ಮನೋರಂಜನೆ

ಸೂಪರ್‌ ಹಿಟ್‌ ‘ಡಿಡಿಎಲ್‌ಜೆ’ ಬಿಡುಗಡೆಯಾಗಿ ಇಂದಿಗೆ 22 ವರ್ಷ!

Pinterest LinkedIn Tumblr


ಬಾಲಿವುಡ್‌ನ ಎವರ್‌ಗ್ರೀನ್‌ ಚಿತ್ರಗಳಲ್ಲಿ ಶಾರುಖ್‌ ಖಾನ್‌ ಮತ್ತು ಕಾಜೋಲ್‌ ಅಭಿನಯದ ‘ದಿಲ್‌ವಾಲೆ ದುಲ್ಹನಿಯಾ ಲೇಜಾಯೆಂಗೆ’ ಕೂಡ ಒಂದು. ಸಿನಿ ರಸಿಕರ ಮನದಲ್ಲಿ ಅಚ್ಚಳಿಯದ ಮುದ್ರೆಯನ್ನು ಒತ್ತಿರುವ ಈ ಚಿತ್ರ ಇಂದಿಗೆ ಬಿಡುಗಡೆಯಾಗಿ 22 ವರ್ಷಗಳಾಯಿತು.

ಹೌದು, ಅಕ್ಟೋಬರ್‌ 20, 1995ರಂದು ರಾಜ್‌ ಮತ್ತು ಸಿಮ್ರನ್‌ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದರು. ಅದರಲ್ಲೂ 90ರ ದಶಕದ ಮಕ್ಕಳಿಗೆ ಈ ಚಿತ್ರ ಹಾಟ್‌ ಫೇವರಿಟ್‌ ಎಂದರೆ ತಪ್ಪಾಗಲಾರದು. ಚಿತ್ರದಲ್ಲಿ ಕಿಂಗ್‌ ಖಾನ್‌ ‘ರಾಜ್‌’ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದರೆ, ಸಿಮ್ರನ್‌ ಪಾತ್ರದ ಮೂಲಕ ಕಾಜೋಲ್‌ ಮೋಡಿ ಮಾಡಿದರು. ಮುಂಬಯಿಯ ಮರಾಠಾ ಮಂದಿರದಲ್ಲಿ ಸತತ 20 ವರ್ಷಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ಇತಿಹಾಸ ಬರೆದ ಚಿತ್ರವಿದು.

ಸತತ 1000ಕ್ಕೂ ಹೆಚ್ಚು ವಾರಗಳ ಕಾಲ ಬೆಳ್ಳಿ ತೆರೆಯಲ್ಲಿ ವಿಜೃಂಭಿಸಿದ ನಟ ಶಾರುಖ್ ಖಾನ್ ಹಾಗೂ ಕಾಜೋಲ್ ಜೋಡಿಯ ಈ ಸಿನಿಮಾ, ‘ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ’ ಎಂಬ ಸಂದೇಶ ಸಾರಿದ್ದು ಸುಳ್ಳಲ್ಲ. ಅಂದಹಾಗೆ ಈ ಚಿತ್ರಕ್ಕೆ ಆದಿತ್ಯ ಚೋಪ್ರಾ ಆ್ಯಕ್ಷನ್‌ ಕಟ್‌ ಹೇಳಿದ್ದರು. ಇನ್ನು ಬಾಲಿವುಡ್‌ ಜಗತ್ತಿನ ದಿಗ್ಗಜ ಯಶ್‌ ರಾಜ್‌ ಈ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದರು.

ಹಿಂದಿಯ ‘ಶೋಲೆ’ ಚಿತ್ರ ಮುಂಬಯಿನ ಮಿನರ್ವ ಚಿತ್ರಮಂದಿರದಲ್ಲಿ 5 ವರ್ಷಗಳ ಕಾಲ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಡಿಡಿಎಲ್‌ಜೆ ಮುರಿದಿದ್ದು ಈಗ ಇತಿಹಾಸ.

Comments are closed.