ಅಂತರಾಷ್ಟ್ರೀಯ

ಮುಂಬಯಿ ದಾಳಿ ಸಂಚುಕೋರ ಸಯೀದ್‌ ಮರುಬಂಧನಕ್ಕೆ ಅಮೆರಿಕ ತಾಕೀತು

Pinterest LinkedIn Tumblr


ವಾಷಿಂಗ್ಟನ್‌: 26/11ರ ಮುಂಬಯಿ ದಾಳಿಯ ಸಂಚುಕೋರ ಹಾಗೂ ಜೆಯುಡಿ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಪುನಃ ಬಂಧಿಸಿ ಶಿಕ್ಷೆಗೆ ಗುರಿಪಡಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಒತ್ತಾಯಿಸಿದೆ.

ಈತನನ್ನು ಪಾಕಿಸ್ತಾನ ಇಂದು ಗೃಹಬಂಧನದಿಂದ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ತಕ್ಷಣ ಭಾರತ ವಿರೋಧಿ ಹೇಳಿಕೆಗಳನ್ನು ನೀಡಲಾರಂಭಿಸಿದ ಸಯೀದ್‌, ಕಾಶ್ಮೀರಕ್ಕಾಗಿ ಮತ್ತೆ ಜನರನ್ನು ಒಗ್ಗೂಡಿಸುವುದಾಗಿ ಹೇಳಿದ್ದಾನೆ.

‘ಲಷ್ಕರೆ ತಯ್ಬಾ ಮುಖಂಡ ಹಫೀಜ್‌ ಸಯೀದ್‌ನನ್ನು ಗೃಹಬಂಧನದಿಂದ ಬಿಡುಗಡೆ ಮಾಡಿರುವುದು ತೀವ್ರ ಕಳವಳಕಾರಿ. ಎಲ್‌ಇಟಿ ಅಮೆರಿಕದ ಪ್ರಜೆಗಳೂ ಸೇರಿದಂತೆ ನೂರಾರು ಅಮಾಯಕರನ್ನು ಹತ್ಯೆ ಮಾಡಿದ ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ವಿದೇಶಾಂಗ ವಕ್ತಾರ ಹೀದರ್ ನೌರ್ಟ್‌ ಹೇಳಿದ್ದಾರೆ.

‘ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್‌ ಸಯೀದ್‌ನ ಮರುಬಂಧನ ಹಾಗೂ ಆತನ ಅಪರಾಧಗಳಿಗಾಗಿ ಶಿಕ್ಷೆಗೆ ಗುರಿಪಡಿಸುವ ಪ್ರಕ್ರಿಯೆಯನ್ನು ಪಾಕಿಸ್ತಾನ ಪುನರಾರಂಭಿಸಬೇಕು’ ಎಂದು ನೌರ್ಟ್‌ ಹೇಳಿದ್ದಾರೆ.

ಸಯೀದ್‌ ತಲೆಗೆ ಅಮೆರಿಕ 1 ಕೋಟಿ ಡಾಲರ್‌ ಬಹುಮಾನ ಘೋಷಿಸಿತ್ತು. 10 ತಿಂಗಳ ಗೃಹಬಂಧನದ ಬಳಿಕ ಆತನನ್ನು ಬಿಡುಗಡೆ ಮಾಡಲು ಪಾಕ್ ಸರಕಾರ ನಿರ್ಧರಿಸಿತ್ತು. ಆತನ ವಿರುದ್ಧದ ಪ್ರಕರಣಗಳನ್ನು ಮುಂದುವರಿಸದಿರಲು ನಿರ್ಧರಿಸಿತ್ತು. ಈತನ ಬಿಡುಗಡೆಯಿಂದಾಗಿ ಮುಂಬಯಿ ದಾಳಿ ಸಂಚುಕೋರನನ್ನು ಶಿಕ್ಷೆಗೆ ಗುರಿಪಡಿಸಬೇಕೆಂಬ ಭಾರತದ ಪ್ರಯತ್ನಗಳಿಗೆ ತಾತ್ಕಾಲಿಕ ಹಿನ್ನಡೆಯಾಗಿದೆ.

Comments are closed.