ಮನೋರಂಜನೆ

ಗರ್ಭಿಣಿ ಯಾರು? ಅವಳಲ್ಲ, ಅವನು!!

Pinterest LinkedIn Tumblr


ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆ ಸಾಲಿಗೆ ಈಗ “ಐ ಯಾಮ್‌ ಪ್ರಗ್ನೆಂಟ್‌’ ಎಂಬ ಹೊಸಬರ ಚಿತ್ರವೂ ಸೇರಿದೆ. “ಬಟ್‌ ಐ ಯಾಮ್‌ ನಾಟ್‌ ಫೀಮೇಲ್‌’ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಅಲ್ಲಿಗೆ ಇದೊಂದು ಮತ್ತೂಂದು ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ.

“ನಾನು ಗರ್ಭಿಣಿ’, “ನಾನು ಹೆಂಗಸಲ್ಲ …’ ಅಂತ ಹೇಳಿದರೆ ಹೇಗಾಗಬೇಡ. ಇಲ್ಲಿ ಅತೀ ಭಾವನಾತ್ಮಕ ಅಂಶಗಳನ್ನು ಸೇರಿಸಿ ಹೀಗೊಂದು ಸಿನಿಮಾಗೆ ಕೈ ಹಾಕಿದ್ದಾರೆ ಸಂಜಯ್‌. ಕಳೆದ ಒಂದು ದಶಕದಿಂದಲೂ ಚಿತ್ರರಂಗದಲ್ಲಿರುವ ಸಂಜಯ್‌ಗೆ, ಹೊಸ ಬಗೆಯ ಕಥೆ ಮಾಡಿ, ಜನರ ಮುಂದಿಡಬೇಕೆಂಬ ಬಯಕೆ, “ಗರ್ಭಿಣಿ’ ಮೂಲಕ ಈಡೇರುತ್ತಿದೆ. ಅಂದಹಾಗೆ, ಸಂಜಯ್‌ ಈ ಕಥೆಗಾಗಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಕೆಲ ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ 10ರ ಬಾಲಕ ಒಂದು ಮಗುವಿಗೆ ಜನ್ಮ ನೀಡಿದ್ದಾನೆ, ಅಲ್ಲದೆ ಆಸ್ಟ್ರೇಲಿಯಾದಲ್ಲಿ 52 ವರ್ಷದ ಗಂಡಸು ಗರ್ಭಿಣಿಯಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಿದ ಸಂಜಯ್‌, ಅಂತಹ ಸೂಕ್ಷ ವಿಷಯಗಳ ಕುರಿತ ಸಿನಿಮಾ ಏಕೆ ಮಾಡಬಾರದು ಅಂತಂದುಕೊಂಡು ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಅಂದಹಾಗೆ, ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹೊರಹಾಕದ ಸಂಜಯ್‌, ಸಿನಿಮಾದಲ್ಲೇ ಎಲ್ಲವನ್ನೂ ನೋಡಬೇಕು ಎಂದು ಜಾರಿಕೊಳ್ಳುತ್ತಾರೆ. ಈ ಚಿತ್ರಕ್ಕೆ ಪ್ರತಾಪ್‌ ನಾರಾಯಣ್‌ ನಾಯಕರಾಗಿದ್ದಾರೆ. ಅವರಿಲ್ಲಿ ಕುಂಚಕಲಾವಿದರಾಗಿ ನಟಿಸುತ್ತಿದ್ದಾರೆ. ಅರ್ಪಿತಾ ಗೌಡ ನಾಯಕಿ. ಉಳಿದಂತೆ ಮಾಸ್ಟರ್‌ ವಿನಯ್‌ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು, ಮಹಾಬಲೇಶ್ವರ, ಮೈಸೂರು, ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿಗೆ ಎಸ್‌. ಪ್ರದೀಪ್‌ ವರ್ಮಾ ಸಂಗೀತ ನೀಡುತ್ತಿದ್ದಾರೆ. ಅರಿವುಪುಗಳ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಮೇರಿಕಾದ ಕನ್ನಡತಿ ಡಾ.ಟಿ.ಅಕ್ಷತಾ ರಾಮಚಂದ್ರ ರಾವ್‌ ನಿರ್ಮಾಪಕರು. ಅವರಿಗೆ ಹೆಚ್‌.ಟಿ.ಪಾರ್ವತಿ ನಿರ್ಮಾಣದಲ್ಲಿ ಸಾಥ್‌ ಕೊಡುತ್ತಿದ್ದಾರೆ.

-ಉದಯವಾಣಿ

Comments are closed.