಜಕುಮಾರ್‌ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿರುವ ಖುಷಿಯ ಜೊತೆಗೆ ಮತ್ತೂಮ್ಮೆ “ಮಾನಸ ಸರೋವರ’ದ ಪಾತ್ರವಾಗುವ ಖುಷಿಯಂತೆ.

“ಇಲ್ಲಿ ನನ್ನ ಪಾತ್ರ ಮುಂದುವರಿಯುತ್ತದೆ. ಹಳೆಯ ಕಾಲದಿಂದ ಆರಂಭವಾಗಿ, ಇವತ್ತಿಗೆ ಏನು ಬೇಕೋ ಆ ತರಹ ಕತೆ ಸಾಗುತ್ತದೆ. ಯಶಸ್ವಿ ಸಿನಿಮಾವೊಂದನ್ನು ಧಾರಾವಾಹಿ ಮಾಡುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಆದರೆ ಶಿವು ಮಾಡಿದ್ದಾರೆ. ಈ “ಮಾನಸ ಸರೋವರ’ ಮತ್ತೆ 30 ವರ್ಷ ಮುಂದುವರಿಯಲಿ’ ಎಂದರು. ಮತ್ತೂಬ್ಬ ಹಿರಿಯ ನಟ ರಾಮಕೃಷ್ಣ ಅವರಿಗೆ ಧಾರಾವಾಹಿ ಎಂದರೆ ಇಷ್ಟವಿಲ್ಲವಂತೆ. ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದೇ 15 ವರ್ಷಗಳೇ ಕಳೆದಿದೆ. ಆದರೆ, ಈ ಧಾರಾವಾಹಿಯಲ್ಲಿ ನಟಿಸಲು ಕಾರಣ ಶಿವರಾಜಕುಮಾರ್‌ ಅವರಂತೆ.

“ಶಿವರಾಜಕುಮಾರ್‌ ಅವರು ಫೋನ್‌ ಮಾಡಿ, ಈ ತರಹ ಒಂದು ಧಾರಾವಾಹಿ ಮಾಡುತ್ತಿದ್ದೇನೆ. ನೀವೊಂದು ಪಾತ್ರ ಮಾಡಬೇಕೆಂದು ಕೇಳಿಕೊಂಡರು. ಅದನ್ನು ಪ್ರಸಾದ ಎಂದು ಭಾವಿಸಿ ಮಾಡುತ್ತಿದ್ದೇನೆ’ ಎಂದರು. ಹಿರಿಯ ಕಲಾವಿದೆ ಪದ್ಮಾವಾಸಂತಿ ಕೂಡಾ “ಮಾನಸ ಸರೋವರ’ ಧಾರಾವಾಹಿ ಬಗ್ಗೆ ಖುಷಿ ಹಂಚಿಕೊಂಡರು. ನಿರ್ದೇಶಕ ರಾಮ್‌ ಜಯಶೀಲ ವೈದ್ಯ ಧಾರಾವಾಹಿಯ ಗುಟ್ಟುಬಿಟ್ಟು ಕೊಡುವ ಮೂಡ್‌ನ‌ಲ್ಲಿರಲಿಲ್ಲ. ಧಾರಾವಾಹಿಯಲ್ಲಿ ಶಿಲ್ಪಾ ಹಾಗೂ ಪ್ರಜ್ವಲ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

-ಉದಯವಾಣಿ

Comments are closed.