ಬೆಂಗಳೂರು: ಹೊಸ ಪಕ್ಷದ ಘೋಷಣೆ ವೇಳೆ ಅಭಿಮಾನಿಗಳನ್ನು ಪ್ರಚೋದಿಸುವ ಭರದಲ್ಲಿ ರಾಜಕಾರಣಿಗಳು ಹಣ ನೀಡಿದರೇ ಸ್ವೀಕರಿಸಿ ಆದರೆ ನಿಮಗೆ ಇಷ್ಟ ಬಂದವರಿಗೆ ಮಾತ್ರ ಮತ ಹಾಕಿ ಎಂದು ಹೇಳಿದ್ದ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ವನ್ನು ಘೋಷಿಸಿದ್ದರು. ನಂತರ ಭಾಷಣ ಮಾಡಿದ್ದ ಉಪೇಂದ್ರ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್ ನಾಗೇಶ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಗೇಶ್ ಅವರು ಮತದಾರರಿಗೆ ಪ್ರಚೋದನೆ ನೀಡುವ ಮೂಲಕ ಅವರಿಗೆ ಆಮಿಷ ಒಡ್ಡಿದ್ದಾರೆ. ಭ್ರಷ್ಟಾಚಾರಕ್ಕೆ ಪ್ರೇರೆಪಿಸಿದ್ದಾರೆ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.