ಮನೋರಂಜನೆ

‘ಪುಟ್ಟಗೌರಿ’ ಟ್ರೋಲ್‌ಗೆ ಆ ಸೀರಿಯಲ್ ಡೈರೆಕ್ಟರ್ ಏನಂತಾರೆ ಗೊತ್ತಾ?

Pinterest LinkedIn Tumblr


ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಗೊತ್ತೇ ಇದೆ. ಏನೇ ಮಾಡಿದರೂ ಪುಟ್ಟಗೌರಿ ಸಾಯುತ್ತಿಲ್ಲ. ಅಂದರೆ ನಿರ್ದೇಶಕರು ಪುಟ್ಟಗೌರಿಯನ್ನು ಸಾಯಿಸದೆ ವೀಕ್ಷಕರನ್ನು ಸತಾಯಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ದಯವಿಟ್ಟು ಪುಟ್ಟಗೌರಿಗೆ ದಯಾಮರಣ ಕೊಡಿಸಿ ಎಂದು ವಿನಂತಿಸಿಕೊಂಡಿದ್ದರು ಟ್ರೋಲಿಗರು.

ಗುಂಡಿ ತೋಡಿ ಮುಚ್ಚಿದ್ರು ಸಾಯ್ಲಿಲ್ಲ, ಕ್ಯಾನ್ಸರ್ ಬಂದ್ರು ಸಾಯ್ಲಿಲ್ಲ, ಬೆಟ್ಟದಿಂದ ದೂಡಿದ್ರು ಸಾಯ್ಲಿಲ್ಲ, ಹುಲಿನೂ ಏನು ಮಾಡ್ಲಿಲ್ಲ, ಹಾವುನೂ ಏನು ಮಾಡ್ಲಿಲ್ಲ. ಪಾಪ ಗೌರಿಗೆ ದಯಾಮರಣ ಕಲ್ಪಿಸಿ ಎಂದು ಟ್ರೋಲ್ ಸುರಿಮಳೆಯಾಯಿತು. ಈಗಲೂ ಟ್ರೋಲ್‌ಗಳಲ್ಲಿ ಪುಟ್ಟಗೌರಿಯೇ ಹಾಟ್ ಕೇಕ್. ಈ ಬಗ್ಗೆ ‘ಪುಟ್ಟಗೌರಿ ಮದುವೆ’ ಧಾರಾವಾಹಿ ನಿರ್ದೇಶಕ ರಾಮ್ ಜಿ ಅವರು ಮಾತನಾಡಿದ್ದಾರೆ.

ತಮ್ಮ ಧಾರಾವಾಹಿಯನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ಅವರಿಗೇನು ಬೇಸರ ಇಲ್ಲವಂತೆ. ಪುಟ್ಟಗೌರಿಯನ್ನು ಟ್ರೋಲ್ ಮಾಡುತ್ತಿರುವುದು ಇದೇ ಮೊದಲಲ್ಲ. ಇದು ನಾಲ್ಕನೇ ಸಲ ಈ ರೀತಿ ಮಾಡುತ್ತಿರುವುದು. ಈ ಧಾರಾವಾಹಿಯನ್ನು ತಾನು ಮನರಂಜನೆ ದೃಷ್ಟಿಯಿಂದ ಮಾಡುತ್ತಿದ್ದೇನೆ ಹೊರತು ಕೆಲವು ಬುದ್ಧಿಜೀವಿಗಳಿಗಾಗಿ ಅಲ್ಲ ಎಂದಿದ್ದಾರೆ.

ಪುಟ್ಟಗೌರಿಯನ್ನು ಬೆಟ್ಟದಿಂದ ದೂಡಿದರೂ ಸಾಯಲಿಲ್ಲವಲ್ಲ. ಒಂಚೂರು ಮೇಕಪ್ ಹಾಳಾಗಲ್ಲ. ಹಾವು, ಹುಲಿ ಸಹ ಏನೂ ಮಾಡಕ್ಕಾಗಲ್ಲ. ಇಲ್ಲಿ ಲಾಜಿಕ್ ಮಿಸ್ ಆಗಿದೆ. ಈ ಬಗ್ಗೆ ಏನು ಹೇಳುತ್ತೀರ ಎಂದಿರುವುದಕ್ಕೆ ರಾಮ್ ಜಿ ಮಾತನಾಡುತ್ತಾ, ‘ಇದೊಂದು ದೃಶ್ಯ ಮಾಧ್ಯಮ. ನಾಯಕಿಯನ್ನು ಚೆಂದ ತೋರಿಸಬೇಕಾಗುತ್ತದೆ. ಈ ಧಾರಾವಾಹಿಯನ್ನು ಹೊರಗಡೆ ಚಿತ್ರೀಕರಿಸುವುದರಿಂದ ಸೀರೆ ಹಾಳಾಗದಂತೆ ಎಚ್ಚರ ವಹಿಸಿ ಚಿತ್ರೀಕರಿಸಬೇಕಾಗುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಇದೆಲ್ಲಾ ಆಗದ ಕೆಲಸ. ಹಾಗಾಗಿ ನಾಯಕಿಗೆ ಮೇಕಪ್ ಹಾಳಾಗದಂತೆ ತೋರಿಸಬೇಕಾಗುತ್ತದೆ’ ಎಂದಿದ್ದಾರೆ.

ಇನ್ನು ಪುಟ್ಟಗೌರಿಯನ್ನು ಕಾಡಿನ ಚಿತ್ರೀಕಣದಲ್ಲಿ ಬರಿಗಾಲಲ್ಲಿ ನಡೆಸಲು ಸಾಧ್ಯವಾಗಲ್ಲ. ಇದರಿಂದ ಹೀರೋಯಿನ್‌ ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಚಪ್ಪಲಿ ತೊಡುವಂತೆ ಹೇಳಿದ್ದೇವೆ. ಇನ್ನು ಹಾವು, ಹುಲಿ ಬಂದರೂ ಪುಟ್ಟಗೌರಿಗೆ ಏನು ಆಗಲ್ಲ ಯಾಕೆ ಎಂದರೆ, ಆಧ್ಯಾತ್ಮಿಕದ ಕಡೆಗೆ ಹೊರಳುತ್ತಾರೆ ರಾಮ್ ಜಿ. ‘ಪುರಾಣಗಳಲ್ಲಿ ಒಳ್ಳೆಯವರಿಗೆ ಹಾವು, ಹುಲಿ ಏನೂ ಮಾಡಿದ್ದಿಲ್ಲ. ನಮ್ಮ ಪುಟ್ಟಗೌರಿ ಸಹ ಅಷ್ಟೇ. ಅವರು ಒಳ್ಳೆಯವರು. ಹಾಗಾಗಿ ಅವು ಏನೂ ಮಾಡಲ್ಲ’ ಎನ್ನುತ್ತಾರೆ.

ಈ ಧಾರಾವಾಹಿ ಬಗ್ಗೆ ನೆಗಟೀವ್ ಕಾಮೆಂಟ್ ಮಾಡುತ್ತಿರುವವರಲ್ಲಿ ಕೆಲ ವರ್ಗದ ಜನ ಹಾಗೂ ಮುಖ್ಯವಾಗಿ ಯುವಕರು ಇದ್ದಾರೆ. ಇವರೇ ಟ್ರೋಲ್ ಪೇಜ್‍ಗಳನ್ನು ಸೃಷ್ಟಿಸುತ್ತಿರುವವರು. ಆದರೆ ರೆಗ್ಯುಲರ್ ವೀಕ್ಷಕರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾಕೆಂದರೆ ಅವರಿಗೆ ಅಲ್ಲಿನ ಭಾವನೆಗಳು ಅರ್ಥವಾಗುತ್ತಿವೆ. ಒಂದು ವೇಳೆ ಅವರಿಗೆ ಇಷ್ಟವಾಗದೆ ಇದ್ದರೆ ಈ ಧಾರಾವಾಹಿ 5 ವರ್ಷಗಳ ಕಾಲ ಮುಂದುವರೆಯುತ್ತಿರಲಿಲ್ಲ ಎಂದಿದ್ದಾರೆ ರಾಮ್ ಜಿ.

Comments are closed.