ಕರಾವಳಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮಂಗಳೂರಿಗೆ ಆಗಮನ :ಕೆಲವೇ ಕ್ಷಣಗಳಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ದೇವರ ದರ್ಶನ

Pinterest LinkedIn Tumblr

 

ಮಂಗಳೂರು: ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ವಿಶೇಷ ವಿಮಾನದ ಮೂಲಕ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿಯವರನ್ನು ಮೇಯರ್‌ ಕವಿತಾ ಸನಿಲ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ್‌ಕುಮಾರ್‌ ಹಾಗೂ ಬಿಜೆಪಿಯ ಇತರ ಹಿರಿಯ ನಾಯಕರು ಆತ್ಮೀಯವಾಗಿ ಬರ ಮಾಡಿಕೊಂಡರು. ಇದೇ ವೇಳೆ ರಾಜ್ಯ ಸರಕಾರದ ಪರವಾಗಿ ಸಚಿವ ಯು.ಟಿ.ಖಾದರ್ ಪ್ರಧಾನಿಯವರನ್ನು ಸ್ವಾಗತಿಸಿದರು.

ಬಳಿಕ ಪ್ರಧಾನಿಯವರು ಮಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ಧರ್ಮಸ್ಥಳಕ್ಕೆ ಪ್ರಯಾಣಿಸಿದರು. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ದೇವರ ದರ್ಶನ ಮಾಡಲಿದ್ದಾರೆ.

ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಧರ್ಮಸ್ಥಳ ಹಾಗೂ ಉಜಿರೆ ಸಜ್ಜುಗೊಂಡಿದೆ. 800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳ ದೇವಸ್ಥಾನಕ್ಕೆ ಇದೇ ಮೊದಲ ಬಾರಿಗೆ ದೇಶದ ಪ್ರಧಾನಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಲಿರುವರು.

ಧರ್ಮಸ್ಥಳ ದೇಗುಲದ ಒಳಪ್ರವೇಶಿಸಬೇಕಿದ್ದರೆ ಸಂಪ್ರದಾಯ ಪ್ರಕಾರ ಅಂಗಿ, ಬನಿಯನ್ ತೆಗೆಯಬೇಕು. ಹೀಗಾಗಿ ಪ್ರಧಾನಿಯವರು ಶಲ್ಯ ಮತ್ತು ಪಂಚೆ ಉಟ್ಟು ಶ್ರೀ ಮಂಜುನಾಥ ದೇವರ ದರ್ಶನ ಪಡೆಯಲಿದ್ದಾರೆ.. ಅರ್ಧ ಗಂಟೆ ಕಾಲ ಧರ್ಮಸ್ಥಳ ದೇಗುಲದಲ್ಲಿ ಮೋದಿ ಪೂಜೆ ಮಾಡಲಿದ್ದು, ಮಂಜುನಾಥನ ದರ್ಶನ ಪಡೆದು ಮಹಾಗಣಪತಿ, ಅಮ್ಮನವರ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.

ಉಜಿರೆಗೆ ಹರಿದು ಬರುತ್ತಿರುವ ಜನಸಾಗರ :

ಬಳಿಕ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಸಮಾವೇಶದಲ್ಲಿ ಪ್ರಧಾನಿಯವರು ಪಾಲ್ಗೊಳ್ಳಲಿದ್ದಾರೆ. ಜನಧನ್ ಯೋಜನೆಯಡಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು 12 ಲಕ್ಷಕ್ಕೂ ಹೆಚ್ಚು ಖಾತೆ ತೆರೆದಿದ್ದು, ಸಮಾವೇಶದಲ್ಲಿ ಮೋದಿ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಉಜಿರೆ ಸಿದ್ದವಾಗಿದ್ದು, ಪ್ರಧಾನಿ ಭಾಗವಹಿಸುವ ಕಾರ್ಯಕ್ರಮಕ್ಕಾಗಿ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಲ್ಲಾ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ.ಸಾವಿರಾರು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದತ್ತ ಹರಿದು ಬರುತ್ತಿದ್ದಾರೆ.ಬೆಳಿಗ್ಗೆ ಎಂಟು ಗಂಟೆಯಿಂದಲೇ ಜನರು ಕ್ರೀಡಾಂಗಣದತ್ತ ಬರಲಾರಂಭಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಲು ಆಗಮಿಸುತ್ತಿದ್ದಾರೆ.ರಾಜ್ಯದ ವಿವಿಧ ಭಾಗಗಳಿಂದ ಬಿಜೆಪಿಯ ಹಿರಿಯು ಮುಖಂಡರು ಈಗಾಗಲೇ ಉಜಿರೆ ತಲುಪಿದ್ದಾರೆ. ಪ್ರಧಾನಿಯಾದ ಬಳಿಕ ಜಿಲ್ಲೆಗೆ ಮೊದಲ ಭೇಟಿ ನೀಡಲಿರುವ ಮೋದಿ, ಬೆಳ್ತಂಗಡಿ ತಾಲೂಕಿಗೆ ಆಗಮಿಸುವ ಮೊದಲ ಪ್ರಧಾನಿ ಕೂಡಾ ಆಗಿದ್ದಾರೆ.

60 ಸಾವಿರ ಆಸನ : ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿರೀಕ್ಷೆ

ಸಮಾರಂಭದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸುವ ನಿರೀಕ್ಷೆಯಿದ್ದು, ಇಡೀ ಕ್ರೀಡಾಂಗಣದಲ್ಲಿ ಸುಮಾರು 60 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ.ಹನ್ನೆರಡು ಬ್ಲಾಕ್ಗಳನ್ನು ಮಾಡಲಾಗಿದ್ದು, ಪ್ರತಿ ಬ್ಲಾಕ್ಗಳಲ್ಲೂ ತಲಾ ಐದು ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಕ್ರೀಡಾಂಗಣದ ಪ್ರವೇಶಕ್ಕೆ ನೂಕು ನುಗ್ಗಲು ಉಂಟಾಗದಿರಲು 40 ಕಡೆಗಳಲ್ಲಿ ತಪಾಸಣಾ ವ್ಯವಸ್ಥೆಯನ್ನು ಮಾಡಲಾಗಿದೆ.

ಬಿಗಿ ಭದ್ರತೆ :

ಧರ್ಮಸ್ಥಳದಲ್ಲಿ ಹೆಲಿಪ್ಯಾಡ್ ಅನ್ನು ಸಜ್ಜುಗೊಳಿಸಲಾಗಿದ್ದು, ಅದರ ನಿಯಂತ್ರಣವನ್ನು ಪೊಲೀಸರು ವಹಿಸಿಕೊಂಡಿದ್ದಾರೆ. ಎಸ್ಪಿಜಿಯ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಪ್ರಧಾನ ಮಂತ್ರಿಯ ಪ್ರಯಾಣಕ್ಕಾಗಿ ಈಗಾಗಲೇ ನಾಲ್ಕು ಅತ್ಯಾಧುನಿಕ ಕಾರುಗಳನ್ನು ಧರ್ಮಸ್ಥಳಕ್ಕೆ ತರಲಾಗಿದೆ.

ಸ್ಥಳದಲ್ಲಿ 60 ಅಧಿಕಾರಿಗಳ ಸಹಿತ ಎಸ್ಪಿಜಿ ತಂಡ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಪೊಲೀಸ್ ಪಡೆಯ ಸುಮಾರು 2,500 ಸಿಬ್ಬಂದಿ ಉಜಿರೆಗೆ ಆಗಮಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, 9 ಎಸ್ಪಿಗಳು, 22 ಡಿವೈಎಸ್ಪಿ, 43 ಇನ್ಸ್ಪೆಕ್ಟರ್, 116 ಎಸ್ಸೈ, ಹಾಗೂ ಸಿಬ್ಬಂದಿ ವರ್ಗ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಈಗಾಗಲೇ ಉಜಿರೆ, ಧರ್ಮಸ್ಥಳ ರಸ್ತೆಯ ಎಲ್ಲೆಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯರಸ್ತೆಗೆ ಸೇರುವ ಎಲ್ಲ ರಸ್ತೆಗಳಲ್ಲೂ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು ನಾಳೆ ಬೆಳಗ್ಗೆ 9 ಗಂಟೆಯ ಬಳಿಕ ಎಲ್ಲ ರಸ್ತೆಗಳನ್ನೂ ಮುಚ್ಚಲಾಗುತ್ತದೆ. ಪ್ರಧಾನಿಯವರು ತೆರಳಿದ ಬಳಿಕವಷ್ಟೇ ಈ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಲಿದೆ. ಧರ್ಮಸ್ಥಳದಿಂದ ಉಜಿರೆಯವರೆಗೆ ರಸ್ತೆಬದಿಯಲ್ಲಿ ಯಾರೂ ವಾಹನಗಳನ್ನು ನಿಲ್ಲಿಸದಿರುವಂತೆ ಸೂಚನೆ ನೀಡಲಾಗಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿಯೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದರಾದ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಶಾಸಕ ಕೆ.ವಸಂತ ಬಂಗೇರ ಸೇರಿದಂತೆ ಏಳು ಮಂದಿ ಮಾತ್ರ ಉಪಸ್ಥಿತರಿರುವರು.

Comments are closed.