ಕರ್ನಾಟಕ

ರಾಜ್ಯೋತ್ಸವಕ್ಕಿಂತ ಟಿಪ್ಪು ಜಯಂತಿಯೇ ಮುಖ್ಯ: ಅಮಿತ್ ಶಾ

Pinterest LinkedIn Tumblr


ಬೆಂಗಳೂರು: ಕೇಂದ್ರ ಸರಕಾರ ರಾಜ್ಯಕ್ಕೆ ಕೊಟ್ಟ ಅನುದಾನವನ್ನು ಜನತೆಗೆ ತಲುಪಿಸದ ಸಿದ್ದರಾಮಯ್ಯ ಸರಕಾರ ದೇಶದ ಅತಿ ಭ್ರಷ್ಟ ಸರಕಾರ. ಐಟಿ ಡೈರಿ, ಐಟಿ ದಾಳಿ, ಸ್ಟೀಲ್ ಬ್ರಿಡ್ಜ್ ಅವ್ಯವಹಾರದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರಿಗೆ ನವೆಂಬರ್ 1ರ ರಾಜ್ಯೋತ್ಸವಕ್ಕಿಂತ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುವಲ್ಲೇ ಹೆಚ್ಚು ಆಸಕ್ತಿ ಇದೆ ಎಂದು ಅಮಿತ್ ಶಾ ಸಿದ್ದರಾಮಯ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ 75 ದಿನಗಳ ಬಿಜೆಪಿ ‘ಪರಿವರ್ತನಾ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅಮಿತ್ ಶಾ, ಟಿಪ್ಪು ಜಯಂತಿ ಆಚರಿಸುವುದರಿಂದ ರಾಜ್ಯದ ಜನತೆಗೆ ಯಾವುದೇ ಪ್ರಯೋಜನ ಇಲ್ಲ. ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆಲ್ಲಾ ಉತ್ತಮ ಆಡಳಿತ ನೀಡಿದ್ದೇವೆ. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮಾತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ. ಕೇಂದ್ರ ಸರಕಾರ 2 ಲಕ್ಷ ಕೋಟಿಗೂ ಅಧಿಕ ಅನುದಾನ ನೀಡಿದೆ. ಅದರಲ್ಲಿ ಕೇವಲ 1 ಲಕ್ಷ ಕೋಟಿ ಹಣದ ಲೆಕ್ಕ ತೋರಿಸಿ ಇನ್ನೊಂದು ಲಕ್ಷ ಕೋಟಿ ಏನು ಮಾಡಿದರು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಆಡಳಿತದಲ್ಲಿ ಬಿಜೆಪಿ ಮತ್ತು ಆರ್‌ಎಸ್ಎಸ್ ಕಾರ್ಯಕರ್ತರ ಕೊಲೆಯಾಗಿದೆ. ಇದಕ್ಕೇನು ಹೇಳುತ್ತೀರಿ ಎಂದು ಸಿದ್ದರಾಮಯ್ಯ ಸರಕಾರವನ್ನು ಪ್ರಶ್ನಿಸಿದರು ಶಾ. ಬಿಜೆಪಿ ಪರಿವರ್ತನಾ ರ‍್ಯಾಲಿ ಕೇವಲ ಮುಖ್ಯಮಂತ್ರಿಯನ್ನು ಬದಲಿಸುವುದು ಮಾತ್ರ ಅಲ್ಲ. ಇಲ್ಲಿನ ಕೃಷಿ, ಕಾನೂನು ಸುವವ್ಯಸ್ಥೆ, ಯುವಕರ ಸ್ಥಿತಿಗತಿಯನ್ನು ಬದಲಿಸುವುದು ಎಂದಿದ್ದಾರೆ.

Comments are closed.