ಮನೋರಂಜನೆ

ರಸ್ತೆ ಬದಿಯಲ್ಲಿ ಕ್ಯಾಂಟಿನ್ ಆರಂಭಿಸಿದ ಕಿರುತೆರೆ ನಟಿಯ ಹಿಂದಿದೆ ರೋಚಕ ಕಥೆ !

Pinterest LinkedIn Tumblr

ನವದೆಹಲಿ: ಸಿನಿಮಾ, ಧಾರಾವಾಹಿ ನಟ-ನಟಿಯರು ಎಂದರೇ ಸಾಕು ವೈಭವಯುತ, ಅಡಂಬರದ ಜೀವನ ನಡೆಸುತ್ತಾರೆ ಎನ್ನುವ ಅಭಿಪ್ರಾಯ ಜನರಲ್ಲಿ ಇದೆ. ಆದರೆ ಮಲೆಯಾಳಂ ನಟಿಯೊಬ್ಬರು ಮಗನ ಶಿಕ್ಷಣಕ್ಕಾಗಿ ಕ್ಯಾಂಟೀನ್ ಓಪನ್ ಮಾಡಿ ಈಗ ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಮಲೆಯಾಳಂ ಧಾರಾವಾಹಿಗಳಲ್ಲಿ ಕವಿತಾ ಲಕ್ಷ್ಮೀ ಬಹಳ ಪ್ರಸಿದ್ಧ ನಟಿ. ಆದರೆ ಅವರ ಜೀವನದಲ್ಲಿ ಈಗ ಆರ್ಥಿಕ ಕಷ್ಟ ಎದುರಾಗಿದ್ದು ಇದನ್ನು ಮೆಟ್ಟಿನಿಲ್ಲಲು ಹೈವೇ ಪಕ್ಕದಲ್ಲಿ ಕ್ಯಾಂಟಿನ್ ಆರಂಭಿಸಿದ್ದಾರೆ. ಇಂದಿಗೂ ಧಾರವಾಹಿಗಳಲ್ಲಿ ನಟಿಸುತ್ತಿರುವ ಇವರು ಸಂಜೆಯಾದರೆ ಸಾಕು, ಶೂಟಿಂಗ್ ಮುಗಿಸಿಕೊಂಡು ತಿರುವನಂತಪುರದ ಹೈವೇ ಪಕ್ಕದಲ್ಲಿ ದೋಸೆ ಕ್ಯಾಂಟಿನ್‍ನಲ್ಲಿ ಕೆಲಸ ಆರಂಭಿಸುತ್ತಾರೆ.

ಕವಿತಾ ಲಕ್ಷ್ಮೀ ತಮ್ಮ ಗಂಡನಿಂದ 13 ವರ್ಷಗಳ ಹಿಂದೆಯೇ ವಿಚ್ಚೇದನ ಪಡೆದಿದ್ದಾರೆ. ಈ ವೇಳೆ ತಮ್ಮ ಎರಡು ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ತಮ್ಮ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ತೀರ್ಮಾನಿಸಿ ಏಜೆಂಟ್ ಒಬ್ಬರ ಬಳಿ ತೆರಳಿದ್ದರು. ಏಜೆಂಟ್ ಅವರ ಮಗನನ್ನು ಇಂಗ್ಲೆಂಡ್ ನಲ್ಲಿ ಶಿಕ್ಷಣ ಕೊಡಿಸಲು ಮಾಹಿತಿ ನೀಡಿ ಅಲ್ಲಿಯೇ ಪಾರ್ಟ್ ಟೈಮ್ ಜಾಬ್ ಮಾಡಿ 10 ಪೌಂಡ್ ಹಣವನ್ನು ಗಂಟೆಗೆ ಪಡೆಯಲು ಸಾಧ್ಯ. ನಿಮ್ಮ ಮಗನ ಶಿಕ್ಷಣ ವೆಚ್ಚವನ್ನು ಆತನೆ ಸಂಪಾದಿಸಬಹುದು ಎಂದು ತಿಳಿಸಿದ್ದರು. ಇದರಂತೆ ಪ್ರಾರಂಭದಲ್ಲಿ 1 ಲಕ್ಷ ರೂ. ಹಣವನ್ನು ನೀಡಿ ಮಗನನ್ನು ಕಳುಹಿಸಿದ್ದರು.

ಆದರೇ ಅಲ್ಲಿ ತೆರಳಿದ ಮೇಲೆ ಏಜೆಂಟ್ ನೀಡಿದ್ದ ಮಾಹಿತಿ ಎಲ್ಲಾ ಸುಳ್ಳು ಎಂದು ತಿಳಿಯಿತು. ಪ್ರಸ್ತುತ ಕವಿತಾ ಅವರು ತಮ್ಮ ಮಗನ ಶಿಕ್ಷಣ ಪೂರ್ಣಗೊಳಿಸಲು ಬೇಕಾದ ಹಣವನ್ನು ಓದಗಿಸಲು ಕಷ್ಟಪಟ್ಟು ಕೆಲಸ ಮಾಡಲು ಆರಂಭಿಸಿದ್ದಾರೆ. ಪ್ರತಿ 6 ತಿಂಗಳಿಗೊಮ್ಮೆ ಅವರ ಮಗನ ಶಿಕ್ಷಣದ ಸೆಮಿಸ್ಟರ್ ಹಣವನ್ನು ಕಟ್ಟುವ ಅಗತ್ಯವಿದೆ. ಕ್ಯಾಂಟೀನ್ ಆರಂಭಿಸುವ ಮೊದಲು ಕವಿತಾ ಅವರು ಗ್ರಾನೈಟ್ ಶೋರೂಂ ತೆರೆದಿದ್ದರು. ಆದರೆ ಅದರಲ್ಲಿ ಹೆಚ್ಚಿನ ನಷ್ಟ ಉಂಟಾಗಿತ್ತು.

ಕವಿತಾ ರಸ್ತೆ ಪಕ್ಕ ಆರಂಭಿಸಿರುವ ಸ್ಟ್ರೀಟ್ ಕ್ಯಾಂಟಿನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಕವಿತಾ ಅವರ ದೃಢ ಮನಸ್ಸಿನ ಸಂಕಲ್ಪಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.