ಮನೋರಂಜನೆ

ಮೈಸೂರಿನಲ್ಲಿ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡಿ ಗಾಯನಲೋಕಕ್ಕೆ ವಿದಾಯ ಹೇಳಿದ ಎಸ್‌. ಜಾನಕಿ

Pinterest LinkedIn Tumblr

ಮೈಸೂರು: ಆರು ದಶಕಗಳಿಂದ ದಕ್ಷಿಣ ಭಾರತದ ಸಂಗೀತಪ್ರಿಯರ ಮನಸೂರೆಗೊಂಡಿದ್ದ ಗಾಯಕಿ ಎಸ್‌.ಜಾನಕಿ ಅವರು ಶನಿವಾರ ಮೈಸೂರಿನಲ್ಲಿ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡುವುದರೊಂದಿಗೆ ಗಾಯನ ಲೋಕಕ್ಕೆ ವಿದಾಯ ಹೇಳಿದರು.

ಚಲನಚಿತ್ರ ಗಾಯನದಿಂದ ಕಳೆದ ವರ್ಷ ವಿರಮಿಸಿದ್ದ ಅವರು, ತಮ್ಮ ಕೊನೆಯ ವೇದಿಕೆ ಕಾರ್ಯಕ್ರಮವನ್ನು ಸಾಂಸ್ಕೃತಿಕ ನಗರಿಯಲ್ಲಿ ನೀಡಿದ್ದು ವಿಶೇಷ. ಎಸ್‌.ಜಾನಕಿ ಚಾರಿಟಬಲ್‌ ಟ್ರಸ್ಟ್‌ ಈ ಕಾರ್ಯಕ್ರಮ ಆಯೋಜಿಸಿತ್ತು.

‘ನಾನು ಕೊನೆಯ ಕಾರ್ಯಕ್ರಮ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ವರದಿಮಾಡಿವೆ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಇನ್ನು ಮುಂದೆ ಸಾರ್ವಜನಿಕ ವೇದಿಕೆಯಲ್ಲಿ ಹಾಡುವುದಿಲ್ಲ. ಇದೇ ಕೊನೆಯದ್ದು’ ಎಂದು ಹೇಳಿ ಭಾವುಕರಾದರು.

‘60 ವರ್ಷಗಳ ಸುದೀರ್ಘ ಪಯಣ ಇಲ್ಲಿ ಕೊನೆಗೊಂಡಿದೆ. ನನ್ನ ಮೇಲೆ ಪ್ರೀತಿಯಿಟ್ಟು ಬಂದಿರುವ ಎಲ್ಲರಿಗೂ ಚಿರಋಣಿ’ ಎಂದರು. 79ರ ಹರೆಯದ ಅವರು ಎರಡು ಗಂಟೆಗೂ ಅಧಿಕ ಹೊತ್ತು ನಿಂತುಕೊಂಡೇ ಹಾಡಿದರು. ಹಾಡಿನ ನಡುವೆ ಹಾಸ್ಯ ಚಟಾಕಿಗಳನ್ನು ಹರಿಯಬಿಟ್ಟು ತಮ್ಮಲ್ಲಿರುವ ಹುಮ್ಮಸ್ಸನ್ನು ತೋರಿಸಿದರು.

ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ, ತಮಿಳುನಾಡು, ಕೇರಳದಿಂದಲೂ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ‘ಗಜವದನ ನೀನೆ ಗುಣಸಾಗರ’, ‘ಪೂಜಿಸಲೆಂದೇ ಹೂಗಳ ತಂದೆ’, ‘ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ’ ಹಾಡುಗಳ ಮೂಲಕ ನೆರೆದವರನ್ನು ರಂಜಿಸಿದರು.

ನಟಿಯರಾದ ಭಾರತಿ ವಿಷ್ಣುವರ್ಧನ್‌, ಜಯಂತಿ, ಹೇಮಾ ಚೌಧರಿ, ನಟ ಶಿವರಾಂ ಹಾಜರಿದ್ದರು. ‘ಜಾನಕಿ ಅವರ ಸುಮಧುರ ಹಾಡುಗಳಿಂದಾಗಿ ನಮ್ಮ ಸಿನಿಮಾಗಳು ಯಶಸ್ಸು ಗಳಿಸಿದವು’ ಎಂದು ಭಾರತಿ, ಜಯಂತಿ ಹೇಳಿದರು.

Comments are closed.